ಶನಿವಾರ, ಮಾರ್ಚ್ 31, 2012

ಕೊನೆಯ ನಗು ..


ಸುಬ್ಬಣ್ಣ ಎಂದಿನಂತೆ ಮಲ್ಲಿಗೆಪುರದ  ‘ಶ್ರೀ ವೆಂಕಟೇಶ್ವರ ಹೋಟೆಲ್’ ನ ಮರದ ಬೆಂಚಿನ ಮೇಲೆ ಕುಳಿತು ತನ್ನ ರಾಜಕೀಯ ಜ್ಞಾನ ಹಾಗೂ ಇತ್ತೀಚಿನ ರಾಜಕೀಯ ವಿದ್ಯಮಾನಗಳ ಬಗ್ಗೆ ಅಲ್ಲಿಗೆ ಬಂದವರಿಗೆಲ್ಲ ತನ್ನ ಉಪದೇಶ ನೀಡುತ್ತಿದ್ದ. ಅದು ಇಡೀ ಮಲ್ಲಿಗೆಪುರಕ್ಕೆ ಒಂದೇ ಹೋಟೆಲ್ ಆಗಿದ್ದರೂ ಅಲ್ಲಿಗೆ ಬರುತ್ತಿದ್ದವರು ಬೆರಳೆಣಿಕೆಯ ಜನ ಮಾತ್ರ. ಅದರಲ್ಲಿ ಸುಬ್ಬಣ್ಣ ಮಾತ್ರ  ಖಾಯಂ ಗಿರಾಖಿ. ಪಶ್ಚಿಮ ಘಟ್ಟದ ಇಳಿಜಾರಿನಲ್ಲಿ ಇರುವ ಮಲ್ಲಿಗೆಪುರದಲ್ಲಿ, ಆರಂಭದಲ್ಲಿ ಗುಡುಗು,ಮಿಂಚಿನೊಂದಿಗೆ ಆರ್ಭಟಿಸುತ್ತ ಆಗೊಮ್ಮೆ ಈಗೊಮ್ಮೆ ತುಂತುರು ಆಗಿ ಬೀಳುತ್ತಿದ್ದ ಮುಂಗಾರು ಮಳೆ, ಆಗಲೇ ಜೋರಾಗಿ ಬೀಳುವದಕ್ಕೆ ಪ್ರಾರಂಭವಾಗಿ ಎರಡು ಮೂರು ವಾರಗಳೇ ಕಳೆದಿದ್ದವು. ಆಗಲೇ ಊರಿನ ಗದ್ದೆಗಳಲ್ಲಿ ಭತ್ತದ ಬಿತ್ತನೆ ಆರಂಭವಾಗಿತ್ತು. ಊರಿನಲ್ಲಿ ಬಹುಪಾಲು ಮಂದಿಗೆ ಅಡಿಕೆ ತೋಟವೇ ಜೀವನೋಪಾಯವಾದ್ದರಿಂದ ಯಾರೂ ಭತ್ತದ ಗದ್ದೆಯ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ. ಈ ಸಾರ್ತಿ ಸ್ವಲ್ಪ ಅಗತ್ಯಕ್ಕಿಂತ ಜಾಸ್ತಿ ಮಳೆಯಿಂದಲೋ ಏನೋ ಮಲ್ಲಿಗೆಪುರ  ಹಾಗೂ ಅಕ್ಕ ಪಕ್ಕದ ಊರುಗಳಲ್ಲಿ ಅಡಿಕೆ ಮರಗಳಿಗೆ ಒಂದು ರೀತಿಯ ವಿಚಿತ್ರ ಕೊಳೆ ರೋಗ ಹರಡುತ್ತಿತ್ತು. ಗೊತ್ತಿರುವ ಎಲ್ಲಾ ಓಷಧಿಗಳನ್ನು, ರಾಸಾಯನಿಕ ಗಳನ್ನು ಅಡಿಕೆ ಕೊನೆಗಳಿಗೆ ಸಿಂಪಡಿಸಿದರೂ ಅಡಿಕೆ ಕಾಯಿ ರೋಗದಿಂದ ಕೊಳೆತು ನೆಲಕ್ಕೆ ಬೀಳುವದು ತಪ್ಪಲಿಲ್ಲ. ಊರಿನಲ್ಲೆಲ್ಲ ಇದರದ್ದೇ ಸುದ್ದಿ, ಚರ್ಚೆ. ಪ್ರತಿಯೊಬ್ಬರಲ್ಲೂ ಅಡಿಕೆ ರೋಗದ ಬಗ್ಗೆ ಒಂದೊಂದು ಅಭಿಪ್ರಾಯ ಇತ್ತಾದರೂ ಯಾರೂ ಒಬ್ಬರನ್ನೊಬ್ಬರು ಒಪ್ಪಲು ಸಿದ್ದರಿರಲಿಲ್ಲ.
ಆದರೆ ಇವತ್ತು ಯಾಕೋ ‘ಶ್ರೀ ವೆಂಕಟೇಶ್ವರ ಹೋಟೆಲ್’ ನಲ್ಲಿ ಎಂದಿನಂತಹ ವಾತಾವರಣ ಇರಲಿಲ್ಲ. ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದ ಕೆಲಸವಿಲ್ಲದೆ ಖಾಲಿ ಕೂತದ್ದರಿಂದಲೋ  ಅಥವಾ ಒಬ್ಬರು ಹೋದದ್ದನ್ನು ನೋಡಿ ಇನ್ನೊಬ್ಬರು ಹೋದದ್ದರಿಂದಲೋ ಏನೋ ಇವತ್ತು ಹೋಟೆಲ್ ತುಂಬಾ ಜನರಿದ್ದರು. ಊರಿನ ಮುಖ್ಯ ರಸ್ತೆಯ ಬದಿಯಲ್ಲಿ ಇದ್ದ ಹೋಟೆಲು ಇನ್ನೂ ನಿರ್ಮಾಣ ಹಂತದಲ್ಲಿರುವ ಕಟ್ಟಡ. ಒಂದು ವರ್ಷದ ಹಿಂದೆ ಮಲ್ಲಿಗೆ ಪುರದ ಸುತ್ತಮುತ್ತ ಯಾವುದೇ ಹೋಟೆಲ್ ಇಲ್ಲದ್ದನ್ನು ಗೊತ್ತುಮಾಡಿದ ರಾಮಣ್ಣ, ಘಟ್ಟದ ಕೆಳಗಿನಿಂದ ಬಂದು ಈ ಊರಲ್ಲಿ ಹೋಟೆಲ್ ದಂಧೆ ಶುರುಮಾಡಿದ್ದ. ಸುಬ್ಬಣ್ಣನ ರಸ್ತೆಯ ಬದಿಯ ಹಾಳುಬಿದ್ದ ಜಾಗ ಗುತ್ತಿಗೆಗೆ ಪಡೆದು, ಸುತ್ತಲೂ ನಾಲ್ಕು ದೊಡ್ಡ ಮರದ ಕಂಬ ನಿಲ್ಲಿಸಿ ಅದರ ಮಧ್ಯದಲ್ಲಿ ಅರ್ಧದಷ್ಟು ಎತ್ತರಕ್ಕೆ ಮಣ್ಣಿನ ಗೋಡೆ ಎಬ್ಬಿಸಿದ್ದ. ಹೋಟೆಲಿನ ಮೇಲೆ ಅಡಿಕೆ ಮರದಿಂದ ಛಾವಣಿ ಮಾಡಿ ತೆಂಗಿನ ಮರದ ಗರಿ ಹಾಗೂ ಅಡಿಕೆ ಮರದ ಸೋಗೆ ಯನ್ನು ಅದರ ಮೇಲೆ ಹೊದೆಸಿ, ಈಗ ಮಳೆ ಜೋರಾದ್ದರಿಂದ ಪೇಟೆಯಿಂದ ಪ್ಲಾಸ್ಟಿಕ್ ಶೀಟ್ ತರಿಸಿ ಮಾಡಿನ ಮೇಲೆ ನೀರು ಸೋರದಂತೆ ಹೊದೆಸಿದ್ದ. ಹೋಟೆಲ್ ಒಳಗೆ ನಾಲ್ಕಾರು ಮರದ ಬೆಂಚು, ಪ್ಲಾಸ್ಟಿಕ್ ಖುರ್ಚಿಯನ್ನು ಹಾಕಿ ಹೋಟೆಲನ್ನು ಒಂದು ಹಂತಕ್ಕೆ ತಂದಿದ್ದ. ಹೋಟೆಲಿಗೆ ಊರಿನವರು ತಿನ್ನುವುದಕ್ಕಿಂತ ಹರಟಲು ಹೆಚ್ಚಾಗಿ ಬರುತ್ತಿದ್ದರಿಂದ ರಾಮಣ್ಣನ ಆದಾಯವೂ ಅಷ್ಟಕ್ಕಷ್ಟೇ ಇತ್ತು. ಆದರೆ ಇವತ್ತು ಈಗಾಗಲೇ ಹೋಟೆಲಿನ ಬೆಂಚು, ಖುರ್ಚಿಗಳನ್ನೆಲ್ಲ ಸಾಧ್ಯವಿದ್ದಷ್ಟು ಊರಿನವರು ಆಕ್ರಮಿಸಿಕೊಂದಿದ್ದರಿಂದ ಸ್ವಲ್ಪ ತಡವಾಗಿ ಬಂದವರಿಗೆಲ್ಲ ಹೋಟೆಲಿನ ಮಣ್ಣಿನ ನೆಲವೇ ಗತಿ ಎಂಬಂತಾಯಿತು. ಆದದ್ದಾಗಲಿ ಅನ್ನುತ್ತ ಕೆಲವರು ತಮ್ಮ ಹೆಗಲ ಮೇಲಿದ್ದ ಮಳೆಯಲ್ಲಿ ಅಲ್ಪ ಸ್ವಲ್ಪ ಒದ್ದೆಯಾಗಿದ್ದ ಕೆಂಪಗಿನ ಟುವಾಲನ್ನು ನೆಲದ ಮೇಲೆ ಹಾಸಿ ಅದರ ಮೇಲೆ ಕುಳಿತರು. ಇನ್ನೂ ಕೆಲವರು ನೆಲದ ಮೇಲೆ ಕುಳ್ಳುವುದು ತಮಗೆ ಅವಮಾನವೆಂಬಂತೆ ಅಲ್ಲಿಯೇ ಮಣ್ಣಿನ ಗೋಡೆಗೆ ಒರಗಿ ನಿಂತರು. ಇನ್ನಷ್ಟು ಮಂದಿ ಅತ್ತಲಾಗಿ ಕುಳಿತುಕೊಳ್ಳಲೂ ಬಾರದೆ ಇತ್ತಲಾಗಿ ಒಂದು ಕಡೆ ನಿಲ್ಲದೆ ಈಗಾಗಲೇ ಒದ್ದೆಯಾಗಿದ್ದ ತಮ್ಮ ಉದ್ದ ಕಾವಿನ ಕೊಡೆಯಿಂದ ನೀರನ್ನು ಸುರಿಸುತ್ತಾ ಅತ್ತಿಂದಿತ್ತ ಓಡಾಡುತ್ತಿದ್ದರು.
ರಾಮಣ್ಣ ಒಮ್ಮೆಲೇ ಇಷ್ಟೊಂದು ಜನರನ್ನು ತನ್ನ ಹೋಟೆಲ್ ನಲ್ಲಿ ಮೊದಲ ಸಲ ನೋಡಿ ಗಾಬರಿಯಾಗದಿದ್ದರೂ ಬಂದ ಜನರಿಗೆ ಚಹಾ ತಿಂಡಿಗೆ ಏನು ಮಾಡಬೇಕೆಂದು ಗಾಬರಿಯಾದ. ಈಗಾಗಲೇ ಸಂಜೆಯಾದ್ದರಿಂದ ಬರಿ ಐದಾರು ಜನರಿಗೆ ಆಗುವಷ್ಟು ಮಾತ್ರ ಚಹಾ ಇತ್ತು. ಆವತ್ತು ಒಂದೆರಡು ಬಗೆಯ ತಿಂಡಿಯನ್ನ ಸ್ವಲ್ಪವೇ  ಮಾಡಿದ್ದರಿಂದ ಅದೂ ಖಾಲಿಯಾಗುತ್ತ ಬಂದಿತ್ತು. ಅಲ್ಲೇ ಹಿಂಬದಿಗೆ ಚಹಾದ ಲೋಟ ತೊಳೆಯುತ್ತಿದ್ದ ತನ್ನ ಹೆಂಡತಿಗೆ ಏನನ್ನೋ ಸಂಜ್ಞೆ ಮಾಡಿದ . ಸ್ವಲ್ಪವೂ ಹಿಂದೆ ಮುಂದೆ ಯೋಚಿಸದೆ ರಾಮಣ್ಣನ ಹೆಂಡತಿ ಯಾರಿಗೂ ಗೊತ್ತಾಗದಂತೆ ಒಂದಿಷ್ಟು ನೀರನ್ನು ಒಲೆಯ ಮೇಲೆ ಸದ್ದು ಮಾಡುತ್ತಾ ಕುಡಿಯುತ್ತಿದ್ದ ಚಹಾದ ಪತ್ರೆಗೆ ಸುರಿದು ಅದು ಸುಮ್ಮನಾಗುವಂತೆ ಮಾಡಿದಳು. ಹಾಗೋ ಹೀಗೋ ನೀರು ಚಹಾವನ್ನ ಬಂದ ಕೆಲವರಿಗೆ ಹಂಚಿದ, ಇನ್ನು ಕೆಲವೇ ಕೆಲವು ಭಾಗ್ಯವಂತರಿಗೆ ಮಾತ್ರ ತಿಂಡಿ ಲಭ್ಯವಾಯಿತು. ಆಗಲೇ ಮನೆಯಿಂದ ಚಹಾ ಕುಡಿದು ಹರಟಲು ಬಂದಿದ್ದ ಹಲವರು ಇದನ್ನೆಲ್ಲಾ ನೋಡಿಯೂ ನೋಡದವರಂತೆ ಇದ್ದರು.
ಇದನ್ನೆಲ್ಲಾ ನೋಡಿದ ಸುಬ್ಬಣ್ಣನಿಗೆ ಮಾತ್ರ ಖುಷಿಯೋ ಖುಷಿ. ಮುಂದಿನ ಪಂಚಾಯತಿ ಚುನಾವಣೆಗೆ ಪ್ರಚಾರ ಮಾಡಲು ಇದೇ ಸರಿಯಾದ ಸಂಧರ್ಭ ಎಂದು ಎಣಿಸಿ, ತಾನು ಕುಳಿತಲ್ಲಿಂದಲೇ ಎದ್ದು ತನ್ನ ಭಾಷಣ ಪ್ರಾರಂಭ ಮಾಡಿದ. ಹಲವರಿಗೆ  ಇದು ಹಾಸ್ಯಸ್ಪದ ಅಂತ ಅನಿಸಿದರೂ ಏನಾದರೂ ಹೊಸ ವಿಷಯ ಹೇಳಬಹುದು ಅಂತ ಕುತೂಹಲ ವಹಿಸಿದರು. ಇನ್ನು ಯಾವ್ಯಾವುದೋ ಕಾರಣಕ್ಕೆ ಸುಬ್ಬಣ್ಣನನ್ನು ದ್ವೇಷಿಸುತ್ತಿದ್ದ ಕೆಲವರು ಮಾತ್ರ ಅವನತ್ತ ಲಕ್ಷ್ಯ ವಹಿಸದೇ ಅವನು ಏನು ಹೇಳುತ್ತಾನೆ ಎಂಬುದು ಆಗಲೇ ತಿಳಿದವರಂತೆ ನಟಿಸಿದರು.
ಸುಬ್ಬಣ್ಣ ತನ್ನ ಎಂದಿನ ರಾಜಕೀಯ ಸುದ್ದಿ ಬಿಟ್ಟು ಈ ವರ್ಷದ ಭಾರೀ ಮಳೆಯ ಬಗ್ಗೆ ವಿವರಿಸತೊಡಗಿದ. “ನೋಡಿ ಈ ಮಳೆ ನಮ್ಮೂರಲ್ಲಷ್ಟೇ ಅಲ್ಲ ಇಡೀ ದೇಶಾದ್ಯಂತ ಅನಾಹುತ ಮಾಡ್ತಾ ಇದೆ” ಎನ್ನುತ್ತ ಯಾವುದೋ ಒಂದಿಷ್ಟು ಊರಿನ ಹೆಸರನ್ನು ಪ್ರಸ್ತಾಪಿಸಿ ಅಲ್ಲಿದ್ದವರ ಕೆಲವರ ಮುಖವನ್ನು ಪ್ರಶ್ನಾರ್ಥಕವಾಗಿ  ನೋಡಿದ . ಅವರಲ್ಲಿ ಒಂದೆರಡು ಜನ ನಾವೂ ಟಿವಿ ಯಲ್ಲಿ ನೋಡಿದ್ದೇವೆ ಅನ್ನುತ್ತ ಸುಬ್ಬಣ್ಣನ ಜೊತೆ ತಲೆಯಾಡಿಸಿದರು. ಹಾಗೆ ಮುಂದುವರಿಸುತ್ತಾ ತನ್ನ ಮಾತನ್ನು ಅಡಿಕೆ ಮರಕ್ಕೆ ಹಬ್ಬುತ್ತಿರುವ ರೋಗದ ಬಗ್ಗೆ ತಿರುಗಿಸಿದ. ಇದುವರೆಗೆ ಯಾರೂ ಕೇಳದ ಒಂದಿಷ್ಟು ಕೆಲವು ವೈಜ್ಞಾನಿಕ ಹೆಸರುಗಳನ್ನು ಯಾವುದೋ ಪತ್ರಿಕೆಯಲ್ಲಿ ಓದಿದ್ದನ್ನು ನೆನಪಿಸಿಕೊಂಡು ಹೊಸ ರೋಗದ ಗುಣ ಲಕ್ಷಣ ಹಾಗೂ ಅದು ಹೇಗೆ ಹರಡುತ್ತಿದೆ ಅದಕ್ಕೆ ಕಾರಣ ಏನಿರ ಬಹುದು? ಎಂಬುದರ ಬಗ್ಗೆ ತನ್ನದೇ ರೀತಿಯಲ್ಲಿ ವಿವರಿಸತೊಡಗಿದ. ಇದನ್ನು ಕೇಳಿದ ಊರಿನ ಕೆಲವರು ಸುಬಣ್ಣನ ಲೋಕ ಜ್ಞಾನದ ಬಗ್ಗೆ ತಲೆದೂಗಿದರು. ಇದಲ್ಲದೆ ಮಧ್ಯ ದಲ್ಲಿ ಕೆಲವರು ರೋಗದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರ ಗೊತ್ತಿಲ್ಲದಿದ್ದರೂ ಯಾವುದೇ ರಾಜಕಾರಣಿಗೆ ಕಮ್ಮಿ ಇಲ್ಲ ಎನ್ನುವಂತೆ ಉತ್ತರಿಸಿದ. “ ನೋಡಿ ನಾವು ಅಮೆರಿಕ, ಜಪಾನು ಎಲ್ಲಾ ನೋಡಿ ವೈಜ್ಞಾನಿಕವಾಗಿ ವ್ಯವಸಾಯ ಮಾಡೋದನ್ನ ಕಲೀಬೇಕಿದೆ” ಎನ್ನುತ್ತ ಎಲ್ಲೋ ಅಲ್ಪ ಸ್ವಲ್ಪ ಓದಿಕೊಂಡಿದ್ದ ವೈಜ್ಞಾನಿಕ ಕೃಷಿ ಪದ್ದತಿಯ ಬಗ್ಗೆಯೂ ವಿವರಿಸತೊಡಗಿದ. ಹೀಗೆ ಹದಿನೈದು ನಿಮಿಷಕ್ಕೂ ಮೀರಿದ  ಸುಬ್ಬಣ್ಣನ ಭಾಷಣ ಕೇಳಿದ ಅಲ್ಲಿದ್ದ ಬಹಳಷ್ಟು ಜನ ತಮ್ಮ ಹಳೆಯ ಕೃಷಿ ಪದ್ಧತಿ ಬಿಟ್ಟು ಹೊಸ ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎನ್ನುತ್ತ ಸುಬ್ಬಣ್ಣನ ಜೊತೆ ದನಿಗೂಡಿಸಿದರು. ಇನ್ನುಳಿದ ಕೆಲವರು ತಮ್ಮ ಕೃಷಿ ಪದ್ದತಿಯೇ ಶ್ರೇಷ್ಠ ಅನ್ನುತ್ತ ತಮ್ಮ ವಿರೋಧ ಪ್ರದರ್ಶಿಸಿದರು. ಸುಬ್ಬಣ್ಣ ಮಾತ್ರ ಬಹುಪಾಲು ಜನರು ತನ್ನ ಭಾಷಣಕ್ಕೆಆಕರ್ಷಿತರಾದರು  ಅಂದುಕೊಳ್ಳುತ್ತ  ತನ್ನೊಳಗೇ ಸಂತೋಷ ಪಟ್ಟ. ಈ ಮಧ್ಯೆ, ಊರವರು ಎರಡೂ ಕೃಷಿ ಪದ್ದತಿಯ ಸಾಧಕ ಬಾಧಕ ಗಳ ಬಗ್ಗೆ ತಮಗೆ ತಿಳಿದ ಮಟ್ಟಿಗೆ ಚರ್ಚಿಸತೊಡಗಿದ್ದರು. ಬಹುಪಾಲು ಜನರು ಹೊಸ ವೈಜ್ಞಾನಿಕ ಕೃಷಿ ಪ್ರಯೋಗ ಮಾಡಿ ನೋಡುವುದೇ ಅನ್ನುವ ನಿರ್ಧಾರಕ್ಕೆ ಬಂದಂತಿತ್ತು. ಇಷ್ಟರಲ್ಲಿಯೀ ಸುಬ್ಬಣ್ಣ ಮಧ್ಯದಲ್ಲಿ ಬಾಯಿ ಹಾಕಿ “ಇದಕ್ಕೆಲ್ಲ ನನ್ನಲ್ಲೊಂದು ಪರಿಹಾರ ಇದೆ . ನಾವ್ಯಾಕೆ ಪೇಟೆಗೆ ಹೋಗಿ ಕೃಷಿ ಅಧಿಕಾರಿ ಎಲ್ಲಾ ಭೆಟ್ಟಿ ಮಾಡಿ ವೈಜ್ಞಾನಿಕ ಕೃಷಿ ಬಗ್ಗೆ ಮಾತಾಡ್ಬಾರ್ದು? ನಾವು ಸರ್ಕಾರದ ಸವಲತ್ತು ಪಡ್ಕೊಳ್ಳುದಾದ್ರೂ ಯಾವಾಗ ? ಏನ್ ಹೇಳ್ತಿರಿ ನೀವೆಲ್ಲ ” ಎನ್ನುತ್ತ ಅಲ್ಲಿದ್ದವರ ಮುಖವನ್ನು ತಲೆ ಅಲ್ಲಾಡಿಸುತ್ತ ನೋಡಿದ. ಕೆಲವರು ಅದಕ್ಕೆ ಒಪ್ಪಿದರಾದರೂ ಹಲವರು “ಯಾರಪ್ಪಾ ಈ ಮಳೆಯಲ್ಲಿ ಹೋಗುದು, ಮಳೆ ಎಲ್ಲಾ ಕಡಿಮೆ ಆದ ಮೇಲೆ ಹೋಗೋಣ ” ಎಂದು ಗೊಣಗ ತೊಡಗಿದರು. ಆದರೆ ಸುಬ್ಬಣ್ಣ ಮಾತ್ರ ಈ ಅವಕಾಶವನ್ನೂ ಬಿಡಲು ಸಿದ್ದನಿರಲಿಲ್ಲ. ಸುಬ್ಬಣ್ಣ ಕೆಲವರ ಚಹಾದ ಹಣವನ್ನು ತನ್ನ ಖಾತೆಗೆ ಸೀರಿಸಿಕೊಂಡೊ ಅಧವಾ ಬಸ್ಸಿನ ಟಿಕೆಟ್ ತಾನೇ ತಗೊಳ್ಳುತ್ತೇನೆ ಅಂತಲೋ ಇನ್ನೂ ಕೆಲವರನ್ನು ಒಪ್ಪಿಸಿದ. ಸರಿ, ಊರಿನ ಕೆಲವರು ಸುಬ್ಬಣ್ಣನ ಜೊತೆಗೆ ಮರುದಿನ ಬೆಳಗ್ಗಿನ ಬಸ್ಸಿಗೆ ಪೇಟೆಗೆ ಹೊರಡಲು ಸಿದ್ದರಾದರು.
ಆಗಲೇ ಎಂದಿನಿಗಿಂತ ಜಾಸ್ತಿಯೇ ತಡವಾದ್ದರಿಂದ, ಈ ಭಾರೀ ಮಳೆಯಲ್ಲಿ ಬಸ್ಸು ಊರಿಗೆ ಸರಿಯಾಗಿ ಬರುತ್ತದೋ ಇಲ್ಲವೋ ಎಂದು ಊರವರು ಅಂದುಕೊಳ್ಳುತ್ತಿರುವಾಗಲೇ ಒಂದೆರಡು ಕಿಲೋಮೀಟರ್ ದೂರದಿಂದಲೇ ಬಸ್ಸಿನ ಆಗಮನದ ಮುನ್ಸೂಚನೆ ಕೀಳಿಸಿದ್ದರಿಂದ ಸುಬ್ಬಣ್ಣ ನಿಟ್ಟುಸಿರುಬಿಟ್ಟ. ಅಂತೂ ಸೋರುವ ಬಸ್ಸನ್ನೇರಿ ಕೆಲವೊಮ್ಮೆ ಹಳ್ಳ, ಇನ್ನು ಕೆಲವುಸಲ ಕೆಸರು ಗದ್ದೆಯಾಗಿ ಮಾರ್ಪಟ್ಟಿದ್ದ ರಸ್ತೆಯ ಮೂಲಕ ಪೇಟೆ ತಲುಪುವ ಹೊತ್ತಿಗೆ ಆಗಲೇ ಮಧ್ಯಾಹ್ನವಾಗುತ್ತಾ ಬಂದಿತ್ತು.  ಸ್ವಲ್ಪವೂ ಸಮಯ ಹಾಳುಮಾಡದೆ ಸುಬ್ಬಣ್ಣನ ಮುಂದಾಳತ್ವದಲ್ಲಿ ಮಲ್ಲಿಗೆಪುರದ ತಂಡ ಕೃಷಿ ಇಲಾಖೆಯ ಖಚೇರಿ ತಲುಪಿತು. ಎಲ್ಲಾ ಸರ್ಕಾರೀ ಕಟ್ಟಡದ ಮಾದರಿಯಲ್ಲೇ ಬಹಳ ವರ್ಷದ ಹಿಂದೆಯೇ ಹಂಚನ್ನು ಹೊದೆಸಿ ಕಟ್ಟಿದ್ದ ಕಟ್ಟಡ, ಈ  ಭಾರೀ ಮಳೆಯಲ್ಲಿ ಸೋರದೆ ಇರಲು ಸಾದ್ಯವೇ ಇರಲಿಲ್ಲ. ಕಟ್ಟಡದ ಗೋಡೆಯ ಮೇಲೆಲ್ಲಾ ಜಿನುಗುವ ನೀರು ಯಾವ ಚಿತ್ರಕಾರನೂ ಊಹಿಸಲು ಕಷ್ಟಪಡುವ ರೀತಿಯಲ್ಲಿ ಗೋಡೆಯ ಮೇಲೆ ಬಗೆ ಬಗೆಯ ಜಲ ಹಾಗೂ ವರ್ಣಚಿತ್ರಗಳನ್ನು ಮೂಡಿಸಿತ್ತು. ನೆಲವೂ ಸ್ವಚ್ಚಮಾಡದೆ ಬಹಳದಿನಗಳೇ ಕಳೆದಿತ್ತು. ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳದ ಊರವರು ಕೃಷಿ ಅಧಿಕಾರಿಗಾಗಿ ವಿಚಾರಿಸ ತೊಡಗಿದರು. “ಏನೋ ಕೃಷ್ಣಪ್ಪ ಎಲ್ಲಿ ಸಾಹೇಬ್ರು ?” ಎನ್ನುತ್ತ ತನೆಗೆ ಅಲ್ಪ ಸ್ವಲ್ಪ ಪರಿಚಯವಿದ್ದ ಕೃಷಿ ಇಲಾಖೆಯ ಗುಮಾಸ್ತನನ್ನು ಸುಬ್ಬಣ್ಣ ಪ್ರಶ್ನಿಸಿದ. “ಅವಾಗ್ಲೇ ಮನೆಂದ ಹೊರಟಿದ್ರಪ್ಪ, ಮಳೆ ಆಲ್ವಾ ಬರ್ತಾರೆ ಬಿಡಿ” ಎನ್ನುತ್ತ ಹಲ್ಲುಗಿಂಜಿದ. ಅರ್ಧ ಗಂಟೆ ಕಾದನಂತರ ಟಿಫನ್ ಬಾಕ್ಸ್ ಹಿಡಿದು ಬಂದ ಕೃಷಿ ಅಧಿಕಾರಿಗೆ ಒಮ್ಮೆಗೆ ಇಷ್ಟೊಂದು ಜನರನ್ನು ನೋಡಿ ಆಶ್ಚರ್ಯವಾಗಿ ಕೃಷ್ಣಪ್ಪನನ್ನು ವಿಚಾರಿಸಿದಾಗ ಮಲ್ಲಿಗೆಪುರದ ಅಡಿಕೆ ರೋಗದ ಬಗ್ಗೆ ಗೊತ್ತಾಯಿತು. ಯಾಕಪ್ಪ ತಲೆ ತಿನ್ನಲು ಬಂದ್ರಪ್ಪ ಅಂದುಕೊಳ್ಳುತ್ತ  “ನಿಮ್ದು  ಮಲ್ಲಿಗೆಪುರದ ಅಡಿಕೆ  ರೋಗದ ವಿಷ್ಯ ಆಲ್ವಾ, ಹೇ ಕೃಷ್ಣಪ್ಪ ಇವ್ರಿಗ್ಗೆಲ್ಲ ಆ ಮೂಲೆಲಿರೋ ಕೊಳೆ ಔಷಧಿ ಕೊಟ್ಟ ಕಳಿಸಪ್ಪ” ಎನ್ನುತ್ತ ಆ ಕಡೆಗೆ ಎಲ್ಲೋ ಹೋಗಲು ಸಿದ್ದನಾದ. “ನೀವು ಈ ವೈಜ್ಞಾನಿಕ ಕೃಷಿ ಬಗ್ಗೆ ಎಲ್ಲಾ ನಮ್ಮವರಿಗೆ ಹೇಳ್ಬೇಕಾಗಿತ್ತು” ಎನುತ್ತ ಸುಬ್ಬಣ್ಣ ಕೃಷಿ ಅಧಿಕಾರಿಗೆ ತನ್ನ ವಿನಯತನ ಪ್ರದರ್ಶಿಸ ತೊಡಗಿದ. “ಅದಕ್ಕೆಲ್ಲ ಈಗ ಟೈಮ್ ಇಲ್ಲಾರಿ, ಇನ್ನೊಂದಿನ ಬನ್ನಿ” ಅನ್ನುತ್ತ ಅಧಿಕಾರಿ ಒಳಗಡೆ ತನ್ನ ಕೋಣೆಗೆ ನಡೆದ. ಕೃಷ್ಣಪ್ಪ ಒಳಗಡೆ ನಾರುತ್ತಿರುವ ಕೊಣೆಯಿಂದ ಒಂದಿಷ್ಟು ಕೊಳೆ ಔಷಧಿ ತಂದು ಊರವರಿಗೆ ಹಂಚಿದ. ಸುಬ್ಬಣ್ಣ ಐವತ್ತರ ಒಂದು ನೋಟನ್ನು ಕೃಷ್ಣಪ್ಪನ ಕಿಸೆಯಲ್ಲಿ ತುರುಕಿದ್ದರಿಂದ, ಮತ್ತೂ ಸ್ವಲ್ಪ ಕೊಳೆ ಔಷಧಿ ಲಭ್ಯವಾಯಿತು. ಊರವರೆಲ್ಲರೂ ಸಂತೋಷದಿಂದ ಎಲ್ಲವನ್ನೂ ತೆಗೆದುಕೊಂಡು, ಸಂಜೆ ಬಸ್ಸಿಗೆ ಊರಿಗೆ ವಾಪಸ್ಸಾಗಿ ಅಡಿಕೆ ಮರಗಳಿಗೆ ಸಿಂಪಡಿಸಿದರು.
          ಈ ಮಧ್ಯೆ ಬೀರನ ಹೊಸ ಔಷಧಿ ಬೂದಿಯ ಬಗ್ಗೆಯೂ ಸುದ್ದಿ ಹಬ್ಬುತ್ತಿತ್ತು. ಬೀರ ಅಡಿಕೆತೋಟದಲ್ಲಿ ಕೆಲಸ ಮಾಡುವವ. ಸುಬ್ಬಣ್ಣನಿಂದ ಹಿಡಿದು ಎಲ್ಲರಿಗೂ ಬೀರನನ್ನು ಅಡಿಕೆ ತೊಡದ ಕೆಲಸ ದಲ್ಲಿ ನಿಷ್ಣಾತ ಎಂದೇ ಪರಿಗಣಿಸಿದ್ದರು. ಊರವರು ಇದೂ ಇರಲಿ ಎನ್ನುತ್ತ ಬೀರನ ಬೂದಿಯನ್ನೂ ಅಡಿಕೆ ಮರಕ್ಕೆ ಕೃಷಿ ಇಲಾಖೆಯ ಔಷಧಿ ಜೊತೆ ಹಾಕಿದರು. ಒಟ್ಟಿನಲ್ಲಿ ಕೊಳೆ ರೋಗ ಕಡಿಮೆಯಾಗತೊಡಗಿತ್ತು.  ಇದನ್ನೆಲ್ಲಾ ನೋಡಿ ಸುಬ್ಬಣ್ಣನಿಗೆ ಖುಷಿಯೋ ಖುಷಿ. ಸುಬ್ಬಣ್ಣನಿಗೆ ಸಿಕ್ಕವರೆಲ್ಲರೂ ಸುಬ್ಬಣ್ಣನ ಉಪಕಾರದ ಸ್ಮರಣೆ ಮಾಡಿದ್ದೇ ಮಾಡಿದ್ದು. ಅವರಿಗೆಲ್ಲ ಸುಬ್ಬಣ್ಣ ಇನ್ನೊಂದಿಷ್ಟು ವೈಜ್ಞಾನಿಕ ಕೃಷಿ ಅಂತೆಲ್ಲ ಹೀಳಿ ಉಪದೇಶ ನೀಡುತ್ತಿದ್ದ. ಊರವರು ಹೌದು ಹೌದು ಎನ್ನುತ್ತ ತಲೆಯಾಡಿಸುತ್ತಿದ್ದರು.ಒಟ್ಟಿನಲ್ಲಿ ಸುಬ್ಬಣ್ಣ, ಪಂಚಾಯ್ತಿ ಚುನಾವಣೆಯಲ್ಲಿ ತನ್ನ ಜಾಗ ಪಕ್ಕ ಆಯ್ತು ಅಂತ ಮನಸ್ಸಿನಲ್ಲೇ ಸಂತೋಷಪಡತೊಡಗಿದ. 
image Source: internet

ಒಂದು ತಿಂಗಳ ನಂತರ ಪಂಚಾಯ್ತಿ ಚುನಾವಣೆ ಜೋರಾಗಿಯೇ ನಡೆಯಿತು. ಪ್ರಚಾರಕ್ಕೆ ಹೋದಾಗಲೆಲ್ಲ ಊರವರು ಸುಬ್ಬಣ್ಣನನ್ನು ಹೊಗಳಿದ್ದೇ ಹೊಗಳಿದ್ದು. ಅದನ್ನೆಲ್ಲಾ ನೋಡಿ ಸುಬ್ಬಣ್ಣ ತಾನಿನ್ನು ಪಂಚಾಯ್ತಿ ಚೇರ್ಮನ್ ಅಗುವುದಲ್ಲಿ ಯಾವುದೇ ಸಂಶಯವಿಲ್ಲ ಅನ್ನುತ್ತ ಇದುವರೆಗೆ ಊರಲ್ಲಿ ಯಾರೂ ಮಾಡದ ಚುನಾವಣ ಪ್ರಚಾರ ಮಾಡಿದ್ದ.
          ಚುನಾವಣಾ ಫಲಿತಾಂಶದ ದಿನ ಸುಬ್ಬಣ್ಣ ಹೊಸ ಲುಂಗಿ ಮ್ಯಾಚಿಂಗ್ ಶರ್ಟ್ ತೊಟ್ಟು, ಕ್ರಾಪ್ ಬಾಚಿ, ತನ್ನ ಉದ್ದನೆಯ ಕೊಡೆ ಹಿಡಿದು ಪಂಚಾಯ್ತಿ ಖಚೇರಿಯತ್ತ  ಸ್ವಲ್ಪ ತಡವಾಗಿಯೇ ಹೋದ. ಸೀದಾ ಮತ ಎಣಿಕೆಯ ಕೋಣೆಯೊಳಗೆ ನುಗ್ಗಿ “ಎಷ್ಟಪ್ಪ ಲೀಡು ?” ಅನ್ನುತ್ತ ಹಲ್ಲು ಗಿಂಜಿದ. “ನೀವು ಸೋತ್ರಿ ಮಾರಾಯ್ರೆ” ಹಿಂಬದಿಯಿಂದ ಯಾರೋ ಅಂದರು.
“ಹಾಗಿದ್ರೆ ಗೆದ್ದವ್ರು ಯಾರು?” ನಂಬಿಕೆಯಿಲ್ಲದೆ ಸುಬ್ಬಣ್ಣ ಕೇಳಿದ.

“ಬೀರನ ಹೆಂಡತಿ ಅಂತೆ ”  ಅಲ್ಲಿಯೇ ಪಕ್ಕದಲ್ಲಿ ನಿಂತಿದ್ದ ರಾಮಣ್ಣ ಉತ್ತರಿಸಿದ.


ಭಾನುವಾರ, ಮಾರ್ಚ್ 25, 2012

ಅವಳಲ್ಲ !!

image source: internet


ನಡು ನಡು ಮಧ್ಯಾಹ್ನದಲ್ಲಿ ಯಾರಿವಳು ?
ನನ್ನ ಹಿಂದೆಯೇ ಬರುತ್ತಿರುವಳು ಯಾಕವಳು ?
ಇಷ್ಟು ಬೇಗ ಮನಸೋತಳೆ ನನಗವಳು ?
ಅಲ್ಲ ಅವಳಲ್ಲ, ಅದು ಕರಿಯ ನೆರಳು !!

ಶನಿವಾರ, ಮಾರ್ಚ್ 24, 2012

ಇರುವುದೆಲ್ಲವ ಬಿಟ್ಟು !!

ಆಗ ತಾನೇ ವೇದಾಧ್ಯಯನ ಎಲ್ಲಾ ಮುಗಿಸಿ ಊರಿನ ದೇವಸ್ಥಾನದ ಅರ್ಚನೆಯ ಉಸ್ತುವಾರಿಯನ್ನು ತಂದೆಯಿಂದ ವಹಿಸಿಕೊಂಡಿದ್ದ ಸುಬ್ಬಾ ಶಾಸ್ತ್ರಿಗಳ ಮಗ ಗಪ್ಪತಿ, ಆವತ್ತು ಒಂದು ನಿರ್ಧಾರಕ್ಕೆ ಬಂದಿದ್ದ. ‘ ಈ ಊರಿನ ಸಹವಾಸ ಸಾಕಾಗಿದೆ ದೇವಸ್ಥಾನದಲ್ಲಿ ದಿನ ಪೂರ್ತಿ ಪೂಜೆ ಮಾಡಿದ್ರೂ ನೂರು ರೂಪಾಯಿ ಹುಟ್ಟೋದು ಕಷ್ಟ. ಹೊರಗಡೆ ಪುರೋಹಿತ್ಯ ಜೊತೆಗೆ ಮಾಡೋಣವೆಂದರೆ ಅದಕ್ಕೆ ಉಳಿದವರ ಪೈಪೋಟಿ. ಹೀಗೆ ಮುಂದುವರಿದರೆ ಜೀವನ ಸಾಗಿಸೋದು ಹೇಗೆ?’ ಎನ್ನುತ್ತ ವಿಷಯವನ್ನು ಸುಬ್ಬಾ ಶಾಸ್ತ್ರಿ ಗಳ ಹತ್ತಿರ ಪ್ರಸ್ತಾಪಿಸಿದ. “ಅದೆಲ್ಲಾ ಸಾಧ್ಯವಿಲ್ಲದ ಮಾತು. ತಲೆ ತಲಾಂತರಗಳಿಂದ ನಮಗೆ ಇರೋ ದೇವಸ್ಥಾನದ ಪೂಜೆ ಬಿಡಲು ನಿನಗೆ ತಲೆ ಏನಾದ್ರೂ ಕೆಟ್ಟಿದೆಯ? ಜೊತೆಗೆ ತೋಟ ಗದ್ದೆ ಎಲ್ಲಾ ಇದೆ’ ಎನ್ನುತ್ತ ಸಿಟ್ಟಿನಿಂದ ಶಾಸ್ತ್ರಿಗಳು ಗಪ್ಪತಿಯನ್ನು ಬಯ್ಯತೊಡಗಿದರು. ‘ಇಲ್ಲಿನ ಆದಾಯ ಏನೂ ಇಲ್ಲಪ್ಪ ಅಲ್ಲದೆ ವೇದಾಧ್ಯಯನ ಎಲ್ಲಾ ಮುಗಿಸಿದ ನನ್ನ ಯೋಗ್ಯತೆಗೆ ಈ ದೇವಸ್ಥಾನದ ಅರ್ಚನೆ ತಕ್ಕುದಲ್ಲ. ಹಾಗಾಗಿ ನಾನು ಇಲ್ಲಿಂದ ಹೊರಟೆ’ ಎನ್ನುತ್ತ ಗಪ್ಪತಿ ತನ್ನ ಬಟ್ಟೆ ಬರೆ ಎಲ್ಲಾ ತುಂಬಿಕೊಂಡು, ಶಾಸ್ತ್ರಿಗಳು, ಅವನ ತಾಯಿ ಎಷ್ಟು ಬೇಡಿಕೊಂಡರೂ ಕೇಳದೆ ಅಲ್ಲಿಂದ ಹೊರಡಲು ಸಿದ್ದವಾದ.
ಆಗಲೇ ತನ್ನ ಪಕ್ಕದೂರಿನ ಸ್ನೇಹಿತರಿಂದ ಸಾಕಷ್ಟು ಕೇಳಿ ತಿಳಿದು ಕೊಂಡಿದ್ದ ಗಪ್ಪತಿ, ‘ಗೋವ’ ದ ಕಡೆ ತೆರಳಲು ನಿರ್ಧರಿಸಿದ. ಅಲ್ಲಿ ಪುರೋಹಿತರಿಗೆ ತುಂಬಾ ಬೇಡಿಕೆ ಇದೆಯಂತೆ. ಅದರಲ್ಲೂ ವೇದಾಧ್ಯಯನ ಮಾಡಿದರಂತೂ ಮುಗಿಯಿತು. ಎಂದೆಲ್ಲಾ ಕೇಳಿದ್ದ ಗಪ್ಪತಿ ಜಾಸ್ತಿ ಯೋಚಿಸದೆ ಕೊಂಕಣ ರೈಲ್ವೆ ನಿಲ್ದಾಣಕ್ಕೆ ಬಂದು ತಲುಪಿದ. ಇನ್ನು ಸದ್ಯಕ್ಕೆ ಅಲ್ಲಿ ಉಳಿದು ಕೊಳ್ಳಲು ಹೇಗಿದ್ರೂ ನಮ್ಮ ಕಡೆಯ ಜನಗಳೇ ಇದ್ದಾರೆ. ಪಕ್ಕದೊರಿನ ಕೆಲವು ಪುರೋಹಿತರೂ ಇದ್ದಾರೆ. ಅವರ ಫೋನ್ ನಂಬರ್ ಸಹ ಇದೆ. ಇನ್ನೇನು ಮುಗಿತು ಎನ್ನುತ್ತ ಟಿಕೆಟ್ ಪಡೆದು ‘ಮಡಗಾಂವ್’ ಕಡೆ ಹೋರಡೋ ರೈಲಿಗೆ ಕಾಯತೊಡಗಿದ.
ಅದೇ ಮೊದಲ ಸಲ ರೈಲು ಹತ್ತಿದ್ದ ಗಪ್ಪತಿಗೆ ಅದೇನೋ ಹೊಸ ಅನುಭವ. ಬಸ್ಸಿಗಿಂತ ಇದು ಎಷ್ಟೋ ಆರಾಮಪ್ಪ. ಅಲ್ಲದೆ ಟಿಕೆಟ್ ದರನೂ ಕಡಿಮೆ. ಎಂದೆಲ್ಲಾ ಮನಸ್ಸಿನಲ್ಲೇ ಎಣಿಸತೊಡಗಿದ. ಕುಮಟ ದಿಂದ ಹೊರಟ ರೈಲು ಅಘನಾಶಿನಿ ನದಿ, ಗೋಕರ್ಣ ದಾಟಿ ಕಾರವಾರದಕಡೆ ಸಾಗಿತ್ತು. ಈ ಕಡೆ ಹಸಿರು ಗದ್ದೆಗಳು,ಅಡಿಕೆ ತೋಟಗಳು. ಆ ಕಡೆ ಅನತಿ ದೂರದಲ್ಲಿ ಆಗೊಮ್ಮೆ ಈಗೊಮ್ಮೆ ಮರಗಳ ಮರೆಯಲ್ಲಿ ಕಾಣಿಸುವ ಅರಬ್ಬೀ ಸಮುದ್ರ. ಕೆಲವೊಮ್ಮೆ ತುಂಬಿ ಹರಿಯುವ ನದಿ,ಹಳ್ಳಗಳ ಮೇಲಿನ ಸೇತುವೆಯ ಮೇಲೆ ನಿಧಾನವಾಗಿ ಸಿಳ್ಳೆ ಹಾಕುತ್ತ ಸಾಗುವ ರೈಲು. ಅಲ್ಲಿಲ್ಲಿ ಗುಡ್ಡ ಗಳನ್ನು ಸೀಳಿ ಕೊರೆದ ಸುರಂಗದಲ್ಲಿ ನುಗ್ಗುವಾಗ ಅದರ ಜೊತೆಗೇ ಒಟ್ಟಿಗೇ ರೈಲಿನೂಳಗೆ ನುಗ್ಗುವ ಧೂಳು, ಹೊಗೆ.  ಹೀಗೆ ಗಪ್ಪತಿಗೆ ಇದೊಂದು ಹೊಸ ಅನುಭವವಾಗಿತ್ತು. ಸುರಂಗದ ಕತ್ತಲೆ, ಧೂಳಿಂದ ರೈಲು ಒಮ್ಮೆಗೆ ಹೊರಬಂದಾಗಲಂತೂ ತನ್ನನ್ನು ಗಪ್ಪತಿ ಅದಕ್ಕೆ ಹೋಲಿಕೆ ಮಾಡಿ ತಾನು ಕತ್ತಲೆಯಿಂದ ಬೆಳೆಕಿಗೆ ಸಾಗುತ್ತಿದ್ದೇನೆ ಎಂದು ಮನಸ್ಸಿನಲ್ಲೇ ಯೋಚಿಸಿದ್ದೂ ಉಂಟು.
ರೈಲು ಮಡಗಾಂವ್ ತಲುಪಲು ಎರಡುವರೆ ಗಂಟೆ ತೆಗೆದುಕೊಂಡಿತು. ಆಗಲೇ ಮಧ್ಯಾಹ್ನವಾಗಿತ್ತಾದ್ದರಿಂದ ಗಪ್ಪತಿ ಅಲ್ಲೇ ಊಟ ಮುಗಿಸಿ ಅಲ್ಲಿಂದ ಹತ್ತಿರದ ತನ್ನ ಸ್ನೇಹಿತರಿರುವ ದೇವಸ್ಥಾನಗಳಿಗೆ ಹೆಸರಾದ ‘ಪೋಂಡ’ ಪಟ್ಟಣಕ್ಕೆ ಹೊರಡಲು ಸಿದ್ದನಾದ. ಆಗಲೇ ಫೋನ್ ಮಾಡಿ ಹೇಗೆ ಅಲ್ಲಿಗೆ ತಲುಪಬೇಕೆಂದು ತಿಳಿದುಕೊಂಡಿದ್ದರಿಂದ, ಅಲ್ಲಿನ ಮಹಾಲಕ್ಷ್ಮಿ ದೇವಸ್ತಾನದ ಸುತ್ತ ಮುತ್ತ ವಾಸವಾಗಿದ್ದ ಸ್ನೇಹಿತರ ಜೊತೆ ಸೇರುವುದು ಅಷ್ಟೊಂದು ಕಷ್ಟವಾಗಲಿಲ್ಲ. ಕಷ್ಟ ಸುಖ ವಿಚಾರಿಸಿದ ಮೇಲೆ ಎಲ್ಲರೂ “ನೀನು ಸರಿಯಾದ ನಿರ್ಧಾರ ಮಾಡಿದ್ದಿಯ,ಮುಂದೆ ನೋಡು ನಿನ್ನ ಜೀವನ ಹೇಗೆ ಬದಲಾಗುತ್ತದೆ. ಊರಲ್ಲೇ ಇದ್ದಿದ್ರೆ ಅದೇ ಹರುಕು ಪಂಚೆ, ಮಡಿ ಉಟ್ಟಿಕೊಂಡು ಜೀವನ ಪೂರ್ತಿ ಒಂದು ರೂಪಾರಿ, ಎರಡು ರೂಪಾಯಿಗೆ ತೃಪ್ತಿ ಪಡಬೆಕಾಗಿತ್ತಷ್ಟೇ. ನೀನು ವೇದ ಜೋತಿಷ್ಯ ಎಲ್ಲಾ ಬೇರೆ ಓದಿದ್ದೀಯ ಮುಂದೆ ನೋಡು ನಿನ್ನ ಅದೃಷ್ಟ ಹೇಗೆ ಬದಲಾಗುತ್ತದೆ”. ಎನ್ನುತ್ತ ಎಲ್ಲರೂ ಗಪ್ಪತಿಯನ್ನು ಹುರುದುಂಬಿಸಿದರು.ಗಪ್ಪತಿಯೂ ಅವರೆಲ್ಲರ ವೈಭೋಗ ನೋಡಿ ಮನಸ್ಸಲೇ ಖುಷಿ ಪಟ್ಟ.
ಆರಂಭದ ದಿನಗಳಲ್ಲಿ ಅಲ್ಲಿನ ಭಾಷೆ, ಊಟ ಎಂದೆಲ್ಲಾಹೊಂದಿಕೊಳ್ಳುವುದು ಸ್ವಲ್ಪ ಕಷ್ಟವಾದರೂ ನಂತರದಲ್ಲಿ ಎಲ್ಲವೂ ಗಪ್ಪತಿಗೆ ಒಗ್ಗತೊಡಗಿತು. ಅಲ್ಪ ಸ್ವಲ್ಪ ಕೊಂಕಣಿ, ಹಿಂದಿ ಕಲಿತದ್ದರಿಂದ ಗಪ್ಪತಿ ಈಗ ವ್ಯವಹರಿಸುವುದು ಮತ್ತೂ ಸುಲಭವಾಗಿತ್ತು. ಪೂಜೆ, ಪರಾಯಾಣ, ತಿಥಿ, ಹೋಮ, ಹವನ ಹೀಗೆ ಗಪ್ಪತಿ ಬಿಡುವಿಲ್ಲದವನಾಗಿದ್ದ. ದಕ್ಷಿಣೆ,ದಾನ ಎಲ್ಲಾ ಸೇರಿಸಿ ಇನ್ನೂರು, ಕೆಲವೊಮ್ಮೆ ಮುನ್ನೂರು ಹೇಗೆ ಗಪ್ಪತಿಯ ಸಂಭಾವನೆ ಸಾಗಿತ್ತು. ಊರಿನಲ್ಲಿ ಐವತ್ತು ಹೆಚ್ಚೆಂದರೆ ನೂರು ರೂಪಾಯಿಯ ಸಂಭಾವನೆ, ಈಗ ಮನೆ ಬಾಡಿಗೆ, ಆ ಖರ್ಚು ಈ ಖರ್ಚು ಅಂದರೂ ನೂರು ರೂಪಾಯಿಗಿಂತ ಜಾಸ್ತಿ ಉಳಿಯುತ್ತದೆ.  ಈಗ ಶುರು ಅಷ್ಟೆ, ಮುಂದೆ ಸ್ವಲ್ಪ  ಹೆಸರು ಬೆಳೆದಂತೆ ಮತ್ತಷ್ಟು ಅದೃಷ್ಟ ಖುಲಾಯಿಸುತ್ತದೆ ಎಂದೆಲ್ಲಾ ಯೋಚಿಸಿ ಗಪ್ಪತಿ ಕೆಲವೊಮ್ಮೆ ಮನಸ್ಸಲ್ಲೇ ಖುಷಿಪಟ್ಟಿದ್ದೂ ಉಂಟು. ಕೆಲವೊಮ್ಮೆ ಊರಿನಲ್ಲಿದ್ದ ತಾಯಿಗೆ, ಸ್ನೇಹಿತರಿಗೆ ಇದಕ್ಕೇ ಸ್ವಲ್ಪ ಬಣ್ಣ ಬಳಿದು ಹೇಳಿ ಮತ್ತೂ ಸಂತೋಷ ಪಟ್ಟಿದ್ದೂ ಉಂಟು. ಅಂತೂ ಗಪ್ಪತಿ, ಬೇರೆ ಊರಲ್ಲಿ ಒಂದು ಸ್ಥಿತಿಗೆ ಬಂದು ತಲುಪಿದ್ದ. ಕೆಲವೇ ಸಮಯದಲ್ಲಿ ಹಲವು ವರ್ಷಗಳಿಂದ ಅಲ್ಲಿದ್ದ ಎಲ್ಲಾ ಸ್ನೇಹಿತರನ್ನೂ ಸಂಭಾವನೆಯಲ್ಲಿ ಅಲ್ಲದೆ ವಿದ್ಯೆ.ಬುದ್ಧಿ ಯಿಂದಲೂ ಹಿಂದೆ ಹಾಕಿದ್ದ. ಇನ್ನೂ ಕೆಲವೇ ವರ್ಷದಲ್ಲಿ ನೀನು ಇಡೀ ಗೋವಾಕ್ಕೇ ಜನಪ್ರಿಯ ಆಗ್ತೀಯ ಎಂದು ಸ್ನೇಹಿತರೆಲ್ಲ ಬಹಳ ಸಲ ಹೊಗಳಿದ್ದೂ ಉಂಟು. ಇದನ್ನೆಲ್ಲ ಕೇಳಿದ ಗಪ್ಪತಿಗೆ ಹೊಸ ಹೊಸ ಕನಸುಗಳು, ಆಸೆಗಳು ಮನಸ್ಸಿನಲ್ಲಿ ಸೃಷ್ಟಿ ಯಾಗಿತ್ತು.
ದಿನಕಳೆದಂತೆ ಗಪ್ಪತಿಯ ಜನಪ್ರಿಯತೆ ಅಂದುಕೊಂಡಷ್ಟು ಏರದಿದ್ದರೂ ಅಲ್ಪ ಸ್ವಲ್ಪ ಏರಿತ್ತು. ‘ಪೋಂಡ’ ಪಟ್ಟಣದಲ್ಲಿ ಸ್ವಲ್ಪ ಹೆಸರು ಬಂದಿತ್ತು. ಆದರೂ ಈಗ ಬೇರೆ ಕಡೆಯಿಂದ ಮತ್ತಷ್ಟು ಅರ್ಚಕರು ಈಗಿರುವವರ ಜೊತೆ ಸೇರಿ ಅವರಲ್ಲೇ ಸ್ಪರ್ಧೆ ಉಂಟಾದ್ದರಿಂದ ಮೊದಲಿಗಿಂತಲೂ ಗಪ್ಪತಿಗೆ ಸ್ವಲ್ಪ ಕಷ್ಟವಾಗಿತ್ತು.  ಈಗ ಸ್ವಲ್ಪ ಜಾಸ್ತಿ ಪುರೋಹಿತ್ಯ ಇದ್ದರೂ ಸಂಭಾವನೆ ಅಷ್ಟಾಗಿ ಬೆಳೆದಿರಲಿಲ್ಲ. ಆದರೂ ಗಪ್ಪತಿಗೆ ಅದು ತನ್ನ ಊರಿಗಿಂತಲೂ ಎಷ್ಟೋ ಜಾಸ್ತಿ ಅಂತ ಅನಿಸಿದ್ದರಿಂದ ಖುಷಿಯಾಗಿಯೇ ಇದ್ದ. ಹೀಗೆ ಗಪ್ಪತಿಯ ಬಿಡುವಿಲ್ಲದ ಜೀವನ ಸಾಗಿ ಆಗಲೇ ಒಂದು ವರ್ಷದ ಹತ್ತಿರಕ್ಕೆ ಬಂದಿತ್ತು. ಬರಿ ಪೋನಿನಲ್ಲೇ ಇಷ್ಟು ದಿನ ಊರಿನಲ್ಲಿದ್ದ ತಾಯಿ, ಒಂದೋ ಎರಡೋ ಬಾರಿ ಅಪ್ಪನ ಜೊತೆ ಮಾತನಾಡಿದ್ದ ಗಪ್ಪತಿಗೆ ಊರಿಗೆ ಹೋಗಿಬರುವ ಮನಸ್ಸಾಯಿತು.ಅಲ್ಲದೇ ಗಪ್ಪತಿಗೆ ಊರಿನಲ್ಲಿ ತನ್ನ ಸಾಧನೆಯ ಬಗ್ಗೆಯೂ ಹೇಳಿಕೊಳ್ಳಬೇಕಿತ್ತು.  ಒಂದೆರಡು ದಿನದ ಪೂಜೆ,ಪಾರಾಯಣ ಎಲ್ಲಾ ಬದಿಗೊತ್ತಿ ಊರಿನ ಕಡೆ ಹೊರಡಲು ಗಪ್ಪತಿ ತಯಾರಿ ಮಾಡಿಕೊಂಡ.
ಮತ್ತೆ ಕೊಂಕಣ ರೈಲನ್ನು ಹತ್ತಿ ಊರಿನತ್ತ ಪ್ರಯಾಣ ಪ್ರಾರಂಭವಾಗಿತ್ತು. ಅದೇ ನದಿ, ಅದೇ ಸಮುದ್ರ, ಅದೇ ಸುರಂಗದ ಧೂಳು ಹೊಗೆ ಇದ್ದರೂ ಮೊದಲ ಸಲದ ರೈಲಿನ  ಪ್ರಯಾಣದ ಉತ್ಸಾಹ ಈಗ ಇರಲಿಲ್ಲ. ಪರ ಊರಲ್ಲಿ ತನ್ನ ಸಾಧನೆ, ಊರಿನ ಪರಿಸ್ಥಿತಿ, ಹೀಗೆ ಹತ್ತು ಹಲವು ಯೋಚನೆಗಳು ಗಪ್ಪತಿಯ ಮನಸ್ಸನ್ನು ಹೊಕ್ಕಿತ್ತು. ರೈಲಿಂದ ಇಳಿದು ಊರಿಗೆ ಹೋಗುವ ಬಸ್ಸನ್ನು ಹತ್ತಿ ಮನೆಯತ್ತ ಪ್ರಯಾಣ ಸಾಗಿತ್ತು.
ಬಸ್ಸಿನಿಂದ ಇಳಿದು ಒಂದೆರಡು ಮೈಲಿ ಇದ್ದ ಮನೆಯ ಕಡೆ ಗಪ್ಪತಿ ನಡೆಯ ತೊಡಗಿದ. ಇನ್ನೇನು ಮನೆಗೆ ಸ್ವಲ್ಪವೇ ದೂರ ಇದೆ ಎನ್ನುವಾಗ ಪಕ್ಕದ ಮನೆ ವಿನಾಯಕ, ಜೋರಾಗಿ ಶಬ್ದ ಮಾಡುತ್ತಾ ತನ್ನ ಮೋಟಾರು ಬೈಕಿನಲ್ಲಿ ಬರುತ್ತಿದ್ದದ್ದನ್ನು ನೋಡಿ ಗಪ್ಪತಿ “ಅರೆ ಇದ್ಯಾವಾಗ ತಗೊಂಡೆ” ಎಂದು ಆಶ್ಚರ್ಯದಿಂದ ಕೇಳಿದ. ವಿನಾಯಕ ಗಪ್ಪತಿಯ ಜೊತೆಗೆ ಓದಿದ್ದ. ಹೈಸ್ಕೂಲ್ ಮುಗಿದ ಮೇಲೆ ಅಲ್ಪ ಸ್ವಲ್ಪ ಮಂತ್ರ ಕಲಿತು. ಅಲ್ಲಿ ಇಲ್ಲಿ ಪುರೋಹಿತ್ಯ ಮಾಡಿ ಹೇಗೋ ಜೀವನ ಸಾಗಿಸ್ತಾ ಇದ್ದ. ಮೊದಲು ತೆಳ್ಳಗೆ ನರಪೇತಲನಂತೆ ಇದ್ದವ ಈಗ ಉಬ್ಬಿಕೊಂಡಿದ್ದ. ಜೊತೆಗೆ ದೊಡ್ಡದಾದ ಬೈಕ್ ಬೇರೆ, ಇದರ ಜೊತೆ ಕುತ್ತಿಗೆಗೆ ನೇತಾಡುತ್ತಿದ್ದ ಮೊಬೈಲ್, ಚಿನ್ನದ ಸರ. ಇದೆಲ್ಲಾ ನೋಡಿ ಗಪ್ಪತಿಗೆ ಆಶ್ಚರ್ಯವಾಗಿತ್ತು. “ಯಾವಾಗ ಬಂದೆ ಗಪ್ಪತಿ, ಹೇಗಿದ್ದೆ?” ಎನ್ನುತ್ತ ವಿನಾಯಕ ತನ್ನ ಗಾಡಿಯನ್ನು ನಿಲ್ಲಿಸಿದ. “ಇದೆಲ್ಲಾ ಏನು ಒಂದೇ ಸಲ ಇಷ್ಟೊಂದು ಬದಲಾಗಿ ಬಿಟ್ಟಿದ್ದಿಯ ಗುರ್ತೆ ಸಿಗದಷ್ಟು” ಎಂದು ಗಪ್ಪತಿ ಹೇಳುತ್ತಿದ್ದಂತೆ  “ಅದಾ ನೀನು ಹೋದ್ಮೇಲೆ ಇಲ್ಲಿ ದೇವಸ್ಥಾನ ನೋಡ್ಕೊಳೋ ಸಲುವಾಗಿ ನನ್ನನ್ನ ನೇಮಿಸಿದ್ದ್ರು. ಅವಾಗ ನಿಂಗೆ ಗೊತ್ತಲ್ಲ ದೇವಸ್ಥಾನದ ಆದಾಯ. ಆಮೇಲೆ ನಂಗೆ ಹೀಗೆ ಮಾಡಿದ್ರೆ ಹೇಗೆ ಅಂತ ಅನಿಸ್ತು. ಬೆಂಗಳೂರು, ಗೋವ ಕಡೆ ನನ್ನ ಗೆಳೆಯರನ್ನೆಲ್ಲ ಸಂಪರ್ಕ ಮಾಡ್ದೆ. ಜೊತೆಗೆ ಗೋವಾದಲ್ಲಿ ನಮ್ಮೂರಿನ ಕಾಮತರು, ಬೆಂಗಳೂರಿನಲ್ಲಿ ಪಕ್ಕದೂರಿನ ಹೆಗ್ಡೆ ಇವರ ಜೊತೆಗೆಲ್ಲ ಮಾತಾಡಿ ದೇವಸ್ಥಾನದ ಬಗ್ಗೆ ಸ್ವಲ್ಪ ಪ್ರಚಾರ ಮಾಡಿಸ್ದೆ. ಹಾಗಾಗಿ ಗೋವ, ಮುಂಬಯಿ, ಬೆಂಗಳೂರು ಹಂಗೆ ಎಲ್ಲಾ ಕಡೆ ಇರೋ ನಮ್ಮ ಕಡೆ ಜನ ದೇವಸ್ಥಾನಕ್ಕೆ ಸಹಾಯ ಮಾಡಿದ್ರು. ಅಲ್ದೆ ಅಲ್ಲಿಂದ ಜನ ಆಗಾಗ ಬರಲು ಶುರು ಮಾಡಿದ್ರು. ಅದನ್ನ ನೋಡಿ ಸುತ್ತ ಮುತ್ತಲಿನ ಊರಿನ ಜನರೂ ಇನ್ನೂ ಬರತೊಡಗಿದ್ರು. ಈಗ ನೋಡು ನಮ್ಮ ದೇವಸ್ಥಾನ ಇಡೀ ತಾಲೂಕಿಗೆ ಫೇಮಸ್.  ಪ್ರತೀದಿನ ಏನಾದ್ರೂ ಪೂಜೆ,ಪುನಸ್ಕಾರ. ಜೊತೆಗೆ ಅಡಿಕೆಗೆ, ತೆಂಗಿಗೆ ಈ ಸಾರ್ತಿ ಒಳ್ಳೆ ರೇಟ್ ಬೇರೆ. ನನ್ನ ನೋಡಿದ್ರೆ ಗೊತ್ತಾಗುತ್ತಲ್ಲ ” ಎನ್ನುತ್ತ ವಿನಾಯಕ ಹಲ್ಲು ಗಿಂಜಿದ.
ಗಪ್ಪತಿಗೆ ಒಮ್ಮೆಲೇ ಏನು ಹೇಳಲೂ ತೋಚದಂತಾಯಿತು. ತನ್ನ ಬಗ್ಗೆ ಹೇಳಬೇಕಾದದ್ದೆಲ್ಲ ಒಮ್ಮೆಲೇ ಮರೆತು ಹೋಯಿತು. “ಆಮೇಲೆ ಸಿಗುವ” ಎನ್ನುತ್ತ ಗಪ್ಪತಿ ಮನೆಯತ್ತ ಮುಖ ಮಾಡಿದ. ಇತ್ತ ವಿನಾಯಕನ ಗಾಡಿ ಮತ್ತೆ ಜೋರಾದ ಶಬ್ದ ಮಾಡುತ್ತ ದೇವಸ್ಥಾನದ ಕಡೆ ಸಾಗಿತು.

ಅವಸ್ಥೆ


ಆವತ್ತು ಯಾಕೋ ಜೋಯೀಸರು ಸಂಧ್ಯಾವಂದನೆಯನ್ನು ಅರ್ಧಕ್ಕೆ ನಿಲ್ಲಿಸಿ ದೇವರ ಕೊಣೆಯಿಂದ ಹೊರಬಂದರು. ಕನಿಷ್ಠ ನೂರಾಎಂಟು ಗಾಯತ್ರಿಯನ್ನಾದರೂ ಪ್ರತಿ ಸಂಜೆ ಮಾಡುತ್ತಿದ್ದ ಅವರು ಇವತ್ತು ಕನಿಷ್ಠ ಹತ್ತನೂ ಸರಿಯಾಗಿ ಪೂರ್ತಿಮಾಡಿರಲಿಲ್ಲ. “ಥೂತ್ ಇದರ, ಇತ್ತೀಚಿಗೆ ಯಾಕೊ ಏನೇನೋ ಹಾಳಾದ ವಿಚಾರಗಳು ತಲೆಯಲ್ಲಿ” ಎನ್ನುತ್ತ ಜೋಯೀಸರು ಮನೆಯ ಜಗುಲಿಯ ಮೇಲೆ ಕುಳಿತು ಎಲೆ ಅಡಿಕೆಯ ಬಟ್ಟಲಿಗೆ ಕೈಯನ್ನು ಹಾಕಿದರು.
ಆಗ ತಾನೆ ಸೂರ್ಯನು ಅಡಿಕೆ ತೋಟದ ಹಿಂಬದಿಯಿಂದ ಮರೆಯಾಗಿ ಬಹಳ ದೂರವೇನಲ್ಲದ ಅರಬ್ಬೀ ಸಮುದ್ರದಲ್ಲಿ ವಿಶ್ರಮಿಸಲು ಅಣಿಯಾಗುತ್ತಿದ್ದ. ಸಂಜೆಯ ತಂಪಾದ ಗಾಳಿಯು ಅಡಿಕೆ ತೆಂಗಿನ ಮರಗಳ ಮಧ್ಯದಿಂದ ನುಸುಳಿ ಅವನ್ನು ಅತ್ತಿಂದಿತ್ತ ನೂಕುತ್ತಿತ್ತು. ದಿನವಿಡೀ ಸೂರ್ಯನ ಬಿಸಿಲಿಗೆ ಮುದುಡಿ ಸುಸ್ತಾಗಿದ್ದ ಅಡಿಕೆ ತೆಂಗಿನ ಮರಗಳಿಗೆ ತಂಗಾಳಿಯ ಚೆಲ್ಲಾಟ, ಗಾಯದ ಮೇಲೆ ಬರೆ ಎಳೆದಂತಾಗುತ್ತಿತ್ತು. ಏನು ಮಾಡುವುದು ಎಲ್ಲಾ ಪ್ರಕೃತಿ ನಿಯಮ ಎಂಬಂತೆ ಅವು ಸಮಾಧಾನ ಪಟ್ಟುಕೊಳ್ಳುವಂತೆ ತೋರುತ್ತಿತ್ತು.
ಅತ್ತ ತಂಗಾಳಿ ಮರಗಳ ಮಧ್ಯದಲ್ಲಿ ನುಸುಳುತ್ತಿದ್ದರೆ, ಇತ್ತ ಜೋಯೀಸರ ಮನಸ್ಸನ್ನು ಏನೇನೋ ವಿಚಾರಗಳು ಎಲ್ಲೆಲ್ಲಿಗೋ ಎಳೆಯುತ್ತಿತ್ತು. “ಪಾರ್ವತಿ ಇದ್ದಿದ್ದರೆ ಇದೆಲ್ಲಾ ಸಮಸ್ಯೆ ಇತ್ತಾ ?, ಯಾರನ್ನೋ ಎಷ್ಟೆಷ್ಟೋ ವರ್ಷ ಬದುಕಿಸುವ ಆ ದೇವರು ಅವಳನ್ನ ಇನ್ನೊಂದಿಷ್ಟು ವರ್ಷ ಬದುಕಿಸ ಬಾರದಿತ್ತಾ?”. ಆರು ತಿಂಗಳ ಹಿಂದೆಯಷ್ಟೇ ತಮ್ಮ ಹೆಂಡತಿಯನ್ನು ಕಳೆದುಕೊಂಡಿದ್ದ ಜೋಯಿಸರು ಈಗ ಒಬ್ಬಂಟಿಯಾಗಿದ್ದರು. ಏಕಾಂಗಿತನ ಜೋಯೀಸರನ್ನು ಕಾಡುತ್ತಿತ್ತು. ಜೋಯೀಸರ ಜೀವನ ದಿಕ್ಕುತಪ್ಪಿತ್ತು. ಮುಂದೇನು ಮಾಡಬೇಕೆಂಬುದು ತೋಚುತ್ತಿರಲಿಲ್ಲ.
“ಇಷ್ಟು ದೊಡ್ಡ ಮನೆ ಇದೆ, ತೋಟ ಇದೆ, ವೇದ ಶಾಸ್ತ್ರ ಗಳಲ್ಲಿ ಪರಿಣಿತಿ ಇದೆ ಆದ್ರೆ ಏನ್ ಪ್ರಯೋಜನ ? ಒಬ್ಬನ್ನೇ ಈ ಮೆನೆಲಿ ಏನ್ ಮಾಡ್ಲಿ? ಎಷ್ಟ್ ದಿನ ಅಂತ ಮಾಡಿದ್ದೇ ಅಡಿಗೆ ಮಾಡುದು ? ಎಲ್ಲಾದ್ರು ಊರಲ್ಲಿ ಪುರೋಹಿತ್ಯ ಮಾಡೋಣ ಅಂದ್ರೆ ಅದೂ ಈ ವಯಸ್ಸಲ್ಲಿ ಸ್ವಲ್ಪ ಕಷ್ಟನೇ.ಅದೂ ಪ್ರತಿ ದಿನ ಮಾಡ್ಲಿಕ್ಕೆ ಆಗುತ್ತೆಯೇ? ಈ ಒಂಟಿ ಮನೇಲಿ ನಾಳೆ ನಾನು ಸತ್ತು ಹೋದ್ರೂ ಹೇಳೋರಿಲ್ಲ ಕೇಳೋರಿಲ್ಲ”.
“ಮಗ ಇದ್ದಾನೆ ನಿಜ. ಅವ್ನು ಬೆಂಗಳೂರು ಬಿಟ್ಟು ಇಲ್ಲೆಲ್ಲೂ ಇರ್ಲಿಕ್ಕೆ ತಯಾರಿಲ್ಲ. ಅವನೂ ಒಂದು ಲೆಕ್ಕದಲ್ಲಿ ಸರಿಯೇ. ಇಲ್ಲಿ ಮನೆಯಿದೆ, ತೋಟ ಇದೆ ಯಾವುದಕ್ಕೂ ಕೊರತೆ ಇಲ್ಲ ನಿಜ, ಆದ್ರೆ ಇಂಜಿನಿಯರ್ ಓದಿ ಇಲ್ಲಿ ಅಡಿಕೆ ಹೆಕ್ಕಲಿಕ್ಕಾಗುತ್ತೆಯೇ? ಅವನ ಹೆಂಡತಿಯೂ ಅಷ್ಟೆ. ಏನ್ ಮಾಡೋದು ಹಣೆಬರಹ”.
“ಅವನೇನೋ ಬೆಂಗಳೂರಿಗೆ ಬಂದು ಇರು ಅಂತಾನೆ ನಿಜ. ನಾನೇನು ಮಾಡ್ಲಿ ಬೆಂಗಳೂರಿನಲ್ಲಿ ? ಅಲ್ಲಿನ ಜೀವನ ಶೈಲಿ ಎಲ್ಲಾ ನನಗೆ ಒಗ್ಗುತ್ತದೆಯೇ? ಈ ಪೂರ್ವಿಕರು ಸಂಪಾದಿಸಿದ ಆಸ್ತಿ,ವಂಶದ ಗೌರವ,ಪರಂಪರೆ ಇದಕ್ಕೆಲ್ಲ ಹೊಣೆ ಯಾರು? ಇದನ್ನು ಮಾರಾಟಮಾಡಿ ಎಲ್ಲೋ ಇರಲು ನನ್ನಿಂದ ಸಾಧ್ಯವಿಲ್ಲ. ಈ ಊರಲ್ಲಿ ಗೌರವ ಸಿಕ್ಕಂತೆ ಅಲ್ಲೂ ಸಿಗಲು ಸಾಧ್ಯವೇ? ಇಲ್ಲಿ ವೇದಾಧ್ಯಯನ,ಸಂಧ್ಯಾವಂದನೆ ಮಾಡಿದಂತೆ ಅಲ್ಲಿ ಮಾಡಲು ಸಾಧ್ಯವೇ? ಅಲ್ಲದೆ ಬೆಂಗಳೂರಿನ ಮನೆ ಅಂದ್ರೆ ಎಷ್ಟು ದೊಡ್ದದಿರುತ್ತಪ್ಪ? ಅವರ ಜೊತೆ ನಾನೂ ಸೇರಿ ಇನ್ನೊಂದು ಹೊರೆಯಾಗಲೇ ? ಅದೆಲ್ಲಾ ಆಗದ ಮಾತು”.
“ಏನ್ ಮಾಡೋದು ಈಗ. ಎಲ್ಲರೂ ಇಂಜಿನಿಯರ್ ಓದಿಸ್ತಾರೆ ಅಂತ ನಾನೂ ಓದಿಸ್ದೆ. ವೇದ ಮಂತ್ರ ಓದಿಸಿದ್ರೆ ಇಲ್ಲಾದ್ರೂ ಇರ್ತಿದ್ದನೋ ಏನೋ. ಎಲ್ಲಾ ಓದುವಾಗ ಇವ್ನೂ ಓದಲಿ ಆಂತ ಓದಿಸ್ದೆ, ಅದು ತಪ್ಪಾ? ಈಗ ನೋಡಿದ್ರೆ ನಾನು ಸತ್ತ ಮೇಲೆ ಈ ಪೂರ್ವಜರ ಆಸ್ತಿ,ಪರಂಪರೆ ಇದಕ್ಕೆಲ್ಲ ದಿಕ್ಕು ಯಾರು? ಅವನಲ್ಲಿ ಹೇಳಿದ್ರೆ ಆಸ್ತಿ,ಪರಂಪರೆ ಬೇಕಾದ್ರೆ ಹಾಳಾಗ್ಲಿ ತನಗೆ ಬೆಂಗಳೂರಿನಲ್ಲಿ ಕೆಲ್ಸ ಮಾಡೋದೇ ಮುಖ್ಯ ಅಂತಾನೆ. ಈ ಕಾಲದ ಹುಡುಗರಿಗೆ ಅದಕ್ಕೆಲ್ಲ ಬೆಲೆಯೇ ಇಲ್ಲ. ಇಲ್ಲೇ ಇಂಜಿನಿಯರ್ ಕೆಲ್ಸ ಮಾಡು ಅಂದ್ರೆ ಬೆಂಗಳೂರೇ ಆಗ್ಬೇಕು ಅಂತಾನೆ. ಇಲ್ಲೆಲ್ಲಾ ಸರಿಯಾಗಿ ಕೆಲ್ಸ ಸಿಗೊಲ್ವಂತೆ. ಇಲ್ಲಿದ್ರೆ ಅವ್ನೂ ಸುಖವಾಗಿ ಇರ್ತಿದ್ದ. ಅಲ್ಲಿ ಕಷ್ಟ ಪಡೋದ ನೋಡಿದ್ರೆ ಯಾಕಪ್ಪ ಅವ್ನು ಅಷ್ಟೆಲ್ಲ ಒದ್ದಾಡಬೇಕು ಅನ್ಸುತ್ತೆ. ಏನ್ ಮಾಡೋದು ಬೆಂಗಳೂರಿನ ಹುಚ್ಚು. ಅವನಾದ್ರೂ ಏನ್ ಮಾಡ್ತಾನೆ? ಅವನ ಯೋಗ್ಯತೆಗೆ ಇಲ್ಲೆಲ್ಲಾ ಸರಿಯಾದ ಕೆಲ್ಸ ಸಿಗಲ್ಲ ಅಂದ್ರೆ”.
“ಅವನ ಕಥೆ ಹಾಳಾಗ್ಲಿ ನಾನ್ ಏನ್ ಮಾಡ್ಲಿ ಈಗ? ಅತ್ತಲಾಗಿ ಅಲ್ಲೂ ಹೋಗುವಹಾಗಿಲ್ಲ. ಇಲ್ಲೂ ಇರ್ಲಿಕ್ಕೆ ಆಗ್ತಿಲ್ಲ. ಒಟ್ನಲ್ಲಿ ತ್ರಿಶಂಕು ಪರಿಸ್ತಿತಿ” ಅಂದುಕೊಳ್ಳುತ್ತಾ ಜೋಯಿಸರು ಬಾಯೊಳಗೆ ಜಗಿದು ನೀರಾಗಿದ್ದ ಎಲೆ ಅಡಿಕೆಯನ್ನು ಅಂಗಳದ ಪಕ್ಕಕ್ಕೆ ಇರುವ ಅಡಿಕೆ ಮರದ ಬುಡದಲ್ಲಿ ಉಗಿದು ಬಂದರು. ಆಗ ತಾನೆ ಸೂರ್ಯನು ವಿಶ್ರಮಿಸಿ ಕತ್ತಲೆ ತನ್ನ ಕೆಲಸ ಆರಂಭಿಸಿ ಆಗಿತ್ತು. ಅಡಿಕೆ ತೆಂಗಿನ ಮರಗಳೂ ಸುಸ್ತಾಗಿ ನಿದ್ರೆ ಮಾಡುತ್ತಿರುವಂತೆ ಕಾಣುತ್ತಿತ್ತು. ಜೋಯಿಸರ ಮನೆಯ ಅಂಗಳದಲ್ಲಿ ಹಾಕಿದ್ದ ವಿದ್ಯುತ್ ಬಲ್ಬಿನ ಬೆಳಕು ಅಡಿಕೆ ತೋಟದಲ್ಲೆಲ್ಲ ನುಸುಳಿ ಬಗೆ ಬಗೆಯ ಬಿಂಬ ಪ್ರತಿಬಿಂಬಗಳನ್ನು ಸೃಷ್ಟಿಸುತ್ತಿತ್ತು. ಆ ಬಿಂಬ ಪ್ರತಿಬಿಂಬಗಳು ಕೆಲವೊಮ್ಮೆ ಜೋಯಿಸರ  ಮನಸ್ಸಿನ ಗೊಂದಲಗಳ ಚಿತ್ರಣವೇ ಎಂಬಂತೆ ಭಾಸವಾಗುತ್ತಿತ್ತು.
“ನನಗಂತೂ ದಿಕ್ಕು ತೋಚದಂತಾಗಿದೆ ಮುಂದೇನು ಮಾಡ್ಬೇಕೋ ಆ ಭಗವಂತನೇ ದಾರಿ ಕಾಣಿಸಬೇಕಷ್ಟೇ. ಥೂ ಹಾಳಾದ ಹಸಿವು, ಸ್ವಲ್ಪ ಅನ್ನನಾದ್ರೂ ಬೆಯಿಸಬೇಕು. ಈ ನನ್ನ ಅವಸ್ಥೆ ಯಾರಿಗೂ ಬರಬಾರ್ದಪ್ಪ. ಈ ಅವಸ್ಥೆಗೆ ಪರಿಹಾರವಾಗಿ ಏನಾದ್ರೂ ಮಂತ್ರ ತಂತ್ರ ಗಳಿದ್ದರೆ ಅದನ್ನಾದರೂ ಮಾಡಬಹುದಿತ್ತು. ಅಷ್ಟೊಂದು ವೇದ ಶಾಸ್ತ್ರ ಬರೆದ ಋಷಿ ಮುನಿಗಳು ಇದನ್ನೆಲ್ಲಾ ಯೋಚಿಸಿಯೇ ಇಲ್ಲವೇ?” ಎನ್ನುತ್ತ ಜೋಯೀಸರು ಅಡುಗೆ ಮನೆಯತ್ತ ಧಾವಿಸಿದರು.

ಒಂದಕ್ಕೆ ಒಂದೂವರೆ !!

ಮನೆಯ ಜಗುಲಿಯ ಮೇಲೆ ಚಪ್ಪರದ ನೆರಳಲ್ಲಿ ಆಗ ತಾನೆ ತಿಥಿ ಊಟ ಮುಗಿಸಿಕೊಂಡು ಮಧ್ಯಾಹ್ನದ ಸಣ್ಣ ನಿದ್ರೆ ಮುಗಿಸಿದ್ದ ಸುಬ್ಬಾಭಟ್ಟರು ಅರೆ ನಿದ್ರಾವಸ್ತೆಯಲ್ಲೇ ಸ್ವಲ್ಪ ಏರು ದನಿಯಲ್ಲಿ ಮಾತನಾಡ ತೊಡಗಿದರು. “ಒಟ್ಟೂ ಎಷ್ಟು ಕೆಜಿ ಅಡಿಕೆ ಸುಲ್ದೆ ಒಟ್ಟಿಗೆ ? ನಾಳೆ ಕುಮಟ ಪೇಟೆಗೆ ಎಲ್ಲಾ ಕೊಟ್ಟಿ ಬರವು”. ಆಗ ತಾನೆ ಕುಡಿಯುವ ನೀರಿಗೆ ಚಹಾ ಪುಡಿಯನ್ನು ಹಾಕುತ್ತಿದ್ದ ಭಟ್ಟರ ಹೆಂಡತಿ, ಅಡುಗೆ ಕೋಣೆಯಿಂದಲೇ ತಾನೇನೂ ಕಡಿಮೆಯಿಲ್ಲ ಎಂಬಂತೆ ಮತ್ತೂ ಜೋರಾಗಿ “ಒಂದು ಐದು ಕೆಜಿ ಅಗ್ಲಕ್ಕು ಕಾಣಿಸ್ತು” ಎನ್ನುತ್ತ ಕುದಿಯುತ್ತಿದ್ದ ಚಹವನ್ನು ಲೋಟಕ್ಕೆ ಹಾಕಲು ತಯಾರಿ ನಡೆಸ ತೊಡಗಿದಳು. “ಇಷ್ಟೆಲ್ಲಾ ದಿನ ಸುಲಿದದ್ದು ಬರಿ ಐದು ಕೆಜಿನ ?” ಎಂದು ಗೊಣಗುತ್ತಿರುವಾಗಲೇ ಭಟ್ಟರ ಹೆಂಡತಿ ಚಹಾದ ಲೋಟವನ್ನು ಸುಬ್ಬಾಭಟ್ಟರ ಮುಖದ ಮುಂದೆ ಹಿಡಿಯುತ್ತ ಅಂದಳು “ಈ ಥರ ಸಂಜೆ ವರೆಗೆ ನಿದ್ರೆ ಮಾಡೋದು ಬಿಟ್ಟು, ನೀವೂ ಅಡಿಕೆ ಸುಲಿದಿದ್ರೆ ಗೊತ್ತಾಗ್ತಿತ್ತು ಎಷ್ಟು ಕೆಜಿ ಆಗಬಹುದು”. ಇವಳ ಜೊತೆ ಜಗಳ ಮಾಡಿ ಗೆಲ್ಲಲು ಸಾಧ್ಯವಿಲ್ಲ ಎಂದು ಮನಸ್ಸಿನಲ್ಲೇ ಎಣಿಸಿದ ಭಟ್ಟರು, ಮುಂದೇನೂ ಹೇಳದೆ ಮುಖದ ಮುಂದೆ ಹಿಡಿದಿರುವ ಚಹಾದ ಲೋಟವನ್ನು ತೆಗೆದುಕೊಂಡು ನಿಧಾನವಾಗಿ ಹೀರತೊಡಗಿದರು.
ಭಟ್ಟರು ನಿಧಾನವಾಗಿ ಚಹಾ ಮುಗಿಸುವಷ್ಟರಲ್ಲಿ, ದಿನಪೂರ್ತಿ ಸ್ವಲ್ಪವೂ ವಿಶ್ರಮಿಸದೆ ದುಡಿದ ಸೂರ್ಯನು ದಣಿವಾದಂತೆ ಅಡಿಕೆ ಮರಗಳ ಸಂದಿನಲ್ಲಿ ಕಾಣತೊಡಗಿದ. ಸೂರ್ಯನ ಪ್ರಖರ ಬಿಸಿಲಿನಿಂದ ಬಳಲಿ  ತಮ್ಮ ಗರಿಗಳನ್ನು ಮುದುಡಿಸಿ ಕೊಂಡಿದ್ದ ಅಡಿಕೆ ಮರಗಳು ಅನತಿ ದೂರದ ಅರಬ್ಬೀ ಸಮುದ್ರದ ತಂಗಾಳಿಗೆ ಚೇತರಿಸಿಕೊಂಡು, ಆಗ ತಾನೇ ಅವು ತಮ್ಮ ಗರಿಗಳನ್ನು ತಂಗಾಳಿಯನ್ನು ಸ್ವಾಗತಿಸುವಂತೆ ಅಲ್ಲಾಡಿಸುತಿತ್ತು. ಅಲ್ಲಿ ಇಲ್ಲಿ ಆಗೊಮ್ಮೆ ಈಗೊಮ್ಮೆ ಯಾವುದೋ ಪಕ್ಷಿಗಳು ತಮ್ಮ ಇಂಪಾದ ದನಿಯನ್ನು ತಂಗಾಳಿಯಲ್ಲಿ ತೇಲಿ ಬಿಡುತ್ತಿದ್ದವು. ಈ ಎಲ್ಲದರ ಮಧ್ಯೆ, ಭಟ್ಟರ ಮನೆಯ ಎದುರಿನ ರಸ್ತೆಯಲ್ಲಿ ಹೋಗುತ್ತಿದ್ದ ದೇವು, ಮನೆಯ ಅಂಗಳದಲ್ಲಿ ಸುಲಿದು ಚೀಲದಲ್ಲಿ ತುಂಬಿ, ಬಿಸಿಲಿನಲ್ಲಿ ಒಣಗಿಸಲು ಇಟ್ಟಿದ್ದ ಅಡಿಕೆಯನ್ನು ನೋಡಿ ಇದನ್ನು ಹೇಗಾದರೂ ಹೊಂಚುಹಾಕಿ ಕದಿಯಬೇಕು ಎಂದು ಮನಸ್ಸಿನಲ್ಲಿ ಎಣಿಸುತ್ತ ಭಟ್ಟರನ್ನು ಕೂಗುತ್ತ ಮನೆಯ ಗೇಟನ್ನು ತಳ್ಳಿದ. ಇನ್ನೇನು ಭಟ್ಟರು ಒಮ್ಮೆ ತೋಟ ಸುತ್ತಿ ಬರೋಣ ಎಂದು ಎದ್ದೇಳುವಷ್ಟರಲ್ಲಿ, ಮನೆಯ ಗೇಟನ್ನು ಯಾರೋ ಜೋರಾಗಿ ತಳ್ಳುವ ಶಬ್ದವಾಯಿತು.ಯಾರಪ್ಪಾ ಅದು ಅನ್ನುವಷ್ಟರಲ್ಲಿ, ದೇವು ಭಟ್ಟರನ್ನು ಕರೆಯುತ್ತ ಒಳಗಡೆ ಬಂದ “ಏನ್ ಭಟ್ರೇ, ಈ ಸಲ ನಿಮ್ಮ ಅಡಿಕೆ ಬೆಳೆ ಜೋರ ಹೇಗೆ? ಅಡಿಕೆ ಈಗಲೇ ಸುಲಿಸ ಹತ್ತಿದ್ರಿ”. “ಬೆಳೆ ಎಲ್ಲಾ ಕೊಳೆ ರೋಗ ಬಂದು ಹಾಳಾಗಿ ಹೊಯ್ತ. ಏನ್ ದೇವು ಬಹಳ ಅಪರೂಪದ ಮನುಷ್ಯ ಆಗ್ಬಿಟ್ಟೆ ಮಾರಾಯ, ಯಾವ ಕಡೆ ಕೆಲ್ಸ ಈಗ ?” ಎನ್ನುತ್ತಲೇ ಭಟ್ಟರು ಎಲೆ ಅಡಿಕೆಯ ಡಬ್ಬಿಗೆ ಕಯ್ಯನ್ನು ಹಾಕಿದರು. “ಈಗ ಏನಿದ್ರೂ ಪೇಟೇಲಿ ಕೆಲ್ಸ. ಕಡ್ಮೆ ಅಂದ್ರೂ ನೂರು ರೂಪಾಯಿ ನೋಡಿ, ಊರಲ್ಲಿ ಕೆಲ್ಸ ಮಾಡ್ದ್ರೆ ಐವತ್ತು ಕೊಡ್ಲಿಕ್ಕೂ ಹಿಂದೆ ಮುಂದೆ ನೋಡ್ತಾರೆ” ಎನ್ನುತ್ತಿರುವಾಗಲೇ ಭಟ್ಟರು “ಇನ್ಮೇಲೆ ತೋಟದ ಕೆಲ್ಸ ಮಾಡ್ಸೋದು ಕಷ್ಟನೇ ಇದೆ” ಎಂದು ಗೊಣಗ ತೊಡಗಿದರು. “ನಿಮಗಾದ್ರೆ ತೋಟ ಇದೆ, ಪುರೋಹಿತ್ಯ ಬೇರೆ ಮಾಡ್ತೀರ” ಎಂದು ದೇವು ತನ್ನ ಮಾತನ್ನು ಶುರು ಮಾಡುತ್ತಿರುವಾಗಲೇ ಭಟ್ಟರ ಹೆಂಡತಿ ಮನೆ ಒಳಗಿನಿಂದ ಬಂದು “ಈಗೆಲ್ಲ ತೋಟದಲ್ಲಿ ಕಳ್ಳತನ ಜಾಸ್ತಿ ಆಗಿದೆ, ಒಂದ್ಸಲ ತೋಟ ಸುತ್ತಿಕೊಂಡು ಬಾ ಅಂತ ಹೇಳಿದ್ರೆ ಇಲ್ಲೇ ಇನ್ನೂ ಕುಳಿತು ಕೊಂಡೆ ಇದ್ದಾರೆ ನೋಡು” ಎಂದು ದೇವುವಿಗೆ ತನ್ನ ತನ್ನ ದೂರನ್ನು ಒಪ್ಪಿಸತೊಡಗಿದಳು. “ ಈಗೆಂತ ತೋಟ ತಿರ್ಗುದು? ಕತ್ತೆಲೆಲಿ ಹಾವು ಗಿವು ಕಚ್ಚಿದ್ರೆ ಏನ್ ಮಾಡುದು ಹೇಳು?” ಎನ್ನುತ್ತ ಭಟ್ಟರು ಅವಳಿಂದ ನುಣುಚಿಕೊಳ್ಳಬೇಕು ಎನ್ನುವಷ್ಟರಲ್ಲೇ ದೇವು ಮಧ್ಯಬಾಯಿಹಾಕಿ, “ ಅರೆ ಇವತ್ತು ಪಕ್ಕದ ಊರಿನ ಜಾತ್ರೆಗೆ ಹೋಗುವುದಿಲ್ಲವ ಹೇಗೆ?” ಎಂದು ಭಟ್ಟರನ್ನು ಪ್ರಶ್ನಿಸಿದ. “ನಾನು ಜಾತ್ರೆ ಹೋಗುವುದನ್ನು ಬಿಟ್ಟೆ ಬಿಟ್ಟಿದ್ದೇನೆ ನೋಡು, ಬರಿ ಜನ ಅಲ್ಲಿ, ದುಡ್ಡು ಬೇರೆ ಸುಮ್ನೆ ಖರ್ಚು ಅಲ್ಲಿ ಹೋದ್ರೆ” ಎನ್ನುತ್ತ ಭಟ್ಟರು ಆಗ ತಾನೆ ಸಿದ್ದಗೊಳಿಸಿದ್ದ ಎಲೆ ಅಡಿಕೆ ಯನ್ನು ಬಾಯಿಗೆ ತುರುಕಿಕೊಳ್ಳುತ್ತ ದೇವುವಿಗೂ ಒಂದಿಷ್ಟು ಎಲೆ,ಅಡಿಕೆ.ಸುಣ್ಣ ವನ್ನು ನೀಡಿದರು. “ಬಹಳ ವರ್ಷ ಅದ್ಮೇಲೆ ಈಗ ಹೇಗಿದೆ ನೋಡ್ಕೊಂಡು ಬರುವ, ಯಕ್ಷಗಾನ ಬೇರೆ ಇದ್ಯಂತೆ, ಇಲ್ಲಿಂದ ಹೊಳೆ ದಾಟಿದ್ರೆ ಬರಿ ಅರ್ಧ ಗಂಟೆ ನಡೆಬೇಕು ” ಎಂದೆಲ್ಲಾ ವಿವರಿಸ ತೊಡಗಿದ. “ಅದೆಲ್ಲಾ ನಂಗೂ ಗೊತ್ತುಂಟಪ್ಪ” ಎನ್ನುತ್ತ ಭಟ್ಟರು ಹೆಂಡತಿಯ ಕಾಟದಿಂದ ಸ್ವಲ್ಪ ತಿಪ್ಪಿದಂತಾಗುತ್ತದೆ ಎಂದೆಣಿಸಿ “ಸರಿ ನಡೆ ಹೊರಡೋಣ” ಅಂದರು. “ ಒಂದು ಹತ್ತು ನಿಮಿಷ, ಇಲ್ಲೇ ಶೆಟ್ಟರ ಅಂಗಡಿಲಿ ಸಣ್ಣ ಕೆಲ್ಸ ಮುಗಿಸಿಕೊಂಡು ಬರ್ತೇನೆ ಆಮೇಲೆ ಹೋಗೋಣ, ನೀವು ಬೇಗ ತಯಾರಾಗಿ” ಎನ್ನುತ್ತ ದೇವು ಮೇಲೆದ್ದ.ಭಟ್ಟರೂ ಮೇಲೆದ್ದು ಮನೆಯೊಳಗೆ ಏನನ್ನೋ ಯೋಚಿಸುತ್ತ ನಡೆದರು. ಆಗ ತಾನೆ ಸಂಜೆಯ ತಿಳು ಬೆಳಕಿನ ಮೇಲೆ ಕತ್ತಲೆಯು ಆಕ್ರಮಣ ಮಾಡಲು ಸಿದ್ದವಾಗುತ್ತಿತ್ತು. ಆಗಸದಲ್ಲಿ ಮೋಡಗಳ ಮಧ್ಯದಿಂದ ಚಂದ್ರನು ತನ್ನ ಅರ್ಧದಷ್ಟೇ ಶಕ್ತಿಯನ್ನು ಕತ್ತಲೆಯ ಮೇಲೆ ಪ್ರದರ್ಶಿಸಲು ಅರೆಮನಸ್ಸಿನಿಂದ ಅಣಿಯಾಗುತ್ತಿದ್ದ.
ಜಾತ್ರೆಯೇನೋ ಜೋರಾಗಿಯೇ ಇತ್ತಾದರೂ ಭಟ್ಟರಿಗೆ ಯಾವುದರಲ್ಲೂ ಆಸಕ್ತಿ ಹುಟ್ಟಲಿಲ್ಲ. ದೇವು ಈ ಮಧ್ಯೆ “ಬನ್ನಿ ಇಲ್ಲೇ ಹೊಸ ರೀತಿಯ ಆಟ ಬಂದಿದೆ ಆಡ್ಕೊಂಡು ಬರೋಣ” “ಆಟ ಅಂದ್ರೆ ಜೂಜಾಟ ಅಲ್ವ ನೀನು ಹೇಳ್ತಾ ಇರೋದು? ನಾನು ಅದೆಲ್ಲಾ ಆಡುವುದಿಲ್ಲಪ್ಪ” ಎನ್ನುತ್ತ ಭಟ್ಟರು ಸ್ವಲ್ಪ ಕೂಪ ತೋರಿಸಿದರು.ಆದರೂ ದೇವು ಒತ್ತಾಯ ಮಾಡಿ ಭಟ್ಟರಿಗೆ ಒಂದು ಆಟ ಆಡಿಸಿದ. ಏನೋ ಮಜವೆನ್ನಿಸಿ ಭಟ್ಟರು ಇನ್ನೂ ಒಂದಿಷ್ಟು ಆಡಿದರು. ದೇವುವೂ ಭಟ್ಟರ ದುಡ್ಡಿನಲ್ಲೇ ಒಂದಿಷ್ಟು ಆಡಿದ. ಸ್ವಲ್ಪ ಜಾಸ್ತಿಯೇ ದುಡ್ಡು ಕಳಕೊಂಡ ಮೇಲೆ ಭಟ್ಟರಿಗೆ ಏನನ್ನಿಸಿತೋ ಏನೋ ಅಲ್ಲಿಗೇ ಮುಕ್ತಾಯ ಮಾಡಿದರು. ಜೂಜಾಟದಲ್ಲಿ ಸ್ವಲ್ಪ ಪಳಗಿದ್ದ ದೇವು ಭಟ್ಟರ ದುಡ್ಡಿನ ಜೊತೆ ತನ್ನ ದುಡ್ಡನ್ನೂ ಸೇರಿಸಿ ಸ್ವಲ್ಪ ಲಾಭವನ್ನೇ ಮಾಡಿಕೊಂಡ. ಆಗಲೇ ಸಾಕಷ್ಟು ದುಡ್ಡು ಕಳೆದುಕೊಂಡು ಉತ್ಸಾಹ ಕಳೆದುಕೊಂಡಿದ್ದ ಭಟ್ಟರಿಗೆ ಯಕ್ಷಗಾನ ನೋಡಬೇಕೆಂಬ ಬಯಕೆಯೂ ದೂರವಾಗಿತ್ತು. ದೇವು ಎಷ್ಟೇ ಒತ್ತಾಯ ಮಾಡಿದರೂ ಈ ಸಲ ಭಟ್ಟರು ಮಂದ ಬೆಳದಿಂಗಳಿನಲ್ಲಿ ಅದಕ್ಕಿಂತಲೂ ಮಂದವಾಗಿ ಉರಿಯುವ ತಮ್ಮ ಬ್ಯಾಟರಿ ಹಿಡಿದು ತನ್ನ ಅದ್ರಷ್ಟವನ್ನ ಶಪಿಸುತ್ತ ಮನೆಕಡೆ ಹೆಜ್ಜೆಹಾಕಿದರು. ಮನೆ ಮುಟ್ಟುವಷ್ಟರಲ್ಲಿ ಜಾತ್ರೆಯ ಯಕ್ಷಗಾನದ ಚಂಡೆ, ಗಾಯನಗಳ ದ್ವನಿವರ್ಧಕದ ಸದ್ದು, ಭಟ್ಟರ ಹೆಂಡತಿಯ ಟಿವಿಯ ಸದ್ದಿನಲ್ಲೂ ಸಣ್ಣ ದನಿಯಲ್ಲಿ ಕೇಳಿಸುತ್ತಿತ್ತು. “ಏನು ಯಕ್ಷಯಾನ ನೋಡಿರಿಲ್ಯ ಹೇಗೆ ?” ಎನ್ನುತ್ತ ಭಟ್ಟರ ಹೆಂಡತಿ ಬಾಗಿಲು ತೆಗೆದಳು. “ಹಾಳಾಗ್ಲಿ ಆ ಯಕ್ಷಗಾನ ಎಲ್ಲಾ” ಎನ್ನುತ್ತ ಆಗಲೇ ದುಡ್ಡು ಕಳೆದುಕೊಂಡು ಕೋಪಗೊಂಡಿದ್ದ ಭಟ್ಟರು ಮನೆಯೊಳಗೆ ನುಗ್ಗಿದರು.
ಬೆಳಗಿನ ಜಾವ ಭಟ್ಟರ ಹೆಂಡತಿ ಏನೋ ಕೂಗಾಟ ಕೇಳಿ ಹಾಸಿಗೆಯಿಂದ ಎದ್ದು ಕುಳಿತಳು. ಯಾರಿದು ಬೆಳಿಗ್ಗೆ ಬೆಳಿಗ್ಗೆ ಕೂಗಾಡುತ್ತಿರುವುದು ಎನ್ನುತ್ತ ನೋಡಿದರೆ, ಭಟ್ಟರು ಮನೆ ಅಂಗಳದಲ್ಲಿ ನಿಂತು ಯಾರನ್ನೋ ಬಯ್ಯುತ್ತಿದ್ದರು. “ಅವನನ್ನು ಇವತ್ತು ಬಿಡುದಿಲ್ಲ ಅಡಿಕೆ ಕದ್ಕೊಂದು ಹೋಗಿ ಶೆಟ್ಟರ ಅಂಗಡಿಗೆ ಕೊಟ್ಟಿದ್ದು ಅಲ್ದೆ ಜೂಜು ಬೇರೆ ಆಡಿಸಿದ, ಅವನ ಕಾಲು ಮುರಿದೆ ಹೋದ್ರೆ ನಾನು ಸುಬ್ಬಾಭಟ್ಟನೇ ಅಲ್ಲ”. “ಎಂತದು ಆಯ್ತು ನಿಮ್ಗೆ ಬೆಳಿಗ್ಗೆನೆ?” ಎನ್ನುತ್ತ ಭಟ್ಟರ ಹೆಂಡತಿ ಮನೆಯ ಅಂಗಳಕ್ಕೆ ಬಂದಳು.
“ನೋಡು ಅವ್ನು ಅದ್ನ ಕಡ್ಕೊಂಡು ಹೋದ”
“ಯಾವದನ್ನ?”
“ನೀ ಸುಲಿದಿಟ್ಟ ಅಡಿಕೆನ, ಅಡಿಕೆಗೆ ಈಗ ಒಳ್ಳೆ ರೇಟ್ ಬೇರೆ ಬಂದಿತ್ತು”
“ನಾ ಸುಲಿದ ಅಡಿಕೆ ಮನೆ ಒಳಗೆ ಇಟ್ಟಿದ್ದೆ. ಕಳ್ಳತನ ಆಗೋದ್ರೆ ಅಂತ”
“ಬೆಳಗ್ಗಿನ್ನ ನಿದ್ರೆ ಬೇರೆ ಹಾಳುಮಾಡಿದ್ರಿ” ಎನ್ನುತ್ತ ಭಟ್ಟರ ಹೆಂಡತಿ ಮತ್ತೊಮ್ಮೆ ಶಪಿಸತೊಡಗಿದಳು.