ಶನಿವಾರ, ಮಾರ್ಚ್ 24, 2012

ಒಂದಕ್ಕೆ ಒಂದೂವರೆ !!

ಮನೆಯ ಜಗುಲಿಯ ಮೇಲೆ ಚಪ್ಪರದ ನೆರಳಲ್ಲಿ ಆಗ ತಾನೆ ತಿಥಿ ಊಟ ಮುಗಿಸಿಕೊಂಡು ಮಧ್ಯಾಹ್ನದ ಸಣ್ಣ ನಿದ್ರೆ ಮುಗಿಸಿದ್ದ ಸುಬ್ಬಾಭಟ್ಟರು ಅರೆ ನಿದ್ರಾವಸ್ತೆಯಲ್ಲೇ ಸ್ವಲ್ಪ ಏರು ದನಿಯಲ್ಲಿ ಮಾತನಾಡ ತೊಡಗಿದರು. “ಒಟ್ಟೂ ಎಷ್ಟು ಕೆಜಿ ಅಡಿಕೆ ಸುಲ್ದೆ ಒಟ್ಟಿಗೆ ? ನಾಳೆ ಕುಮಟ ಪೇಟೆಗೆ ಎಲ್ಲಾ ಕೊಟ್ಟಿ ಬರವು”. ಆಗ ತಾನೆ ಕುಡಿಯುವ ನೀರಿಗೆ ಚಹಾ ಪುಡಿಯನ್ನು ಹಾಕುತ್ತಿದ್ದ ಭಟ್ಟರ ಹೆಂಡತಿ, ಅಡುಗೆ ಕೋಣೆಯಿಂದಲೇ ತಾನೇನೂ ಕಡಿಮೆಯಿಲ್ಲ ಎಂಬಂತೆ ಮತ್ತೂ ಜೋರಾಗಿ “ಒಂದು ಐದು ಕೆಜಿ ಅಗ್ಲಕ್ಕು ಕಾಣಿಸ್ತು” ಎನ್ನುತ್ತ ಕುದಿಯುತ್ತಿದ್ದ ಚಹವನ್ನು ಲೋಟಕ್ಕೆ ಹಾಕಲು ತಯಾರಿ ನಡೆಸ ತೊಡಗಿದಳು. “ಇಷ್ಟೆಲ್ಲಾ ದಿನ ಸುಲಿದದ್ದು ಬರಿ ಐದು ಕೆಜಿನ ?” ಎಂದು ಗೊಣಗುತ್ತಿರುವಾಗಲೇ ಭಟ್ಟರ ಹೆಂಡತಿ ಚಹಾದ ಲೋಟವನ್ನು ಸುಬ್ಬಾಭಟ್ಟರ ಮುಖದ ಮುಂದೆ ಹಿಡಿಯುತ್ತ ಅಂದಳು “ಈ ಥರ ಸಂಜೆ ವರೆಗೆ ನಿದ್ರೆ ಮಾಡೋದು ಬಿಟ್ಟು, ನೀವೂ ಅಡಿಕೆ ಸುಲಿದಿದ್ರೆ ಗೊತ್ತಾಗ್ತಿತ್ತು ಎಷ್ಟು ಕೆಜಿ ಆಗಬಹುದು”. ಇವಳ ಜೊತೆ ಜಗಳ ಮಾಡಿ ಗೆಲ್ಲಲು ಸಾಧ್ಯವಿಲ್ಲ ಎಂದು ಮನಸ್ಸಿನಲ್ಲೇ ಎಣಿಸಿದ ಭಟ್ಟರು, ಮುಂದೇನೂ ಹೇಳದೆ ಮುಖದ ಮುಂದೆ ಹಿಡಿದಿರುವ ಚಹಾದ ಲೋಟವನ್ನು ತೆಗೆದುಕೊಂಡು ನಿಧಾನವಾಗಿ ಹೀರತೊಡಗಿದರು.
ಭಟ್ಟರು ನಿಧಾನವಾಗಿ ಚಹಾ ಮುಗಿಸುವಷ್ಟರಲ್ಲಿ, ದಿನಪೂರ್ತಿ ಸ್ವಲ್ಪವೂ ವಿಶ್ರಮಿಸದೆ ದುಡಿದ ಸೂರ್ಯನು ದಣಿವಾದಂತೆ ಅಡಿಕೆ ಮರಗಳ ಸಂದಿನಲ್ಲಿ ಕಾಣತೊಡಗಿದ. ಸೂರ್ಯನ ಪ್ರಖರ ಬಿಸಿಲಿನಿಂದ ಬಳಲಿ  ತಮ್ಮ ಗರಿಗಳನ್ನು ಮುದುಡಿಸಿ ಕೊಂಡಿದ್ದ ಅಡಿಕೆ ಮರಗಳು ಅನತಿ ದೂರದ ಅರಬ್ಬೀ ಸಮುದ್ರದ ತಂಗಾಳಿಗೆ ಚೇತರಿಸಿಕೊಂಡು, ಆಗ ತಾನೇ ಅವು ತಮ್ಮ ಗರಿಗಳನ್ನು ತಂಗಾಳಿಯನ್ನು ಸ್ವಾಗತಿಸುವಂತೆ ಅಲ್ಲಾಡಿಸುತಿತ್ತು. ಅಲ್ಲಿ ಇಲ್ಲಿ ಆಗೊಮ್ಮೆ ಈಗೊಮ್ಮೆ ಯಾವುದೋ ಪಕ್ಷಿಗಳು ತಮ್ಮ ಇಂಪಾದ ದನಿಯನ್ನು ತಂಗಾಳಿಯಲ್ಲಿ ತೇಲಿ ಬಿಡುತ್ತಿದ್ದವು. ಈ ಎಲ್ಲದರ ಮಧ್ಯೆ, ಭಟ್ಟರ ಮನೆಯ ಎದುರಿನ ರಸ್ತೆಯಲ್ಲಿ ಹೋಗುತ್ತಿದ್ದ ದೇವು, ಮನೆಯ ಅಂಗಳದಲ್ಲಿ ಸುಲಿದು ಚೀಲದಲ್ಲಿ ತುಂಬಿ, ಬಿಸಿಲಿನಲ್ಲಿ ಒಣಗಿಸಲು ಇಟ್ಟಿದ್ದ ಅಡಿಕೆಯನ್ನು ನೋಡಿ ಇದನ್ನು ಹೇಗಾದರೂ ಹೊಂಚುಹಾಕಿ ಕದಿಯಬೇಕು ಎಂದು ಮನಸ್ಸಿನಲ್ಲಿ ಎಣಿಸುತ್ತ ಭಟ್ಟರನ್ನು ಕೂಗುತ್ತ ಮನೆಯ ಗೇಟನ್ನು ತಳ್ಳಿದ. ಇನ್ನೇನು ಭಟ್ಟರು ಒಮ್ಮೆ ತೋಟ ಸುತ್ತಿ ಬರೋಣ ಎಂದು ಎದ್ದೇಳುವಷ್ಟರಲ್ಲಿ, ಮನೆಯ ಗೇಟನ್ನು ಯಾರೋ ಜೋರಾಗಿ ತಳ್ಳುವ ಶಬ್ದವಾಯಿತು.ಯಾರಪ್ಪಾ ಅದು ಅನ್ನುವಷ್ಟರಲ್ಲಿ, ದೇವು ಭಟ್ಟರನ್ನು ಕರೆಯುತ್ತ ಒಳಗಡೆ ಬಂದ “ಏನ್ ಭಟ್ರೇ, ಈ ಸಲ ನಿಮ್ಮ ಅಡಿಕೆ ಬೆಳೆ ಜೋರ ಹೇಗೆ? ಅಡಿಕೆ ಈಗಲೇ ಸುಲಿಸ ಹತ್ತಿದ್ರಿ”. “ಬೆಳೆ ಎಲ್ಲಾ ಕೊಳೆ ರೋಗ ಬಂದು ಹಾಳಾಗಿ ಹೊಯ್ತ. ಏನ್ ದೇವು ಬಹಳ ಅಪರೂಪದ ಮನುಷ್ಯ ಆಗ್ಬಿಟ್ಟೆ ಮಾರಾಯ, ಯಾವ ಕಡೆ ಕೆಲ್ಸ ಈಗ ?” ಎನ್ನುತ್ತಲೇ ಭಟ್ಟರು ಎಲೆ ಅಡಿಕೆಯ ಡಬ್ಬಿಗೆ ಕಯ್ಯನ್ನು ಹಾಕಿದರು. “ಈಗ ಏನಿದ್ರೂ ಪೇಟೇಲಿ ಕೆಲ್ಸ. ಕಡ್ಮೆ ಅಂದ್ರೂ ನೂರು ರೂಪಾಯಿ ನೋಡಿ, ಊರಲ್ಲಿ ಕೆಲ್ಸ ಮಾಡ್ದ್ರೆ ಐವತ್ತು ಕೊಡ್ಲಿಕ್ಕೂ ಹಿಂದೆ ಮುಂದೆ ನೋಡ್ತಾರೆ” ಎನ್ನುತ್ತಿರುವಾಗಲೇ ಭಟ್ಟರು “ಇನ್ಮೇಲೆ ತೋಟದ ಕೆಲ್ಸ ಮಾಡ್ಸೋದು ಕಷ್ಟನೇ ಇದೆ” ಎಂದು ಗೊಣಗ ತೊಡಗಿದರು. “ನಿಮಗಾದ್ರೆ ತೋಟ ಇದೆ, ಪುರೋಹಿತ್ಯ ಬೇರೆ ಮಾಡ್ತೀರ” ಎಂದು ದೇವು ತನ್ನ ಮಾತನ್ನು ಶುರು ಮಾಡುತ್ತಿರುವಾಗಲೇ ಭಟ್ಟರ ಹೆಂಡತಿ ಮನೆ ಒಳಗಿನಿಂದ ಬಂದು “ಈಗೆಲ್ಲ ತೋಟದಲ್ಲಿ ಕಳ್ಳತನ ಜಾಸ್ತಿ ಆಗಿದೆ, ಒಂದ್ಸಲ ತೋಟ ಸುತ್ತಿಕೊಂಡು ಬಾ ಅಂತ ಹೇಳಿದ್ರೆ ಇಲ್ಲೇ ಇನ್ನೂ ಕುಳಿತು ಕೊಂಡೆ ಇದ್ದಾರೆ ನೋಡು” ಎಂದು ದೇವುವಿಗೆ ತನ್ನ ತನ್ನ ದೂರನ್ನು ಒಪ್ಪಿಸತೊಡಗಿದಳು. “ ಈಗೆಂತ ತೋಟ ತಿರ್ಗುದು? ಕತ್ತೆಲೆಲಿ ಹಾವು ಗಿವು ಕಚ್ಚಿದ್ರೆ ಏನ್ ಮಾಡುದು ಹೇಳು?” ಎನ್ನುತ್ತ ಭಟ್ಟರು ಅವಳಿಂದ ನುಣುಚಿಕೊಳ್ಳಬೇಕು ಎನ್ನುವಷ್ಟರಲ್ಲೇ ದೇವು ಮಧ್ಯಬಾಯಿಹಾಕಿ, “ ಅರೆ ಇವತ್ತು ಪಕ್ಕದ ಊರಿನ ಜಾತ್ರೆಗೆ ಹೋಗುವುದಿಲ್ಲವ ಹೇಗೆ?” ಎಂದು ಭಟ್ಟರನ್ನು ಪ್ರಶ್ನಿಸಿದ. “ನಾನು ಜಾತ್ರೆ ಹೋಗುವುದನ್ನು ಬಿಟ್ಟೆ ಬಿಟ್ಟಿದ್ದೇನೆ ನೋಡು, ಬರಿ ಜನ ಅಲ್ಲಿ, ದುಡ್ಡು ಬೇರೆ ಸುಮ್ನೆ ಖರ್ಚು ಅಲ್ಲಿ ಹೋದ್ರೆ” ಎನ್ನುತ್ತ ಭಟ್ಟರು ಆಗ ತಾನೆ ಸಿದ್ದಗೊಳಿಸಿದ್ದ ಎಲೆ ಅಡಿಕೆ ಯನ್ನು ಬಾಯಿಗೆ ತುರುಕಿಕೊಳ್ಳುತ್ತ ದೇವುವಿಗೂ ಒಂದಿಷ್ಟು ಎಲೆ,ಅಡಿಕೆ.ಸುಣ್ಣ ವನ್ನು ನೀಡಿದರು. “ಬಹಳ ವರ್ಷ ಅದ್ಮೇಲೆ ಈಗ ಹೇಗಿದೆ ನೋಡ್ಕೊಂಡು ಬರುವ, ಯಕ್ಷಗಾನ ಬೇರೆ ಇದ್ಯಂತೆ, ಇಲ್ಲಿಂದ ಹೊಳೆ ದಾಟಿದ್ರೆ ಬರಿ ಅರ್ಧ ಗಂಟೆ ನಡೆಬೇಕು ” ಎಂದೆಲ್ಲಾ ವಿವರಿಸ ತೊಡಗಿದ. “ಅದೆಲ್ಲಾ ನಂಗೂ ಗೊತ್ತುಂಟಪ್ಪ” ಎನ್ನುತ್ತ ಭಟ್ಟರು ಹೆಂಡತಿಯ ಕಾಟದಿಂದ ಸ್ವಲ್ಪ ತಿಪ್ಪಿದಂತಾಗುತ್ತದೆ ಎಂದೆಣಿಸಿ “ಸರಿ ನಡೆ ಹೊರಡೋಣ” ಅಂದರು. “ ಒಂದು ಹತ್ತು ನಿಮಿಷ, ಇಲ್ಲೇ ಶೆಟ್ಟರ ಅಂಗಡಿಲಿ ಸಣ್ಣ ಕೆಲ್ಸ ಮುಗಿಸಿಕೊಂಡು ಬರ್ತೇನೆ ಆಮೇಲೆ ಹೋಗೋಣ, ನೀವು ಬೇಗ ತಯಾರಾಗಿ” ಎನ್ನುತ್ತ ದೇವು ಮೇಲೆದ್ದ.ಭಟ್ಟರೂ ಮೇಲೆದ್ದು ಮನೆಯೊಳಗೆ ಏನನ್ನೋ ಯೋಚಿಸುತ್ತ ನಡೆದರು. ಆಗ ತಾನೆ ಸಂಜೆಯ ತಿಳು ಬೆಳಕಿನ ಮೇಲೆ ಕತ್ತಲೆಯು ಆಕ್ರಮಣ ಮಾಡಲು ಸಿದ್ದವಾಗುತ್ತಿತ್ತು. ಆಗಸದಲ್ಲಿ ಮೋಡಗಳ ಮಧ್ಯದಿಂದ ಚಂದ್ರನು ತನ್ನ ಅರ್ಧದಷ್ಟೇ ಶಕ್ತಿಯನ್ನು ಕತ್ತಲೆಯ ಮೇಲೆ ಪ್ರದರ್ಶಿಸಲು ಅರೆಮನಸ್ಸಿನಿಂದ ಅಣಿಯಾಗುತ್ತಿದ್ದ.
ಜಾತ್ರೆಯೇನೋ ಜೋರಾಗಿಯೇ ಇತ್ತಾದರೂ ಭಟ್ಟರಿಗೆ ಯಾವುದರಲ್ಲೂ ಆಸಕ್ತಿ ಹುಟ್ಟಲಿಲ್ಲ. ದೇವು ಈ ಮಧ್ಯೆ “ಬನ್ನಿ ಇಲ್ಲೇ ಹೊಸ ರೀತಿಯ ಆಟ ಬಂದಿದೆ ಆಡ್ಕೊಂಡು ಬರೋಣ” “ಆಟ ಅಂದ್ರೆ ಜೂಜಾಟ ಅಲ್ವ ನೀನು ಹೇಳ್ತಾ ಇರೋದು? ನಾನು ಅದೆಲ್ಲಾ ಆಡುವುದಿಲ್ಲಪ್ಪ” ಎನ್ನುತ್ತ ಭಟ್ಟರು ಸ್ವಲ್ಪ ಕೂಪ ತೋರಿಸಿದರು.ಆದರೂ ದೇವು ಒತ್ತಾಯ ಮಾಡಿ ಭಟ್ಟರಿಗೆ ಒಂದು ಆಟ ಆಡಿಸಿದ. ಏನೋ ಮಜವೆನ್ನಿಸಿ ಭಟ್ಟರು ಇನ್ನೂ ಒಂದಿಷ್ಟು ಆಡಿದರು. ದೇವುವೂ ಭಟ್ಟರ ದುಡ್ಡಿನಲ್ಲೇ ಒಂದಿಷ್ಟು ಆಡಿದ. ಸ್ವಲ್ಪ ಜಾಸ್ತಿಯೇ ದುಡ್ಡು ಕಳಕೊಂಡ ಮೇಲೆ ಭಟ್ಟರಿಗೆ ಏನನ್ನಿಸಿತೋ ಏನೋ ಅಲ್ಲಿಗೇ ಮುಕ್ತಾಯ ಮಾಡಿದರು. ಜೂಜಾಟದಲ್ಲಿ ಸ್ವಲ್ಪ ಪಳಗಿದ್ದ ದೇವು ಭಟ್ಟರ ದುಡ್ಡಿನ ಜೊತೆ ತನ್ನ ದುಡ್ಡನ್ನೂ ಸೇರಿಸಿ ಸ್ವಲ್ಪ ಲಾಭವನ್ನೇ ಮಾಡಿಕೊಂಡ. ಆಗಲೇ ಸಾಕಷ್ಟು ದುಡ್ಡು ಕಳೆದುಕೊಂಡು ಉತ್ಸಾಹ ಕಳೆದುಕೊಂಡಿದ್ದ ಭಟ್ಟರಿಗೆ ಯಕ್ಷಗಾನ ನೋಡಬೇಕೆಂಬ ಬಯಕೆಯೂ ದೂರವಾಗಿತ್ತು. ದೇವು ಎಷ್ಟೇ ಒತ್ತಾಯ ಮಾಡಿದರೂ ಈ ಸಲ ಭಟ್ಟರು ಮಂದ ಬೆಳದಿಂಗಳಿನಲ್ಲಿ ಅದಕ್ಕಿಂತಲೂ ಮಂದವಾಗಿ ಉರಿಯುವ ತಮ್ಮ ಬ್ಯಾಟರಿ ಹಿಡಿದು ತನ್ನ ಅದ್ರಷ್ಟವನ್ನ ಶಪಿಸುತ್ತ ಮನೆಕಡೆ ಹೆಜ್ಜೆಹಾಕಿದರು. ಮನೆ ಮುಟ್ಟುವಷ್ಟರಲ್ಲಿ ಜಾತ್ರೆಯ ಯಕ್ಷಗಾನದ ಚಂಡೆ, ಗಾಯನಗಳ ದ್ವನಿವರ್ಧಕದ ಸದ್ದು, ಭಟ್ಟರ ಹೆಂಡತಿಯ ಟಿವಿಯ ಸದ್ದಿನಲ್ಲೂ ಸಣ್ಣ ದನಿಯಲ್ಲಿ ಕೇಳಿಸುತ್ತಿತ್ತು. “ಏನು ಯಕ್ಷಯಾನ ನೋಡಿರಿಲ್ಯ ಹೇಗೆ ?” ಎನ್ನುತ್ತ ಭಟ್ಟರ ಹೆಂಡತಿ ಬಾಗಿಲು ತೆಗೆದಳು. “ಹಾಳಾಗ್ಲಿ ಆ ಯಕ್ಷಗಾನ ಎಲ್ಲಾ” ಎನ್ನುತ್ತ ಆಗಲೇ ದುಡ್ಡು ಕಳೆದುಕೊಂಡು ಕೋಪಗೊಂಡಿದ್ದ ಭಟ್ಟರು ಮನೆಯೊಳಗೆ ನುಗ್ಗಿದರು.
ಬೆಳಗಿನ ಜಾವ ಭಟ್ಟರ ಹೆಂಡತಿ ಏನೋ ಕೂಗಾಟ ಕೇಳಿ ಹಾಸಿಗೆಯಿಂದ ಎದ್ದು ಕುಳಿತಳು. ಯಾರಿದು ಬೆಳಿಗ್ಗೆ ಬೆಳಿಗ್ಗೆ ಕೂಗಾಡುತ್ತಿರುವುದು ಎನ್ನುತ್ತ ನೋಡಿದರೆ, ಭಟ್ಟರು ಮನೆ ಅಂಗಳದಲ್ಲಿ ನಿಂತು ಯಾರನ್ನೋ ಬಯ್ಯುತ್ತಿದ್ದರು. “ಅವನನ್ನು ಇವತ್ತು ಬಿಡುದಿಲ್ಲ ಅಡಿಕೆ ಕದ್ಕೊಂದು ಹೋಗಿ ಶೆಟ್ಟರ ಅಂಗಡಿಗೆ ಕೊಟ್ಟಿದ್ದು ಅಲ್ದೆ ಜೂಜು ಬೇರೆ ಆಡಿಸಿದ, ಅವನ ಕಾಲು ಮುರಿದೆ ಹೋದ್ರೆ ನಾನು ಸುಬ್ಬಾಭಟ್ಟನೇ ಅಲ್ಲ”. “ಎಂತದು ಆಯ್ತು ನಿಮ್ಗೆ ಬೆಳಿಗ್ಗೆನೆ?” ಎನ್ನುತ್ತ ಭಟ್ಟರ ಹೆಂಡತಿ ಮನೆಯ ಅಂಗಳಕ್ಕೆ ಬಂದಳು.
“ನೋಡು ಅವ್ನು ಅದ್ನ ಕಡ್ಕೊಂಡು ಹೋದ”
“ಯಾವದನ್ನ?”
“ನೀ ಸುಲಿದಿಟ್ಟ ಅಡಿಕೆನ, ಅಡಿಕೆಗೆ ಈಗ ಒಳ್ಳೆ ರೇಟ್ ಬೇರೆ ಬಂದಿತ್ತು”
“ನಾ ಸುಲಿದ ಅಡಿಕೆ ಮನೆ ಒಳಗೆ ಇಟ್ಟಿದ್ದೆ. ಕಳ್ಳತನ ಆಗೋದ್ರೆ ಅಂತ”
“ಬೆಳಗ್ಗಿನ್ನ ನಿದ್ರೆ ಬೇರೆ ಹಾಳುಮಾಡಿದ್ರಿ” ಎನ್ನುತ್ತ ಭಟ್ಟರ ಹೆಂಡತಿ ಮತ್ತೊಮ್ಮೆ ಶಪಿಸತೊಡಗಿದಳು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ