ಶನಿವಾರ, ಸೆಪ್ಟೆಂಬರ್ 1, 2012

ಕನಸು


ಮಲ್ಲಿಗೆಪುರದ ಜಾತ್ರೆಯು ಸುತ್ತಲ ಊರುಗಳಲ್ಲೆಲ್ಲ ಜನಪ್ರಿಯವಾದದ್ದು. ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರೆಯ ಆಚರಣೆಯಲ್ಲಿ ಬದಲಾವಣೆಯಾಗಲೀ  ಅಥವಾ ಹೊಸ ಬಗೆಯ ವಿಶೇಷವೇನೂ ಇರದಿದ್ದರೂ ಊರಿನ ಜನರಲ್ಲಿ ಮಾತ್ರ ಜಾತ್ರೆಯ ಉತ್ಸಾಹಕ್ಕೇನೂ ಕೊರತೆಯಿರಲಿಲ್ಲ. ಒಂದು ವಾರದ ಮೊದಲಿನಿಂದಲೇ ಊರಿನ ದೇವಸ್ಥಾನದ  ಸುತ್ತಲಿನ ಗದ್ದೆಯಲ್ಲಿ ಜಾತ್ರೆಗೆ ಬೇಕಾದ ತಯಾರಿ ಆರಂಭವಾಗಿ ಅದು ಕೊನೆಯ ಹಂತಕ್ಕೆ ಬಂದಿತ್ತು. ದೇವಸ್ತಾನದ ಸುತ್ತ ಮುತ್ತ  ಊರವರೆಲ್ಲ ಸೇರಿ  ಗುಡಿಸಿ, ತೊಳೆದು ಸ್ವಚ್ಚ ಮಾಡಿ, ಚಪ್ಪರ,ತೋರಣ  ಹಾಕಿ ಜಾತ್ರೆಯ ದಿನ ನಡೆಯುವ ಪೂಜೆಗೆ ಎಲ್ಲಾ ಸಿದ್ಧತೆ ನಡೆದಿತ್ತು. ಆಗಲೇ ಒಂದು ದಿನ ಮೊದಲುಗೊಂಡು ಪೇಟೆಯಿಂದ ಬಂದಂತಹ ಮಿಟಾಯಿ ಅಂಗಡಿಯವರು, ಆಟಿಕೆ ಅಂಗಡಿಯವರು, ಬಟ್ಟೆ ಬರೆ  ಅಂಗಡಿಯವರು ಅಲ್ಲಲ್ಲಿ ತಮಗೆ ಅನುಕೂಲವಾಗಬಹುದಾದಂತಹ  ಆಯಕಟ್ಟಿನ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಪೆಂಡಾಲ್ ಗಳನ್ನು ಹಾಕಿಯಾಗಿತ್ತು . ಇನ್ನುಳಿದ ಸಣ್ಣ ಪುಟ್ಟ ಅಂಗಡಿಯವರು ಜಾತ್ರೆಯ ದಿನ ಬೆಳಿಗ್ಗೆ ಬಂದು ತಮ್ಮ ತಮ್ಮ ಠಿಕಾಣಿ ಹೂಡುವವರಿದ್ದರು. ಇನ್ನುಳಿದಂತೆ ಇದ್ದದ್ದು ಊರಿನ ಯುವಕ ಮಂಡಲದ ನಾಟಕಕ್ಕೆ ತಕ್ಕನಂತೆ  ರಂಗಸ್ಥಳವನ್ನ ಅಣಿಗೊಳಿಸುವುದು. ಅದು ಹೇಗಿದ್ದರೂ ತಡ ರಾತ್ರಿ ನಡೆಯುವ ಕಾರ್ಯಕ್ರಮವಾದ್ದರಿಂದ ಅದರ ತಯಾರಿ  ನಾಟಕ ಪ್ರಾರಂಭವಾಗುವ ಹೊತ್ತಿಗೆ ಸರಿಯಾಗಿ ಮುಗಿಯುವಂತೆ ನಡೆದಿತ್ತು.
ಊರಿನ ಜಾತ್ರೆಯೆಂದರೆ ಶಾಲೆಯ ಹುಡುಗರನ್ನು ಕೇಳಬೇಕೇ ? ಒಬ್ಬರಿಗಿಂತ ಒಬ್ಬರಲ್ಲಿ ಜಾತ್ರೆಯ ಬಗ್ಗೆ ಇನ್ನಿಲ್ಲದ ಉತ್ಸಾಹ. ಜಾತ್ರೆಯಲ್ಲಿ ಏನೇನನ್ನ ನೋಡುವುದು, ಏನನ್ನ ಕೊಳ್ಳುವುದು ಎನ್ನುವುದರ ಬಗ್ಗೆ ಆಗಲೇ ಹುಡುಗರಲ್ಲಿ ಗಹನವಾದ ಚರ್ಚೆ ಆರಂಭವಾಗಿತ್ತು. ಅಲ್ಲಿನ ಹಲವರಿಗೆ ಬ್ಯಾಟು , ಬಾಲು, ವಾಚು ಇಂತವುಗಳಲ್ಲಿ ಆಸಕ್ತಿ ಇದ್ದರೆ ಇನ್ನು ಕೆಲವರಿಗೆ ಜಾತ್ರೆಯ ಮಿಟಾಯಿ, ಐಸ್ ಕ್ಯಾಂಡಿ, ನಿಂಬು ಸೋಡಾ,ಜಿಲೇಬಿ  ಇಂಥವುಗಳ ರುಚಿ ಸವಿಯುವ ತವಕ. ಇಷ್ಟೆಲ್ಲಾ ಆಸಕ್ತಿ, ತವಕಗಳಿದ್ದರೂ ತಮ್ಮ ತಮ್ಮ ಮನೆಯಲ್ಲಿ ಜಾತ್ರೆಗೆ ಎಷ್ಟು ಹಣ ಕೊಡುತ್ತಾರೆ ಎನ್ನುವುದೇ ಅವರಿಗೆಲ್ಲ ಸಮಸ್ಯೆ. ಆದರೆ ಅದೇನೇ ಆತಂಕವಿದ್ದರೂ  ಜಾತ್ರೆಯ ಕನಸು ಮಾತ್ರ ಹುಡುಗರಲ್ಲಿ ಗಟ್ಟಿಯಾಗಿ ನೆಲೆಯೂರಿತ್ತು. ಮನೆಯವರನ್ನ ಕಾಡಿ ಬೇಡಿ ಎಷ್ಟು ಸಾಧ್ಯವೂ ಅಷ್ಟು ಹಣವನ್ನ ಸಂಗ್ರಹಿಸಲು ಅವರು ಆಗಲೇ ಸಿದ್ಧತೆ ಮಾಡಿಕೊಂಡಿದ್ದರು,
ಮಂಜ ಇಂಥಹ ಜಾತ್ರೆಯ ಕನಸು ಹೊತ್ತ ಆ ಶಾಲಾ ಹುಡುಗರಲ್ಲಿ ಒಬ್ಬ. ಅಷ್ಟೇನೂ ಓದುವುದರಲ್ಲಿ ಜಾಣನಲ್ಲದಿದ್ದರೂ  ಹೊಸ ಹೊಸ ಕನಸುಗಳನ್ನು ಕಟ್ಟಿಕೊಳ್ಳುವುದರಲ್ಲಿ ಎಂದೂ ಹಿಂದೆ ಬಿದ್ದವನಲ್ಲ. ಎಷ್ಟೋ ಸಲ ತನ್ನದೇ ಆದ ವಿಚಿತ್ರ ಕಲ್ಪನೆಯ  ಗುಂಗಿನಲ್ಲಿ ಕಾಲ ಕಳೆಯುವುದೇ ಹೆಚ್ಚು. “ಅದೆಂಥಹ ಹಗಲು ಗನಸು ಬೀಳುತ್ತಪ್ಪ ನಿನಗೆ? ಯಾವಾಗಲೂ ನಿನ್ನದೇ ಲೋಕದಲ್ಲಿ  ಇರುತ್ತಿಯಲ್ಲ ? ಅಂಥಹದ್ದು ಏನಪ್ಪಾ ನೀನು ಯೋಚಿಸೋದು? “ ಅಂತ ಕೇಳಿದರೆ, ಅದು ಏನೆಂಬುದನ್ನ ಹೇಳಲು ತಡಕಾಡುತ್ತಾನೆ. ಕೆಲವೊಮ್ಮೆ ತನ್ನ ವಿಚಿತ್ರ ಬಗೆಯ ಅಲೋಚನೆಯನ್ನ ಹಾಗೋ ಹೀಗೋ ವರ್ಣಿಸಿದರೆ, ಅದನ್ನು ಕೇಳಿದವರು ನಕ್ಕು ಮುಂದೇನೂ ಹೇಳದೇ ಸುಮ್ಮನಾಗುತ್ತಾರೆ.  ಇಂಥಹ ಮಂಜನ ತಲೆಯಲ್ಲಿ ಈಗ ಊರಿನ ಜಾತ್ರೆಯೂ ಸೇರಿಕೊಂಡಿತ್ತು. ಜಾತ್ರೆಯೆಂದರೆ ಬರಿ ಕಯ್ಯಲ್ಲಿ ಹೋಗಲಿಕ್ಕಾಗುವುದೇ?  ಹಾಗೋ ಹೀಗೋ ಅಪ್ಪನನ್ನ ಗೊಳುಬಿದ್ದು ಜಾತ್ರೆಗೆಂದು ಇಪ್ಪತ್ತು ರೂಪಾಯಿ ಸಂಗ್ರಹಿಸಿದ್ದ. “ಈಗಿನ ಕಾಲದಲ್ಲಿ ಇಪ್ಪತ್ತು ರೂಪಾಯಿಗೆ ಏನು ಬರುತ್ತಪ್ಪಾ ?” ಎಂದು ಅವನ  ಗೆಳೆಯರು ಅಣಕಿಸಿದರೂ “ಬರುವುದು ಬರುತ್ತಪ್ಪ” ಎನ್ನುತ್ತ ಮಂಜ ಅವರ ಜೊತೆಯಲ್ಲಿ ಜಾತ್ರೆಗೆ ಹೊರಟಿದ್ದ.
ಮಲ್ಲಿಗೆಪುರದದ್ದು ಸ್ವಲ್ಪ ವಿಭಿನ್ನವಾದ ಜಾತ್ರೆ. ಸಾಮಾನ್ಯವಾಗಿ ಎಲ್ಲಾ ಜಾತ್ರೆಯಲ್ಲಿ ಇರುವಂತೆ  ತೇರು ಎಳೆಯುವ ಪದ್ಧತಿ ಇಲ್ಲದಿದ್ದರೂ, ಬೇರೆ ರೀತಿಯ ಆಚರಣೆಗಳಿಗೇನೂ ಕಡಿಮೆ ಇರಲಿಲ್ಲ. ಹೋರಿ, ದನ ಕರುಗಳನ್ನ ಶೃಂಗಾರ  ಮಾಡಿ ದೇವಸ್ತಾನದ ಸುತ್ತಲಿನ ಆವರಣದಲ್ಲಿ ಮೆರವಣಿಗೆ ಮಾಡುವುದು, ಅದಾದ ಮೇಲೆ ಮೈಮೇಲೆ ಭಾರ ಬಂದವರ ದೇವಸ್ಥಾನ ಪ್ರದಕ್ಷಿಣೆ, ಆಮೇಲೆ ರಾತ್ರಿ ಯಲ್ಲಿ ಕೆಂಡವನ್ನ ಹಾಯುವುದು, ಇಂಥಹ ಆಚರಣೆಗಳೇ ಜಾತ್ರೆಯಲ್ಲಿ ಮಹತ್ವದ್ದು. ಮಂಜ ಮತ್ತವನ ಗೆಳೆಯರೆಲ್ಲ ಜಾತ್ರೆಯ ಸ್ಥಳ ತಲುಪುವ ಹೊತ್ತಿಗೆ ಆಗಲೇ ಜಾತ್ರೆಯ ಆಚರಣೆಗಳು ಪ್ರಾರಂಭವಾಗಿದ್ದವು. ದೇವಸ್ಥಾನದ ಆವರಣದ ತುಂಬೆಲ್ಲ ಆಗಲೇ ಜನರು ಸೇರಿ ಜಾತ್ರೆಯ ಗಲಾಟೆ ಆರಂಭವಾಗಿತ್ತು. ಮಂಜ ಮತ್ತವರ ಗೆಳೆಯರಿಗೆ ಐಸ್ ಕ್ಯಾಂಡಿ ತಿಂದು ಸ್ವಲ್ಪ ದಣಿವಾರಿಸಿ ಕೊಳ್ಳುವಷ್ಟರಲ್ಲೇ ದೇವಸ್ಥಾನದ ವಾದ್ಯದ ಸದ್ದು ಜೋರಾಯಿತು. ಅದು ಮುಗಿಯುವಷ್ಟರಲ್ಲಿ ಕೋಡುಗಳಿಗೆ ಬಣ್ಣ ಬಳಿದುಕೊಂಡು ಅದಕ್ಕೆ ರಿಬ್ಬನ್ನು, ಬಲೂನು ಅಂತೆಲ್ಲ ಸಿಕ್ಕಿಸಿಕೊಂಡು , ಮುಖ ಮೈ ಗಳ  ಮೇಲೆಲ್ಲಾ ಬಗೆ ಬಗೆಯ ಚಿತ್ತಾರ ಬಿಡಿಸಿಕೊಂಡು ಹೋರಿಗಳು ದೇವಸ್ಥಾನದ ಆವರಣವನ್ನ ಪ್ರವೇಶಿಸಿದ್ದವು. ಅವುಗಳ ಕುತ್ತಿಗೆಗೆ ಕಟ್ಟಿದ್ದ ಗಂಟೆಗಳು ಅವುಗಳ ಓಟದ ರಭಸ ತಾಳಲಾರದೇ ತಮ್ಮ ಲಯ ತಪ್ಪಿ ಆಕ್ರಂದಿಸಿದವು. ಇದೆಲ್ಲ  ಮಂಜನ ಎದುರೇ ನಡೆಯುತ್ತಿದ್ದರೂ ಆತ ಕೇಳಿದ್ದು ಮಾತ್ರ ಅಲ್ಲಿ ನಡೆಯುತ್ತಿರುವುದನ್ನ ನೋಡಿದ್ದು ಮಾತ್ರ ಅಲ್ಲಿ ನೆರೆದಿರುವ ಜನಗಳ ಹಿಂಭಾಗವನ್ನ! ಮಂಜ ಹಿಂದೆ ಮುಂದೆ ಯೋಚಿಸದೆಯೇ ಹತ್ತಿರದಲ್ಲೇ ಇದ್ದ ಮರವನ್ನೆರಿದ. ಆಗಲೇ ಆತನ ಗೆಳೆಯರಾದಿಯಾಗಿ ಸಾಕಷ್ಟು ಜನರು ಆ ಮರದ ಮೇಲಿದ್ದರೂ ದೇವಸ್ಥಾನದ ಆವರಣ ನೋಡುವಷ್ಟು ಜಾಗವನ್ನ ಮಂಜ ಹೇಗೋ ಮಾಡಿಕೊಂಡ .  
ಆಗಲೇ ಮೈ ಮೇಲೆ ಭಾರ ಬಂದವರು ದೇವಸ್ಥಾನದ ಸುತ್ತಲಿನ ಆವರಣದಲ್ಲಿ ಅವೇಶದಿಂದ ಸುತ್ತುತ್ತಿದ್ದರು. ಇಷ್ಟು ಹೊತ್ತು ಜನರ ಗದ್ದಲಗಳಿಂದ ಕೂಡಿದ್ದ ದೇವಸ್ಥಾನದ ಆವರಣ ಈಗ ಶಾಂತವಾಗಿ  ಅಲ್ಲಿ ಏನೋ ಒಂದು ತರಹದ ಭಯ, ಭಕ್ತಿ, ಆವೇಶವನ್ನ ಹುಟ್ಟಿಸುವ ವಾತಾವರಣ ಸೃಷ್ಟಿಯಾಗಿತ್ತು. ಅಲ್ಲಿದ್ದವರೆಲ್ಲ ದೇವರ ಮೇಲಿನ ನಂಬಿಕೆಯಿಂದಲೋ ಅಥವಾ ಅಲ್ಲಿನ ದೇವಸ್ತಾನದ ಸುತ್ತ ಸುತ್ತುತ್ತಿರುವ ಭಕ್ತರ  ಆವೇಶದಿಂದಲೋ ಎಂದು ತಿಳಿಯದಾಗಿ ಒಂದು ತರಹದ ವಿಸ್ಮಯದಲ್ಲಿ  ನಿಂತಿದ್ದರೂ, ಮಂಜ ಮಾತ್ರ ತನ್ನದೇ ಯೋಚನಾ ಪ್ರಪಂಚದಲ್ಲಿ ಮುಳುಗಿದ್ದ.  ಈ ರೀತಿ ಆವೇಶಭರಿತವಾಗಿ ಮೈಮೇಲೆ ಬಂದು ಸುತ್ತುವುದಕ್ಕೂ ದೇವರ ಮೇಲಿನ ಭಕ್ತಿಗೂ ಏನು ಸಂಬಂಧ? ಈ ರೀತಿಯ ಆವೇಶ ಭಕ್ತಿಯ ಪರಾಕಾಷ್ಠೆಯೋ  ಅಥವಾ ಮನಸ್ಸಿನ ವಿಕೃತ ಸ್ಥಿತಿಯೋ ಎಂದೆಲ್ಲಾ  ಮಂಜ ತನ್ನದೇ ಆದ ರೀತಿಯಲ್ಲಿ ವಿಶ್ಲೇಷಿಸ ತೊಡಗಿದ್ದ. ಆದರೆ ಆತನಿಗೆ ಅದು ಏನೆಂದು ನಿರ್ಧರಿಸಲಾಗಿದೆ ತಡಕಾಡಿದ. ತನ್ನ ಸಂಶಯದ ಬಗ್ಗೆ ಅಲ್ಲೇ ಯಾರನ್ನಾದರೂ ಕೇಳೋಣ ವೆನಿಸಿದರೂ, ಈ ಸಮಯದಲ್ಲಿ ಅದು ಉಚಿತವಲ್ಲ ಎಂದು ನಿರ್ಧರಿಸಿ ಸುಮ್ಮನಾದನು.  ಆಗಲೇ ಕಳಸಹೊತ್ತವ  ಎಲ್ಲವರಿಗಿಂತ  ಕೊನೆಯದಾಗಿ  ಬಂದು, ದೇವಸ್ತಾನದ ಹೊಸ್ತಿಲಲ್ಲಿ ನಿಂತು, ಅಲ್ಲಿ ಸಣ್ಣ ಪೂಜೆ ಮುಗಿದು , ಮಂಗಳಾರತಿ ಆದ ಮೇಲೆ, ಬಂದ ಆವೇಶವೆಲ್ಲ ಇಳಿದ ನಂತರ ಇನ್ನುಳಿದ ಪೂಜೆ, ಕೈಂಕರ್ಯಗಳೆಲ್ಲ ಮುಂದುವರಿದಿದ್ದರೂ ಜನರೆಲ್ಲಾ ಅದರಲ್ಲಿ ಅಷ್ಟೇನೂ ಆಸಕ್ತಿ ತೋರಿಸದೆ, ಜಾತ್ರೆಯ ಅಂಗಡಿಗಳಿಗೆ ಬೇಸಿಗೆಯ ಬಿಸಿಲಿಗೆ ಬರಡಾಗಿದ್ದ ನದಿಗೆ ಮಳೆಯ ನೀರು ನುಗ್ಗುವಂತೆ ನುಗ್ಗಿದರು.
ಮಂಜ ತನ್ನ ಸ್ನೇಹಿತರ ಜೊತೆ ಜಾತ್ರೆಯ ಅಂಗಡಿಗಳಿಗೆ ತಲುಪುವ ಹೊತ್ತಿಗೆ ಆಗಲೇ ಊರವರು ಎಲ್ಲೆಡೆ ನುಗ್ಗಿ ಖರೀದಿ ಆರಂಭಿಸಿದ್ದರು. ಮಂಜನ ಸ್ನೇಹಿತರಿಗೆ ಯಾವ ಅಂಗಡಿಗೆ ಮೊದಲು ಹೋಗಬೇಕೆಂದು ಗೊಂದಲವಿದ್ದರೂ ಮೊದಲು ಏನಾದರೂ ತಿನ್ನೋಣ ಎನ್ನುತ್ತ ಹತ್ತಿರದಲ್ಲೇ ಇದ್ದ ಮಿಠಾಯಿ ಅಂಗಡಿಗೆ ಹೋಗಿ ಅಲ್ಲೇ ತಯಾರಿಸುತಿದ್ದ ಬಿಸಿ ಬಿಸಿ ಜಿಲೇಬಿ ತಿನ್ನಲು ನಿರ್ಧರಿಸಿದರು. “ಈ ಜಾತ್ರೆಯ ಜಿಲೇಬಿ ತಿನ್ನುವ ಮಜವೇ ಬೇರೆ”  ಎನ್ನುತ್ತ ಜಿಲೇಬಿ ಸವಿದು ಅವರು ಹಾಗೆ ಒಂದು ಸುತ್ತು ಜಾತ್ರೆಯನ್ನು ಸುತ್ತಲು ಅಣಿಯಾದರು. “ಈ ಸಲ ಹೊಸತು ಏನೂ ಇಲ್ಲವಪ್ಪ ಅದೇ ಅಂಗಡಿಗಳು ಅದೇ ಸಾಮಾನು” ಎನ್ನುತ್ತ ಮಂಜನ ಸ್ನೇಹಿತರು ಮೂದಲಿಸುತ್ತಿದ್ದರೂ, ಪ್ರತೀ ಅಂಗಡಿಯನ್ನ ಸುತ್ತಿ ಅಲ್ಲಿ ಏನೀನಿದೆ ಎನ್ನುವುದನ್ನ ಪರೀಕ್ಷಿಸಲು ಯಾರೂ ಮರೆಯಲಿಲ್ಲ.  ಜಾತ್ರೆಗೆ ಬಂದ ಮೇಲೆ ಏನಾದರೂ ತೆಗೆದುಕೊಂಡು ಹೋಗಲೇಬೇಕೆಂದು ನಿಶ್ಚಯಿಸಿದ್ದ ಅವರೆಲ್ಲ   ತಮಗೆ ಇಷ್ಟವಾದ ಸಾಮಾನುಗಳನ್ನು ಕೊಳ್ಳಲು ನಿರ್ಧರಿಸಿ ಬೇರೆ ಬೇರೆಯಾಗಿ ಅಂಗಡಿಗಳಿಗೆ ತೆರಳಿದರು. ಮಂಜನಿಗೆ ಆಟಿಕೆಗಳಲ್ಲಿ ಅಷ್ಟೊಂದು ಆಸಕ್ತಿಯೇನು ಇರದಿದ್ದರೂ ಒಮ್ಮೆ ಹಾಗೇ ನೋಡುವ ಎನ್ನುತ್ತ ಹತ್ತಿರದಲ್ಲೇ ಇದ್ದ ಒಂದು ಆಟಿಕೆ ಅಂಗಡಿಗೆ ಹೊಕ್ಕಿದ. ಎಲ್ಲಾ ಆಟಿಕೆಗಳೂ ಅವೇ, ಪ್ರತೀ ಜಾತ್ರೆಯಲ್ಲಿಯೂ ನೋಡಿರುವ ಆಟಿಕೆಗಳೇ ಅದರಲ್ಲಿ ಹೊಸತೇನೂ ಇರಲಿಲ್ಲ. ಇನ್ನೇನಪ್ಪ ಕೊಳ್ಳುವುದು ಎಂದು ಯೋಚಿಸುತ್ತಿರುವಾಗಲೇ ಒಂದು ಉಪಾಯ ಮಂಜನ ತಲೆಯಲ್ಲಿ ಚಕ್ಕನೆ ಹೊಳೆಯಿತು.  ಈ ಆಟಿಕೆಯನ್ನೇ ಬಳಸಿ ಒಂದು ಹೊಸ ಬಗೆಯ ಆಟಿಕೆ ಮಾಡಿದರೆ ಹೇಗೆ ? ಹೊಸ ಬಗೆಯ ಅದನ್ನ ಇದುವರೆಗೆ ಯಾರೂ ನೋಡಿರಬಾರದು. ಅಂಥಹದ್ದು ಏನು ಮಾಡಬಹುದು ಎಂದು ಯೋಚಿಸುತ್ತಿರುವಾಗಲೇ ಕಾರು ವಿಮಾನ ಹಡಗು ಈ ಎಲ್ಲಾ ಆಟಿಕೆಗಳನ್ನ  ಸೇರಿಸಿ ಒಂದು ಹೊಸ ಬಗೆಯ ಆಟಿಕೆ ಮಾಡಿದರೆ ಹೇಗೆ ಎನ್ನುವ ವಿಚಾರ ಮಂಜನ ಮನಸ್ಸನ್ನ ಹೊಕ್ಕಿ ಆತ ಬೇರೇನನ್ನೋ ಯೋಚಿಸದಂತಾದ. ನೆಲದಮೇಲೂ ಓಡುವ, ನೀರಲ್ಲೂ ಈಜುವ, ಗಾಳಿಯಲ್ಲೂ ಹಾರಬಲ್ಲ ಆ ಹೊಸ ಬಗೆಯ ಆಟಿಕೆಯನ್ನ ತಾನು ತಯಾರೀಸಲೇ ಬೇಕೆಂದು ನಿರ್ಧರಿಸಿ, ತನ್ನ ಹತ್ತಿರ ಇದ್ದ ಇಪ್ಪತ್ತು ರುಪಾಯಿಯಲ್ಲಿ ಅಲ್ಲಿ ಸಿಕ್ಕುವ ಚಿಕ್ಕ ಪುಟ್ಟ ಆಟಿಕೆಗಳನ್ನ ಆರಿಸಿ ತನ್ನ ಆಟಿಕೆಗೆ ಏನೇನು ಉಪಯೋಗಿಸಲು ಸಾಧ್ಯವೂ ಅಂಥಹ ಆಟಿಕೆಗಳನ್ನೆಲ್ಲ ಕೊಳ್ಳಲು  ನಿರ್ಧರಿಸಿದ. ಅಂತೂ ಹೇಗೋ ಚೌಕಾಶಿ ಮಾಡಿ ತನ್ನ ಕಾರ್ಯಕ್ಕೆ  ಪುನರುಪಯೋಗಿಸಬಹುದು ಎಂದು ಅನಿಸಿದ ಒಂದಿಷ್ಟು ಆಟಿಕೆಯನ್ನ  ಮಂಜ ಕೊಂಡು ತಂದಿದ್ದ. ಮಂಜ ಸ್ನೇಹಿತರು ಆಗಲೇ ಕ್ರಿಕೆಟ್ ಬ್ಯಾಟು, ವಾಲೀ ಬಾಲು, ಟೆನ್ನಿಸ್ ಬಾಲು ಅಂತೆಲ್ಲ ಕೊಂಡು ತಂದಿದ್ದರು. ಅವರೆಲ್ಲ ಮಂಜನ ಆಟಿಕೆ ಸಾಮಾನನ್ನು ನೋಡಿ “ಏನೋ ಇದು ಸಣ್ಣ ಮಕ್ಕಳು ಆಡುವ ಆಟಿಕೆ ಸಾಮಾನು ತಂದಿದ್ದೆಯಲ್ಲೋ, ಇನ್ನೂ ಚಿಕ್ಕ ಮಕ್ಕಳ ಹಾಗೆ ಕಾರು ತಳ್ಳುತ್ತಿಯಾ ?” ಎಂದು ಅಣಕಿಸಿದರೂ “ನೋಡು ಇದರಿಂದ ಏನು ಮಾಡ್ತೀನಿ ಅಂತ, ನೀವ್ಯಾರೂ ಅದನ್ನು ನೋಡಿರಲ್ಲ ಅಂತಹದ್ದನ್ನು ಮಾಡ್ತೇನೆ ” ಎನ್ನುತ ಮಂಜ ತನ್ನನ್ನ ಸಮರ್ಥಿಸಿಕೊಂಡ. “ಏನು ಬೇಕಿದ್ರೂ ಮಾಡ್ಕೊಳ್ಳಪ್ಪ,  ಹಾಳಾಗೋದು ನಿಂದೇ ದುಡ್ಡು” ಎನ್ನುತ್ತ ಅವನ ಸ್ನೇಹಿತರು ಮೂದಲಿಸಿದರೂ ಮಂಜ ಮಾತ್ರ ತನ್ನ ಕನಸಿನ ಆಟಿಕೆಯ ಯೋಚನೆಯಲ್ಲೇ ಮುಳುಗಿದ್ದ.
ಆಗಲೇ ನೇಸರ ದೇವಸ್ಥಾನದ ಹಿಂಭಾಗದಲ್ಲಿ ಮುಳುಗಿ ಇನ್ನು ಜಾತ್ರೆಗೆ ಬೆಳಕಿನ ವ್ಯವಸ್ಥೆ ನೀವೇ ನೋಡಿಕೊಳ್ಳಿ ಎನ್ನುವ ಹಾಗೆ ದೇವಸ್ತಾನದ ಸುತ್ತಲೂ ತಿಳಿಯಾದ ಕತ್ತಲು ಆವರಿಸಿತ್ತು. ತಡ ರಾತ್ರಿ ನಡೆಯುವ ಭಕ್ತರ ಬೆಂಕಿಯ ಕೆಂಡ ಹಾಯುವ ಸಂಪ್ರದಾಯಕ್ಕೆ ಅಣಿಗೊಳಿಸಲು ಆಗಲೇ ರಾಶಿ ರಾಶಿ  ಕಟ್ಟಿಗೆಗೆ ಬೆಂಕಿ ಹಾಕಿ ಅದರ ಜ್ವಾಲೆಯ ಪ್ರಕಾಶ ಕಿರಣಗಳ ಜೊತೆ ಕಟ್ಟಿಗೆಯ ಹೊಗೆಯೂ ಸಂಜೆಯ ಕತ್ತಲೆಯ ಮಬ್ಬಿನ ಜೊತೆ ಹರಡಿಕೊಂಡಿತ್ತು. ಊರಿನ ಯುವಕರ ನಾಟಕದ ರಂಗಸ್ಥಳದ ತಯಾರಿ ಆಗಲೇ ಸಾಕಷ್ಟು ಮುಗಿದು ಒಂದು ಹಂತಕ್ಕೆ ತಲುಪಿತ್ತು. ಅಲ್ಲಲ್ಲಿ ಒಂದೊಂದಾಗಿ ಅಂಗಡಿಗಳ ದೀಪಗಳು ಈಗ ಮಿನುಗಲು ಆರಂಭವಾಗಿದ್ದವು. ಇದರ ಜೊತೆ ಸಂಜೆಯಾದ ಮೇಲೆ ಜಾತ್ರೆಗೆಂದು ಬರುವ ಮತ್ತಷ್ಟು ಜನರು, ಹೀಗೆ  ಇವೆಲ್ಲಾ ಸೇರಿ ಜಾತ್ರೆಗೆ ಹೊಸ ಬರೆಯ ರಂಗನ್ನು ಪಡೆದಿತ್ತು. ಹೇಗಿದ್ದರೂ ಮಂಜನಿಗೆ ಮಾತ್ರ ತನ್ನ ಆಟಿಕೆಯದ್ದೇ ಕನಸು ಮನಸ್ಸನ್ನು ಆವರಿಸಿತ್ತು. ಆತ ಜಾತ್ರೆಯಲ್ಲಿ ಬೇರೇನನ್ನೋ ಯೋಚಿಸದಂತಾದ. ಜಾತ್ರೆಯ ಈ ಸಂಜೆಯ ವಿಶಿಷ್ಟ ಅನುಭವವನ್ನೂ ಅನುಭವಿಸದಾದ. “ ನಾನು ಮನೆಗೆ ಹೊರಟೆ ” ಎನ್ನುತ್ತ ಹೊರಡಲು ಮಂಜ ಸಿದ್ದನಾದ. “ರಾತ್ರಿ ನಾಟಕ ನೋಡುವುದಿಲ್ಲವ? ಕೆಂಡ ಹಾಯುವುದು ನೋಡುವುದಿಲ್ಲವ? ಇದೆಲ್ಲಾ ನೋಡದೆ ಇದ್ರೆ ನೀನು ಜಾತ್ರೆಗೆ ಬಂದೂ ಪ್ರಯೋಜನವಿಲ್ಲ “ ಎಂದೆಲ್ಲಾ  ಆತನ ಸ್ನೇಹಿತರು ಒತ್ತಾಯಿಸಿದರೂ ಮಂಜ ಮಬ್ಬು ಬೆಳಕಿನಲ್ಲಿ ಮನೆಯ ದಾರಿ ಹಿಡಿದ.
ಮನೆ ತಲುಪುವ ಹೊತ್ತಿಗೆ ಆಗಲೇ ಪೂರ್ಣ ಕತ್ತಲು ಆವರಿಸಿತ್ತು. ಮಂಜ ಹಾಗೋ ಹೀಗೋ ಅಂದಾಜಿನ ಮೇಲೆ ಕತ್ತಲಿನಲ್ಲಿ ಮನೆಯ ದಾರಿ ಹಿಡಿದು ತಲುಪಿದ್ದ. ಕತ್ತಲೆಯಲ್ಲೇ ಬಂದದ್ದನ್ನು ನೋಡಿ ಮಂಜನ ಅಪ್ಪ “ಎಷ್ಟೋ ಹೊತ್ತು ಜಾತ್ರೇಲಿ ವೇಳೆ ಹಾಳು ಮಾಡುವುದು. ಬೆಳಕಿದ್ದಾಗಲೇ ಬರುವುದು ಬಿಟ್ಟು ಏನು ಕತ್ತಲಿನಲ್ಲಿ ಬರ್ತಾ ಇದ್ದೀಯ” ಎಂದು ಸ್ವಲ್ಪ ಏರಿದ ದನಿಯಲ್ಲೇ ಹೇಳಿದ.  ಮಂಜ ಏನೂ ಹೇಳದೇ ಮನೆಯೊಳಗೆ ಹೋದೊಡನೆ ತಾನು ತಂದಿದ್ದ ಆಟಿಕೆಗಳನ್ನೆಲ್ಲ ತೆಗೆದು ಮುಂದೆ ಹೇಗೆ ಅದನ್ನ ಬಳಸಿಕೊಳ್ಳಬೇಕು ಎನ್ನುವುದನ್ನ ಯೋಚಿಸುತ್ತಿರುವಾಗಲೇ “ಏನೋ ಇದು ಜಾತ್ರೆಗೆ ಹೋಗಿ ಈ ಚಿಕ್ಕ ಮಕ್ಕಳಾಡುವ ಆಟಿಕೆ ತಂದಿದ್ದೆಯಲ್ಲೋ, ಕೊಟ್ಟ ದುಡ್ಡನ್ನೆಲ್ಲ ಹಾಳು ಮಾಡ್ಕೊಂಡು ಬಂದ್ಯಲ್ಲೋ ” ಎಂದು ಮಂಜನ ಅಪ್ಪ ಅನ್ನುತ್ತಿರುವಾಗಲೇ ಮಂಜ “ಇದರಿಂದ ನಾನು ಹೊಸ ಆಟಿಕೆ ಮಾಡೋಣ ಅಂತ ತಕೊಂಡು ಬಂದೆ. ನನ್ನ ಹೊಸ ಆಟಿಕೆ ಮಾಡಿದ ಮೇಲೆ ನೋಡಿ, ನೀವ್ಯಾರೂ ಅದನ್ನ ಎಲ್ಲೂ ನೋಡಿರಲ್ಲ ಅಂಥಹ ಆಟಿಕೆ ಅದು” ಎಂದು ತನ್ನ ಕನಸಿನ ಆಟಿಕೆಯ ಬಗ್ಗೆ ವರ್ಣಿಸಿದ.
    “ಆಟಿಕೆ ಮಾಡ್ತಾನಂತೆ ಆಟಿಕೆ, ಇದಕ್ಕೆಯೇನೋ ಶಾಲೆಗೆ ನೀನು ಹೋಗುದು? ಪರೀಕ್ಷೆ ಹತ್ತಿರ ಬಂತಲ್ಲ ಅದಕ್ಕೆ ಓದುವುದು ಬಿಟ್ಟು, ಆಟಿಕೆ ಮಾಡ್ತಾನಂತೆ. ಯಾವಾಗಲೂ ತನ್ನ ಮನಸ್ಸಿಗೆ ಬಂದ ಹಾಗೆ ಮಾಡ್ತಾ ಇರ್ತಾನೆ. ಹೀಗೆ ಆದ್ರೆ ಮುಂದೆ ಏನ್ಮಾಡೋದೊ ಏನೋ. ಇವನು ಇಂಜಿನಿಯರ್ ಆಗಬೇಕಂತ ಕನಸೆಲ್ಲ ಕಂಡಿದ್ದೆ. ಇವನು ನೋಡಿದ್ರೆ ಹೀಗೆ, ಇದೇ ರೀತಿ ಮುಂದುವರಿದರೆ ನಮ್ಮ ಕನಸೆಲ್ಲ ಬರಿ ಕನಸಾಗಿಯೇ ಇರುತ್ತದಷ್ಟೇ”  ಎಂದು ಮಂಜನ  ತಂದೆ ಅಲ್ಲಿಯೇ ಇದ್ದ ತನ್ನ ಹೆಂಡತಿಯನ್ನೂ ಜೊತೆ ಸೇರಿಸಿ ಒಂದಿಷ್ಟು ಬಯ್ದ. 

  ಮಂಜ ಅದಕ್ಕೇನೂ ತಲೆ ಕೆಡಿಸಿ ಕೊಂಡವನಂತೆ ತೋರಲಿಲ್ಲ. ತನ್ನ ಕನಸಿನ ಆಟಿಕೆಯಲ್ಲಿ ಮಂಜ ತಲ್ಲೀನನಾಗಿದ್ದ.

“ಈಗ ಪುಸ್ತಕ ಹಿಡಿಯುತ್ತಿಯ ಅಥವಾ ಬೆತ್ತದ ರುಚಿ ತೋರಿಸಲ ?” ಎನ್ನುತ್ತ ಮಂಜನ ತಂದೆ ಸಿಟ್ಟಿನಿಂದ ಮಂಜನತ್ತ ನುಗ್ಗಿದ.

ಮಂಜನಿಗೆ ಬೇರೇನೂ ತೋಚಲಿಲ್ಲ. ತಂದ ಆಟಿಕೆಗಳನ್ನ ಅಲ್ಲೇ ಬಿಸಾಕಿ ತನ್ನ ಓದುವ ಕೋಣೆಯತ್ತ ಮುಖ ಮಾಡಿದ.