ಶನಿವಾರ, ಮಾರ್ಚ್ 31, 2012

ಕೊನೆಯ ನಗು ..


ಸುಬ್ಬಣ್ಣ ಎಂದಿನಂತೆ ಮಲ್ಲಿಗೆಪುರದ  ‘ಶ್ರೀ ವೆಂಕಟೇಶ್ವರ ಹೋಟೆಲ್’ ನ ಮರದ ಬೆಂಚಿನ ಮೇಲೆ ಕುಳಿತು ತನ್ನ ರಾಜಕೀಯ ಜ್ಞಾನ ಹಾಗೂ ಇತ್ತೀಚಿನ ರಾಜಕೀಯ ವಿದ್ಯಮಾನಗಳ ಬಗ್ಗೆ ಅಲ್ಲಿಗೆ ಬಂದವರಿಗೆಲ್ಲ ತನ್ನ ಉಪದೇಶ ನೀಡುತ್ತಿದ್ದ. ಅದು ಇಡೀ ಮಲ್ಲಿಗೆಪುರಕ್ಕೆ ಒಂದೇ ಹೋಟೆಲ್ ಆಗಿದ್ದರೂ ಅಲ್ಲಿಗೆ ಬರುತ್ತಿದ್ದವರು ಬೆರಳೆಣಿಕೆಯ ಜನ ಮಾತ್ರ. ಅದರಲ್ಲಿ ಸುಬ್ಬಣ್ಣ ಮಾತ್ರ  ಖಾಯಂ ಗಿರಾಖಿ. ಪಶ್ಚಿಮ ಘಟ್ಟದ ಇಳಿಜಾರಿನಲ್ಲಿ ಇರುವ ಮಲ್ಲಿಗೆಪುರದಲ್ಲಿ, ಆರಂಭದಲ್ಲಿ ಗುಡುಗು,ಮಿಂಚಿನೊಂದಿಗೆ ಆರ್ಭಟಿಸುತ್ತ ಆಗೊಮ್ಮೆ ಈಗೊಮ್ಮೆ ತುಂತುರು ಆಗಿ ಬೀಳುತ್ತಿದ್ದ ಮುಂಗಾರು ಮಳೆ, ಆಗಲೇ ಜೋರಾಗಿ ಬೀಳುವದಕ್ಕೆ ಪ್ರಾರಂಭವಾಗಿ ಎರಡು ಮೂರು ವಾರಗಳೇ ಕಳೆದಿದ್ದವು. ಆಗಲೇ ಊರಿನ ಗದ್ದೆಗಳಲ್ಲಿ ಭತ್ತದ ಬಿತ್ತನೆ ಆರಂಭವಾಗಿತ್ತು. ಊರಿನಲ್ಲಿ ಬಹುಪಾಲು ಮಂದಿಗೆ ಅಡಿಕೆ ತೋಟವೇ ಜೀವನೋಪಾಯವಾದ್ದರಿಂದ ಯಾರೂ ಭತ್ತದ ಗದ್ದೆಯ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ. ಈ ಸಾರ್ತಿ ಸ್ವಲ್ಪ ಅಗತ್ಯಕ್ಕಿಂತ ಜಾಸ್ತಿ ಮಳೆಯಿಂದಲೋ ಏನೋ ಮಲ್ಲಿಗೆಪುರ  ಹಾಗೂ ಅಕ್ಕ ಪಕ್ಕದ ಊರುಗಳಲ್ಲಿ ಅಡಿಕೆ ಮರಗಳಿಗೆ ಒಂದು ರೀತಿಯ ವಿಚಿತ್ರ ಕೊಳೆ ರೋಗ ಹರಡುತ್ತಿತ್ತು. ಗೊತ್ತಿರುವ ಎಲ್ಲಾ ಓಷಧಿಗಳನ್ನು, ರಾಸಾಯನಿಕ ಗಳನ್ನು ಅಡಿಕೆ ಕೊನೆಗಳಿಗೆ ಸಿಂಪಡಿಸಿದರೂ ಅಡಿಕೆ ಕಾಯಿ ರೋಗದಿಂದ ಕೊಳೆತು ನೆಲಕ್ಕೆ ಬೀಳುವದು ತಪ್ಪಲಿಲ್ಲ. ಊರಿನಲ್ಲೆಲ್ಲ ಇದರದ್ದೇ ಸುದ್ದಿ, ಚರ್ಚೆ. ಪ್ರತಿಯೊಬ್ಬರಲ್ಲೂ ಅಡಿಕೆ ರೋಗದ ಬಗ್ಗೆ ಒಂದೊಂದು ಅಭಿಪ್ರಾಯ ಇತ್ತಾದರೂ ಯಾರೂ ಒಬ್ಬರನ್ನೊಬ್ಬರು ಒಪ್ಪಲು ಸಿದ್ದರಿರಲಿಲ್ಲ.
ಆದರೆ ಇವತ್ತು ಯಾಕೋ ‘ಶ್ರೀ ವೆಂಕಟೇಶ್ವರ ಹೋಟೆಲ್’ ನಲ್ಲಿ ಎಂದಿನಂತಹ ವಾತಾವರಣ ಇರಲಿಲ್ಲ. ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದ ಕೆಲಸವಿಲ್ಲದೆ ಖಾಲಿ ಕೂತದ್ದರಿಂದಲೋ  ಅಥವಾ ಒಬ್ಬರು ಹೋದದ್ದನ್ನು ನೋಡಿ ಇನ್ನೊಬ್ಬರು ಹೋದದ್ದರಿಂದಲೋ ಏನೋ ಇವತ್ತು ಹೋಟೆಲ್ ತುಂಬಾ ಜನರಿದ್ದರು. ಊರಿನ ಮುಖ್ಯ ರಸ್ತೆಯ ಬದಿಯಲ್ಲಿ ಇದ್ದ ಹೋಟೆಲು ಇನ್ನೂ ನಿರ್ಮಾಣ ಹಂತದಲ್ಲಿರುವ ಕಟ್ಟಡ. ಒಂದು ವರ್ಷದ ಹಿಂದೆ ಮಲ್ಲಿಗೆ ಪುರದ ಸುತ್ತಮುತ್ತ ಯಾವುದೇ ಹೋಟೆಲ್ ಇಲ್ಲದ್ದನ್ನು ಗೊತ್ತುಮಾಡಿದ ರಾಮಣ್ಣ, ಘಟ್ಟದ ಕೆಳಗಿನಿಂದ ಬಂದು ಈ ಊರಲ್ಲಿ ಹೋಟೆಲ್ ದಂಧೆ ಶುರುಮಾಡಿದ್ದ. ಸುಬ್ಬಣ್ಣನ ರಸ್ತೆಯ ಬದಿಯ ಹಾಳುಬಿದ್ದ ಜಾಗ ಗುತ್ತಿಗೆಗೆ ಪಡೆದು, ಸುತ್ತಲೂ ನಾಲ್ಕು ದೊಡ್ಡ ಮರದ ಕಂಬ ನಿಲ್ಲಿಸಿ ಅದರ ಮಧ್ಯದಲ್ಲಿ ಅರ್ಧದಷ್ಟು ಎತ್ತರಕ್ಕೆ ಮಣ್ಣಿನ ಗೋಡೆ ಎಬ್ಬಿಸಿದ್ದ. ಹೋಟೆಲಿನ ಮೇಲೆ ಅಡಿಕೆ ಮರದಿಂದ ಛಾವಣಿ ಮಾಡಿ ತೆಂಗಿನ ಮರದ ಗರಿ ಹಾಗೂ ಅಡಿಕೆ ಮರದ ಸೋಗೆ ಯನ್ನು ಅದರ ಮೇಲೆ ಹೊದೆಸಿ, ಈಗ ಮಳೆ ಜೋರಾದ್ದರಿಂದ ಪೇಟೆಯಿಂದ ಪ್ಲಾಸ್ಟಿಕ್ ಶೀಟ್ ತರಿಸಿ ಮಾಡಿನ ಮೇಲೆ ನೀರು ಸೋರದಂತೆ ಹೊದೆಸಿದ್ದ. ಹೋಟೆಲ್ ಒಳಗೆ ನಾಲ್ಕಾರು ಮರದ ಬೆಂಚು, ಪ್ಲಾಸ್ಟಿಕ್ ಖುರ್ಚಿಯನ್ನು ಹಾಕಿ ಹೋಟೆಲನ್ನು ಒಂದು ಹಂತಕ್ಕೆ ತಂದಿದ್ದ. ಹೋಟೆಲಿಗೆ ಊರಿನವರು ತಿನ್ನುವುದಕ್ಕಿಂತ ಹರಟಲು ಹೆಚ್ಚಾಗಿ ಬರುತ್ತಿದ್ದರಿಂದ ರಾಮಣ್ಣನ ಆದಾಯವೂ ಅಷ್ಟಕ್ಕಷ್ಟೇ ಇತ್ತು. ಆದರೆ ಇವತ್ತು ಈಗಾಗಲೇ ಹೋಟೆಲಿನ ಬೆಂಚು, ಖುರ್ಚಿಗಳನ್ನೆಲ್ಲ ಸಾಧ್ಯವಿದ್ದಷ್ಟು ಊರಿನವರು ಆಕ್ರಮಿಸಿಕೊಂದಿದ್ದರಿಂದ ಸ್ವಲ್ಪ ತಡವಾಗಿ ಬಂದವರಿಗೆಲ್ಲ ಹೋಟೆಲಿನ ಮಣ್ಣಿನ ನೆಲವೇ ಗತಿ ಎಂಬಂತಾಯಿತು. ಆದದ್ದಾಗಲಿ ಅನ್ನುತ್ತ ಕೆಲವರು ತಮ್ಮ ಹೆಗಲ ಮೇಲಿದ್ದ ಮಳೆಯಲ್ಲಿ ಅಲ್ಪ ಸ್ವಲ್ಪ ಒದ್ದೆಯಾಗಿದ್ದ ಕೆಂಪಗಿನ ಟುವಾಲನ್ನು ನೆಲದ ಮೇಲೆ ಹಾಸಿ ಅದರ ಮೇಲೆ ಕುಳಿತರು. ಇನ್ನೂ ಕೆಲವರು ನೆಲದ ಮೇಲೆ ಕುಳ್ಳುವುದು ತಮಗೆ ಅವಮಾನವೆಂಬಂತೆ ಅಲ್ಲಿಯೇ ಮಣ್ಣಿನ ಗೋಡೆಗೆ ಒರಗಿ ನಿಂತರು. ಇನ್ನಷ್ಟು ಮಂದಿ ಅತ್ತಲಾಗಿ ಕುಳಿತುಕೊಳ್ಳಲೂ ಬಾರದೆ ಇತ್ತಲಾಗಿ ಒಂದು ಕಡೆ ನಿಲ್ಲದೆ ಈಗಾಗಲೇ ಒದ್ದೆಯಾಗಿದ್ದ ತಮ್ಮ ಉದ್ದ ಕಾವಿನ ಕೊಡೆಯಿಂದ ನೀರನ್ನು ಸುರಿಸುತ್ತಾ ಅತ್ತಿಂದಿತ್ತ ಓಡಾಡುತ್ತಿದ್ದರು.
ರಾಮಣ್ಣ ಒಮ್ಮೆಲೇ ಇಷ್ಟೊಂದು ಜನರನ್ನು ತನ್ನ ಹೋಟೆಲ್ ನಲ್ಲಿ ಮೊದಲ ಸಲ ನೋಡಿ ಗಾಬರಿಯಾಗದಿದ್ದರೂ ಬಂದ ಜನರಿಗೆ ಚಹಾ ತಿಂಡಿಗೆ ಏನು ಮಾಡಬೇಕೆಂದು ಗಾಬರಿಯಾದ. ಈಗಾಗಲೇ ಸಂಜೆಯಾದ್ದರಿಂದ ಬರಿ ಐದಾರು ಜನರಿಗೆ ಆಗುವಷ್ಟು ಮಾತ್ರ ಚಹಾ ಇತ್ತು. ಆವತ್ತು ಒಂದೆರಡು ಬಗೆಯ ತಿಂಡಿಯನ್ನ ಸ್ವಲ್ಪವೇ  ಮಾಡಿದ್ದರಿಂದ ಅದೂ ಖಾಲಿಯಾಗುತ್ತ ಬಂದಿತ್ತು. ಅಲ್ಲೇ ಹಿಂಬದಿಗೆ ಚಹಾದ ಲೋಟ ತೊಳೆಯುತ್ತಿದ್ದ ತನ್ನ ಹೆಂಡತಿಗೆ ಏನನ್ನೋ ಸಂಜ್ಞೆ ಮಾಡಿದ . ಸ್ವಲ್ಪವೂ ಹಿಂದೆ ಮುಂದೆ ಯೋಚಿಸದೆ ರಾಮಣ್ಣನ ಹೆಂಡತಿ ಯಾರಿಗೂ ಗೊತ್ತಾಗದಂತೆ ಒಂದಿಷ್ಟು ನೀರನ್ನು ಒಲೆಯ ಮೇಲೆ ಸದ್ದು ಮಾಡುತ್ತಾ ಕುಡಿಯುತ್ತಿದ್ದ ಚಹಾದ ಪತ್ರೆಗೆ ಸುರಿದು ಅದು ಸುಮ್ಮನಾಗುವಂತೆ ಮಾಡಿದಳು. ಹಾಗೋ ಹೀಗೋ ನೀರು ಚಹಾವನ್ನ ಬಂದ ಕೆಲವರಿಗೆ ಹಂಚಿದ, ಇನ್ನು ಕೆಲವೇ ಕೆಲವು ಭಾಗ್ಯವಂತರಿಗೆ ಮಾತ್ರ ತಿಂಡಿ ಲಭ್ಯವಾಯಿತು. ಆಗಲೇ ಮನೆಯಿಂದ ಚಹಾ ಕುಡಿದು ಹರಟಲು ಬಂದಿದ್ದ ಹಲವರು ಇದನ್ನೆಲ್ಲಾ ನೋಡಿಯೂ ನೋಡದವರಂತೆ ಇದ್ದರು.
ಇದನ್ನೆಲ್ಲಾ ನೋಡಿದ ಸುಬ್ಬಣ್ಣನಿಗೆ ಮಾತ್ರ ಖುಷಿಯೋ ಖುಷಿ. ಮುಂದಿನ ಪಂಚಾಯತಿ ಚುನಾವಣೆಗೆ ಪ್ರಚಾರ ಮಾಡಲು ಇದೇ ಸರಿಯಾದ ಸಂಧರ್ಭ ಎಂದು ಎಣಿಸಿ, ತಾನು ಕುಳಿತಲ್ಲಿಂದಲೇ ಎದ್ದು ತನ್ನ ಭಾಷಣ ಪ್ರಾರಂಭ ಮಾಡಿದ. ಹಲವರಿಗೆ  ಇದು ಹಾಸ್ಯಸ್ಪದ ಅಂತ ಅನಿಸಿದರೂ ಏನಾದರೂ ಹೊಸ ವಿಷಯ ಹೇಳಬಹುದು ಅಂತ ಕುತೂಹಲ ವಹಿಸಿದರು. ಇನ್ನು ಯಾವ್ಯಾವುದೋ ಕಾರಣಕ್ಕೆ ಸುಬ್ಬಣ್ಣನನ್ನು ದ್ವೇಷಿಸುತ್ತಿದ್ದ ಕೆಲವರು ಮಾತ್ರ ಅವನತ್ತ ಲಕ್ಷ್ಯ ವಹಿಸದೇ ಅವನು ಏನು ಹೇಳುತ್ತಾನೆ ಎಂಬುದು ಆಗಲೇ ತಿಳಿದವರಂತೆ ನಟಿಸಿದರು.
ಸುಬ್ಬಣ್ಣ ತನ್ನ ಎಂದಿನ ರಾಜಕೀಯ ಸುದ್ದಿ ಬಿಟ್ಟು ಈ ವರ್ಷದ ಭಾರೀ ಮಳೆಯ ಬಗ್ಗೆ ವಿವರಿಸತೊಡಗಿದ. “ನೋಡಿ ಈ ಮಳೆ ನಮ್ಮೂರಲ್ಲಷ್ಟೇ ಅಲ್ಲ ಇಡೀ ದೇಶಾದ್ಯಂತ ಅನಾಹುತ ಮಾಡ್ತಾ ಇದೆ” ಎನ್ನುತ್ತ ಯಾವುದೋ ಒಂದಿಷ್ಟು ಊರಿನ ಹೆಸರನ್ನು ಪ್ರಸ್ತಾಪಿಸಿ ಅಲ್ಲಿದ್ದವರ ಕೆಲವರ ಮುಖವನ್ನು ಪ್ರಶ್ನಾರ್ಥಕವಾಗಿ  ನೋಡಿದ . ಅವರಲ್ಲಿ ಒಂದೆರಡು ಜನ ನಾವೂ ಟಿವಿ ಯಲ್ಲಿ ನೋಡಿದ್ದೇವೆ ಅನ್ನುತ್ತ ಸುಬ್ಬಣ್ಣನ ಜೊತೆ ತಲೆಯಾಡಿಸಿದರು. ಹಾಗೆ ಮುಂದುವರಿಸುತ್ತಾ ತನ್ನ ಮಾತನ್ನು ಅಡಿಕೆ ಮರಕ್ಕೆ ಹಬ್ಬುತ್ತಿರುವ ರೋಗದ ಬಗ್ಗೆ ತಿರುಗಿಸಿದ. ಇದುವರೆಗೆ ಯಾರೂ ಕೇಳದ ಒಂದಿಷ್ಟು ಕೆಲವು ವೈಜ್ಞಾನಿಕ ಹೆಸರುಗಳನ್ನು ಯಾವುದೋ ಪತ್ರಿಕೆಯಲ್ಲಿ ಓದಿದ್ದನ್ನು ನೆನಪಿಸಿಕೊಂಡು ಹೊಸ ರೋಗದ ಗುಣ ಲಕ್ಷಣ ಹಾಗೂ ಅದು ಹೇಗೆ ಹರಡುತ್ತಿದೆ ಅದಕ್ಕೆ ಕಾರಣ ಏನಿರ ಬಹುದು? ಎಂಬುದರ ಬಗ್ಗೆ ತನ್ನದೇ ರೀತಿಯಲ್ಲಿ ವಿವರಿಸತೊಡಗಿದ. ಇದನ್ನು ಕೇಳಿದ ಊರಿನ ಕೆಲವರು ಸುಬಣ್ಣನ ಲೋಕ ಜ್ಞಾನದ ಬಗ್ಗೆ ತಲೆದೂಗಿದರು. ಇದಲ್ಲದೆ ಮಧ್ಯ ದಲ್ಲಿ ಕೆಲವರು ರೋಗದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರ ಗೊತ್ತಿಲ್ಲದಿದ್ದರೂ ಯಾವುದೇ ರಾಜಕಾರಣಿಗೆ ಕಮ್ಮಿ ಇಲ್ಲ ಎನ್ನುವಂತೆ ಉತ್ತರಿಸಿದ. “ ನೋಡಿ ನಾವು ಅಮೆರಿಕ, ಜಪಾನು ಎಲ್ಲಾ ನೋಡಿ ವೈಜ್ಞಾನಿಕವಾಗಿ ವ್ಯವಸಾಯ ಮಾಡೋದನ್ನ ಕಲೀಬೇಕಿದೆ” ಎನ್ನುತ್ತ ಎಲ್ಲೋ ಅಲ್ಪ ಸ್ವಲ್ಪ ಓದಿಕೊಂಡಿದ್ದ ವೈಜ್ಞಾನಿಕ ಕೃಷಿ ಪದ್ದತಿಯ ಬಗ್ಗೆಯೂ ವಿವರಿಸತೊಡಗಿದ. ಹೀಗೆ ಹದಿನೈದು ನಿಮಿಷಕ್ಕೂ ಮೀರಿದ  ಸುಬ್ಬಣ್ಣನ ಭಾಷಣ ಕೇಳಿದ ಅಲ್ಲಿದ್ದ ಬಹಳಷ್ಟು ಜನ ತಮ್ಮ ಹಳೆಯ ಕೃಷಿ ಪದ್ಧತಿ ಬಿಟ್ಟು ಹೊಸ ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎನ್ನುತ್ತ ಸುಬ್ಬಣ್ಣನ ಜೊತೆ ದನಿಗೂಡಿಸಿದರು. ಇನ್ನುಳಿದ ಕೆಲವರು ತಮ್ಮ ಕೃಷಿ ಪದ್ದತಿಯೇ ಶ್ರೇಷ್ಠ ಅನ್ನುತ್ತ ತಮ್ಮ ವಿರೋಧ ಪ್ರದರ್ಶಿಸಿದರು. ಸುಬ್ಬಣ್ಣ ಮಾತ್ರ ಬಹುಪಾಲು ಜನರು ತನ್ನ ಭಾಷಣಕ್ಕೆಆಕರ್ಷಿತರಾದರು  ಅಂದುಕೊಳ್ಳುತ್ತ  ತನ್ನೊಳಗೇ ಸಂತೋಷ ಪಟ್ಟ. ಈ ಮಧ್ಯೆ, ಊರವರು ಎರಡೂ ಕೃಷಿ ಪದ್ದತಿಯ ಸಾಧಕ ಬಾಧಕ ಗಳ ಬಗ್ಗೆ ತಮಗೆ ತಿಳಿದ ಮಟ್ಟಿಗೆ ಚರ್ಚಿಸತೊಡಗಿದ್ದರು. ಬಹುಪಾಲು ಜನರು ಹೊಸ ವೈಜ್ಞಾನಿಕ ಕೃಷಿ ಪ್ರಯೋಗ ಮಾಡಿ ನೋಡುವುದೇ ಅನ್ನುವ ನಿರ್ಧಾರಕ್ಕೆ ಬಂದಂತಿತ್ತು. ಇಷ್ಟರಲ್ಲಿಯೀ ಸುಬ್ಬಣ್ಣ ಮಧ್ಯದಲ್ಲಿ ಬಾಯಿ ಹಾಕಿ “ಇದಕ್ಕೆಲ್ಲ ನನ್ನಲ್ಲೊಂದು ಪರಿಹಾರ ಇದೆ . ನಾವ್ಯಾಕೆ ಪೇಟೆಗೆ ಹೋಗಿ ಕೃಷಿ ಅಧಿಕಾರಿ ಎಲ್ಲಾ ಭೆಟ್ಟಿ ಮಾಡಿ ವೈಜ್ಞಾನಿಕ ಕೃಷಿ ಬಗ್ಗೆ ಮಾತಾಡ್ಬಾರ್ದು? ನಾವು ಸರ್ಕಾರದ ಸವಲತ್ತು ಪಡ್ಕೊಳ್ಳುದಾದ್ರೂ ಯಾವಾಗ ? ಏನ್ ಹೇಳ್ತಿರಿ ನೀವೆಲ್ಲ ” ಎನ್ನುತ್ತ ಅಲ್ಲಿದ್ದವರ ಮುಖವನ್ನು ತಲೆ ಅಲ್ಲಾಡಿಸುತ್ತ ನೋಡಿದ. ಕೆಲವರು ಅದಕ್ಕೆ ಒಪ್ಪಿದರಾದರೂ ಹಲವರು “ಯಾರಪ್ಪಾ ಈ ಮಳೆಯಲ್ಲಿ ಹೋಗುದು, ಮಳೆ ಎಲ್ಲಾ ಕಡಿಮೆ ಆದ ಮೇಲೆ ಹೋಗೋಣ ” ಎಂದು ಗೊಣಗ ತೊಡಗಿದರು. ಆದರೆ ಸುಬ್ಬಣ್ಣ ಮಾತ್ರ ಈ ಅವಕಾಶವನ್ನೂ ಬಿಡಲು ಸಿದ್ದನಿರಲಿಲ್ಲ. ಸುಬ್ಬಣ್ಣ ಕೆಲವರ ಚಹಾದ ಹಣವನ್ನು ತನ್ನ ಖಾತೆಗೆ ಸೀರಿಸಿಕೊಂಡೊ ಅಧವಾ ಬಸ್ಸಿನ ಟಿಕೆಟ್ ತಾನೇ ತಗೊಳ್ಳುತ್ತೇನೆ ಅಂತಲೋ ಇನ್ನೂ ಕೆಲವರನ್ನು ಒಪ್ಪಿಸಿದ. ಸರಿ, ಊರಿನ ಕೆಲವರು ಸುಬ್ಬಣ್ಣನ ಜೊತೆಗೆ ಮರುದಿನ ಬೆಳಗ್ಗಿನ ಬಸ್ಸಿಗೆ ಪೇಟೆಗೆ ಹೊರಡಲು ಸಿದ್ದರಾದರು.
ಆಗಲೇ ಎಂದಿನಿಗಿಂತ ಜಾಸ್ತಿಯೇ ತಡವಾದ್ದರಿಂದ, ಈ ಭಾರೀ ಮಳೆಯಲ್ಲಿ ಬಸ್ಸು ಊರಿಗೆ ಸರಿಯಾಗಿ ಬರುತ್ತದೋ ಇಲ್ಲವೋ ಎಂದು ಊರವರು ಅಂದುಕೊಳ್ಳುತ್ತಿರುವಾಗಲೇ ಒಂದೆರಡು ಕಿಲೋಮೀಟರ್ ದೂರದಿಂದಲೇ ಬಸ್ಸಿನ ಆಗಮನದ ಮುನ್ಸೂಚನೆ ಕೀಳಿಸಿದ್ದರಿಂದ ಸುಬ್ಬಣ್ಣ ನಿಟ್ಟುಸಿರುಬಿಟ್ಟ. ಅಂತೂ ಸೋರುವ ಬಸ್ಸನ್ನೇರಿ ಕೆಲವೊಮ್ಮೆ ಹಳ್ಳ, ಇನ್ನು ಕೆಲವುಸಲ ಕೆಸರು ಗದ್ದೆಯಾಗಿ ಮಾರ್ಪಟ್ಟಿದ್ದ ರಸ್ತೆಯ ಮೂಲಕ ಪೇಟೆ ತಲುಪುವ ಹೊತ್ತಿಗೆ ಆಗಲೇ ಮಧ್ಯಾಹ್ನವಾಗುತ್ತಾ ಬಂದಿತ್ತು.  ಸ್ವಲ್ಪವೂ ಸಮಯ ಹಾಳುಮಾಡದೆ ಸುಬ್ಬಣ್ಣನ ಮುಂದಾಳತ್ವದಲ್ಲಿ ಮಲ್ಲಿಗೆಪುರದ ತಂಡ ಕೃಷಿ ಇಲಾಖೆಯ ಖಚೇರಿ ತಲುಪಿತು. ಎಲ್ಲಾ ಸರ್ಕಾರೀ ಕಟ್ಟಡದ ಮಾದರಿಯಲ್ಲೇ ಬಹಳ ವರ್ಷದ ಹಿಂದೆಯೇ ಹಂಚನ್ನು ಹೊದೆಸಿ ಕಟ್ಟಿದ್ದ ಕಟ್ಟಡ, ಈ  ಭಾರೀ ಮಳೆಯಲ್ಲಿ ಸೋರದೆ ಇರಲು ಸಾದ್ಯವೇ ಇರಲಿಲ್ಲ. ಕಟ್ಟಡದ ಗೋಡೆಯ ಮೇಲೆಲ್ಲಾ ಜಿನುಗುವ ನೀರು ಯಾವ ಚಿತ್ರಕಾರನೂ ಊಹಿಸಲು ಕಷ್ಟಪಡುವ ರೀತಿಯಲ್ಲಿ ಗೋಡೆಯ ಮೇಲೆ ಬಗೆ ಬಗೆಯ ಜಲ ಹಾಗೂ ವರ್ಣಚಿತ್ರಗಳನ್ನು ಮೂಡಿಸಿತ್ತು. ನೆಲವೂ ಸ್ವಚ್ಚಮಾಡದೆ ಬಹಳದಿನಗಳೇ ಕಳೆದಿತ್ತು. ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳದ ಊರವರು ಕೃಷಿ ಅಧಿಕಾರಿಗಾಗಿ ವಿಚಾರಿಸ ತೊಡಗಿದರು. “ಏನೋ ಕೃಷ್ಣಪ್ಪ ಎಲ್ಲಿ ಸಾಹೇಬ್ರು ?” ಎನ್ನುತ್ತ ತನೆಗೆ ಅಲ್ಪ ಸ್ವಲ್ಪ ಪರಿಚಯವಿದ್ದ ಕೃಷಿ ಇಲಾಖೆಯ ಗುಮಾಸ್ತನನ್ನು ಸುಬ್ಬಣ್ಣ ಪ್ರಶ್ನಿಸಿದ. “ಅವಾಗ್ಲೇ ಮನೆಂದ ಹೊರಟಿದ್ರಪ್ಪ, ಮಳೆ ಆಲ್ವಾ ಬರ್ತಾರೆ ಬಿಡಿ” ಎನ್ನುತ್ತ ಹಲ್ಲುಗಿಂಜಿದ. ಅರ್ಧ ಗಂಟೆ ಕಾದನಂತರ ಟಿಫನ್ ಬಾಕ್ಸ್ ಹಿಡಿದು ಬಂದ ಕೃಷಿ ಅಧಿಕಾರಿಗೆ ಒಮ್ಮೆಗೆ ಇಷ್ಟೊಂದು ಜನರನ್ನು ನೋಡಿ ಆಶ್ಚರ್ಯವಾಗಿ ಕೃಷ್ಣಪ್ಪನನ್ನು ವಿಚಾರಿಸಿದಾಗ ಮಲ್ಲಿಗೆಪುರದ ಅಡಿಕೆ ರೋಗದ ಬಗ್ಗೆ ಗೊತ್ತಾಯಿತು. ಯಾಕಪ್ಪ ತಲೆ ತಿನ್ನಲು ಬಂದ್ರಪ್ಪ ಅಂದುಕೊಳ್ಳುತ್ತ  “ನಿಮ್ದು  ಮಲ್ಲಿಗೆಪುರದ ಅಡಿಕೆ  ರೋಗದ ವಿಷ್ಯ ಆಲ್ವಾ, ಹೇ ಕೃಷ್ಣಪ್ಪ ಇವ್ರಿಗ್ಗೆಲ್ಲ ಆ ಮೂಲೆಲಿರೋ ಕೊಳೆ ಔಷಧಿ ಕೊಟ್ಟ ಕಳಿಸಪ್ಪ” ಎನ್ನುತ್ತ ಆ ಕಡೆಗೆ ಎಲ್ಲೋ ಹೋಗಲು ಸಿದ್ದನಾದ. “ನೀವು ಈ ವೈಜ್ಞಾನಿಕ ಕೃಷಿ ಬಗ್ಗೆ ಎಲ್ಲಾ ನಮ್ಮವರಿಗೆ ಹೇಳ್ಬೇಕಾಗಿತ್ತು” ಎನುತ್ತ ಸುಬ್ಬಣ್ಣ ಕೃಷಿ ಅಧಿಕಾರಿಗೆ ತನ್ನ ವಿನಯತನ ಪ್ರದರ್ಶಿಸ ತೊಡಗಿದ. “ಅದಕ್ಕೆಲ್ಲ ಈಗ ಟೈಮ್ ಇಲ್ಲಾರಿ, ಇನ್ನೊಂದಿನ ಬನ್ನಿ” ಅನ್ನುತ್ತ ಅಧಿಕಾರಿ ಒಳಗಡೆ ತನ್ನ ಕೋಣೆಗೆ ನಡೆದ. ಕೃಷ್ಣಪ್ಪ ಒಳಗಡೆ ನಾರುತ್ತಿರುವ ಕೊಣೆಯಿಂದ ಒಂದಿಷ್ಟು ಕೊಳೆ ಔಷಧಿ ತಂದು ಊರವರಿಗೆ ಹಂಚಿದ. ಸುಬ್ಬಣ್ಣ ಐವತ್ತರ ಒಂದು ನೋಟನ್ನು ಕೃಷ್ಣಪ್ಪನ ಕಿಸೆಯಲ್ಲಿ ತುರುಕಿದ್ದರಿಂದ, ಮತ್ತೂ ಸ್ವಲ್ಪ ಕೊಳೆ ಔಷಧಿ ಲಭ್ಯವಾಯಿತು. ಊರವರೆಲ್ಲರೂ ಸಂತೋಷದಿಂದ ಎಲ್ಲವನ್ನೂ ತೆಗೆದುಕೊಂಡು, ಸಂಜೆ ಬಸ್ಸಿಗೆ ಊರಿಗೆ ವಾಪಸ್ಸಾಗಿ ಅಡಿಕೆ ಮರಗಳಿಗೆ ಸಿಂಪಡಿಸಿದರು.
          ಈ ಮಧ್ಯೆ ಬೀರನ ಹೊಸ ಔಷಧಿ ಬೂದಿಯ ಬಗ್ಗೆಯೂ ಸುದ್ದಿ ಹಬ್ಬುತ್ತಿತ್ತು. ಬೀರ ಅಡಿಕೆತೋಟದಲ್ಲಿ ಕೆಲಸ ಮಾಡುವವ. ಸುಬ್ಬಣ್ಣನಿಂದ ಹಿಡಿದು ಎಲ್ಲರಿಗೂ ಬೀರನನ್ನು ಅಡಿಕೆ ತೊಡದ ಕೆಲಸ ದಲ್ಲಿ ನಿಷ್ಣಾತ ಎಂದೇ ಪರಿಗಣಿಸಿದ್ದರು. ಊರವರು ಇದೂ ಇರಲಿ ಎನ್ನುತ್ತ ಬೀರನ ಬೂದಿಯನ್ನೂ ಅಡಿಕೆ ಮರಕ್ಕೆ ಕೃಷಿ ಇಲಾಖೆಯ ಔಷಧಿ ಜೊತೆ ಹಾಕಿದರು. ಒಟ್ಟಿನಲ್ಲಿ ಕೊಳೆ ರೋಗ ಕಡಿಮೆಯಾಗತೊಡಗಿತ್ತು.  ಇದನ್ನೆಲ್ಲಾ ನೋಡಿ ಸುಬ್ಬಣ್ಣನಿಗೆ ಖುಷಿಯೋ ಖುಷಿ. ಸುಬ್ಬಣ್ಣನಿಗೆ ಸಿಕ್ಕವರೆಲ್ಲರೂ ಸುಬ್ಬಣ್ಣನ ಉಪಕಾರದ ಸ್ಮರಣೆ ಮಾಡಿದ್ದೇ ಮಾಡಿದ್ದು. ಅವರಿಗೆಲ್ಲ ಸುಬ್ಬಣ್ಣ ಇನ್ನೊಂದಿಷ್ಟು ವೈಜ್ಞಾನಿಕ ಕೃಷಿ ಅಂತೆಲ್ಲ ಹೀಳಿ ಉಪದೇಶ ನೀಡುತ್ತಿದ್ದ. ಊರವರು ಹೌದು ಹೌದು ಎನ್ನುತ್ತ ತಲೆಯಾಡಿಸುತ್ತಿದ್ದರು.ಒಟ್ಟಿನಲ್ಲಿ ಸುಬ್ಬಣ್ಣ, ಪಂಚಾಯ್ತಿ ಚುನಾವಣೆಯಲ್ಲಿ ತನ್ನ ಜಾಗ ಪಕ್ಕ ಆಯ್ತು ಅಂತ ಮನಸ್ಸಿನಲ್ಲೇ ಸಂತೋಷಪಡತೊಡಗಿದ. 
image Source: internet

ಒಂದು ತಿಂಗಳ ನಂತರ ಪಂಚಾಯ್ತಿ ಚುನಾವಣೆ ಜೋರಾಗಿಯೇ ನಡೆಯಿತು. ಪ್ರಚಾರಕ್ಕೆ ಹೋದಾಗಲೆಲ್ಲ ಊರವರು ಸುಬ್ಬಣ್ಣನನ್ನು ಹೊಗಳಿದ್ದೇ ಹೊಗಳಿದ್ದು. ಅದನ್ನೆಲ್ಲಾ ನೋಡಿ ಸುಬ್ಬಣ್ಣ ತಾನಿನ್ನು ಪಂಚಾಯ್ತಿ ಚೇರ್ಮನ್ ಅಗುವುದಲ್ಲಿ ಯಾವುದೇ ಸಂಶಯವಿಲ್ಲ ಅನ್ನುತ್ತ ಇದುವರೆಗೆ ಊರಲ್ಲಿ ಯಾರೂ ಮಾಡದ ಚುನಾವಣ ಪ್ರಚಾರ ಮಾಡಿದ್ದ.
          ಚುನಾವಣಾ ಫಲಿತಾಂಶದ ದಿನ ಸುಬ್ಬಣ್ಣ ಹೊಸ ಲುಂಗಿ ಮ್ಯಾಚಿಂಗ್ ಶರ್ಟ್ ತೊಟ್ಟು, ಕ್ರಾಪ್ ಬಾಚಿ, ತನ್ನ ಉದ್ದನೆಯ ಕೊಡೆ ಹಿಡಿದು ಪಂಚಾಯ್ತಿ ಖಚೇರಿಯತ್ತ  ಸ್ವಲ್ಪ ತಡವಾಗಿಯೇ ಹೋದ. ಸೀದಾ ಮತ ಎಣಿಕೆಯ ಕೋಣೆಯೊಳಗೆ ನುಗ್ಗಿ “ಎಷ್ಟಪ್ಪ ಲೀಡು ?” ಅನ್ನುತ್ತ ಹಲ್ಲು ಗಿಂಜಿದ. “ನೀವು ಸೋತ್ರಿ ಮಾರಾಯ್ರೆ” ಹಿಂಬದಿಯಿಂದ ಯಾರೋ ಅಂದರು.
“ಹಾಗಿದ್ರೆ ಗೆದ್ದವ್ರು ಯಾರು?” ನಂಬಿಕೆಯಿಲ್ಲದೆ ಸುಬ್ಬಣ್ಣ ಕೇಳಿದ.

“ಬೀರನ ಹೆಂಡತಿ ಅಂತೆ ”  ಅಲ್ಲಿಯೇ ಪಕ್ಕದಲ್ಲಿ ನಿಂತಿದ್ದ ರಾಮಣ್ಣ ಉತ್ತರಿಸಿದ.


2 ಕಾಮೆಂಟ್‌ಗಳು: