ಭಾನುವಾರ, ಮೇ 20, 2012

ಒಂದು 'ಇರುವೆ'ಯ ಕಥೆ !!


ಮಳೆಗಾಲ  ಆಗ ತಾನೇ  ಪ್ರಾರಂಭವಾಗಿತ್ತು. ಊರಿನ ದೇವಸ್ಥಾನದ ಗರ್ಭಗುಡಿಯ ಹೊರ ಗೋಡೆಯ ಸಂದಿಯಲ್ಲಿ ಹಲವಾರು ವರ್ಷಗಳಿಂದ ಗೂಡು ಕಟ್ಟಿ ಆಶ್ರಯ ಪಡೆದಿದ್ದ ಇರುವೆಗಳಿಗೆ ಮಳೆಗಾಲಕ್ಕೆ ಬೇಕಾದ ಆಹಾರ ಸಂಗ್ರಹಣೆ ಆಗಲೇ ಆಗಿದ್ದರಿಂದ ಇನ್ನು ಮುಂದೆ ಅವುಗಳಿಗೆ ಸ್ವಲ್ಪ ವಿಶ್ರಾಂತಿಯ ಕಾಲವಾಗಿತ್ತು.  ಹಲವಾರು ತಲೆಮಾರುಗಳಿಂದ ಅಲ್ಲಿಯೇ ವಾಸವಾಗಿದ್ದರಿಂದ ಇರುವೆಗಳು ತಮ್ಮ ಗೂಡನ್ನು ತುಂಬಾ ವ್ಯವಸ್ಥಿತವಾಗಿಯೇ ನಿರ್ಮಿಸಿಕೊಂಡಿದ್ದವು.  ದಿನವೆಲ್ಲ ದುಡಿದು ಬರುವ ಕೆಲಸಗಾರ ಇರುವೆಗಳಿಗೆ ವಿಶ್ರಾಂತಿ ಕೋಣೆ . ರಾಣಿ ಇರುವೆಗೆ ವಿಶೇಷವಾಗಿ ನಿರ್ಮಿಸಿದ ಅರಮನೆ. ಇರುವೆಗಳಿಗೆ ಹೊಸ ಹೊಸ ಕೆಲಸಗಳಲ್ಲಿ ಪರಿಣಿತಿ ಪಡೆಯಲು ನಿರ್ಮಿಸಿದ ತರಬೇತಿ ಕೋಣೆಗಳು, ಮಳೆ ಗಾಳಿ  ಶತ್ರುಗಳಿಂದ ರಕ್ಷಿಸಿಕೊಳ್ಳಲು ವ್ಯವಸ್ಥಿತವಾದ  ರಕ್ಷಣಾ ವ್ಯವಸ್ಥೆ, ಆಹಾರ ಸಂಗ್ರಹಣೆಗಾಗಿ ವಿಶೇಷವಾದ  ಉಗ್ರಾಣ ಕೋಣೆಗಳು ಹೀಗೆ ಇರುವೆಗಳ ಸಾಮ್ರಾಜ್ಯ ಸುಸಜ್ಜಿತವಾಗಿತ್ತು. ದೇವಸ್ಥಾನದ ಪಕ್ಕದಲ್ಲಿಯೇ ಇರುವೆಗಳು ವಾಸವಾಗಿದ್ದರಿಂದ ಆಹಾರ ಸಂಗ್ರಹಣೆ ಅಷ್ಟೊಂದು ಕಷ್ಟಕರವಾಗಿರದಿದ್ದರೂ ಮಳೆಗಾಲದಂಥಹ ಸಂದರ್ಭಕ್ಕೆ ಆಹಾರ ಸಂಗ್ರಹಣೆ ಇರುವೆಗಳಿಗೆ ಅನಿವಾರ್ಯ ವಾಗುತ್ತಿತ್ತು. ಹಾಗಾಗಿ ಬೇಸಿಗೆ ಕಾಲವೆಲ್ಲ ಇರುವೆಗಳಿಗೆ ಆಹಾರ ಸಂಗ್ರಹಣೆಯದ್ದೇ ಕೆಲಸ. ಸತತವಾಗಿ ಬೇಸಿಗೆಯಲ್ಲಿ ದುಡಿದ ಇರುವೆಗಳಿಗೆ ಈಗ ಮಳೆಗಾಲದಲ್ಲಿ ಸ್ವಲ್ಪ ಬಿಡುವು ಸಿಕ್ಕಿತ್ತು.
ಈ ಮಧ್ಯೆ ಇರುವೆಗಳ ವಾರ್ಷಿಕ ಸಭೆ ಆಗ ತಾನೇ ಆರಂಭವಾಗಿತ್ತು. ವರ್ಷದಲ್ಲಿ ಒಂದೋ ಎರಡೋ ಇಂಥಹ ಬಿಡುವಿನ ಸಂದರ್ಭಗಳು ಒದಗುತ್ತಿದ್ದುದರಿಂದ ಇರುವೆಗಳಿಗೆ ಇದು ಭಾರೀ ಸಂತೋಷದ ಸಂದರ್ಭವಾಗಿತ್ತು. ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುವ ಸಾಮಾನ್ಯ ಇರುವೆಗಳಿಂದ ಹಿಡಿದು ದೊಡ್ಡ ಹಿರಿಯ ಅಧಿಕಾರಿ ಇರುವಗಳವರೆಗೆ  ಎಲ್ಲಾ ಒಟ್ಟಾಗಿ ಸೇರುವ ಸಂದರ್ಭ ಇದಾಗಿತ್ತು.  ಈ ಸಮಯದಲ್ಲಿ ಎಲ್ಲಾ ವಿಭಾಗದ ಇರುವೆಗಳಿಗೂ ಇಡೀ ವರ್ಷದ ತಮ್ಮ ತಮ್ಮ ಅನುಭವ ಹಂಚಿಕೊಳ್ಳಲು ಸಿದ್ದವಾಗುತ್ತಿದ್ದವು.  ಒಂದೆಡೆ ಸೈನ್ಯದಲ್ಲಿ  ಕೆಲಸ ಮಾಡುವ ಇರುವೆಗಳು ತಮ್ಮ ಸಾಹಸಗಳನ್ನು ಬಣ್ಣಿಸಲು ತಯಾರಿ ನಡೆಸಿದರೆ, ಮತ್ತೊಂದೆಡೆ ಆಹಾರ ಹುಡುಕುವ ಸಂಗ್ರಹಿಸುವ ಹೊಣೆ ಹೊತ್ತ ಇರುವೆಗಳ ತಂಡ ಎಷ್ಟೆಷ್ಟು ಎಲ್ಲೆಲ್ಲಿ ಆಹಾರ ಸಂಗ್ರಹವಾಯಿತು ಯಾವ ಯಾವ ಹೊಸ ಆಹಾರ ಸಿಗುವ ಸ್ಥಳದ ಪತ್ತೆಯಾಯಿತು ಎಂಬುದರ ಬಗ್ಗೆ ಸವಿವರವಾದ ವರದಿ ನೀಡಲು ಅಂಕಿ ಅಂಶಗಳ ಜೊತೆ  ತಮ್ಮ  ಸರದಿಗಾಗಿ ಎದುರು ನೋಡುತ್ತಿತ್ತು, ಇವರ ಜೊತೆ ಇರುವೆಗಳ ಗೂಡನ್ನು ಕಟ್ಟುವ, ರಿಪೇರಿ ಮಾಡುವ ಇರುವೆಗಳ ತಂಡ, ರಾಣಿಯ ಸೇವೆ ಹಾಗೂ ಇತರ ಮೇಲ್ವಿಚಾರಣೆ ಮಾಡುವ ಇರುವೆಗಳ ತಂಡ ಹೀಗೆ ಎಲ್ಲರೂ ತಮ್ಮ ತಮ್ಮ ಸಾಧನೆ ಹಾಗೂ ಹೊಸ ವಿಚಾರಗಳನ್ನು ಹಂಚಿ ಕೊಳ್ಳಲು ತುದಿಗಾಲಲ್ಲಿ ನಿಂತಿದ್ದರು.  
ಹೀಗಿರುವಾಗ ಅಲ್ಲಿದ್ದ ಒಂದು ಕೆಲಸಗಾರ ಇರುವೆಗೆ ಮಾತ್ರ ಇವೆಲ್ಲದರಲ್ಲಿ ಏನೂ ಉತ್ಸುಕತೆ ಇರಲಿಲ್ಲ. ಬಹಳ ದಿನದಿಂದ ತನ್ನಲ್ಲಿ ಯೋಚಿಸಿ ಸಿದ್ದಪಡಿಸಿರುವ ವಿಚಾರವನ್ನೂ ಎಲ್ಲರ ಮುಂದೆ ಇಡಬೇಕೆಂಬುದು ಆ ಇರುವೆಯ ಆಸೆ ಯಾಗಿತ್ತು. ಹಾಗೋ ಹೀಗೋ ಯಾವುದೋ ದೊಡ್ಡ ದೊಡ್ಡ ಅಧಿಕಾರಿ ಇರುವೆಗಳನ್ನು ಕಾಡಿ ಬೇಡಿ ಕೆಲವು ನಿಮಿಷಗಳ ಅವಕಾಶವನ್ನು ಗಳಿಸಿಕೊಂಡಿತ್ತು. ತನಗೆ ಸಿಕ್ಕ ಅಲ್ಪ ಸಮಯದಲ್ಲಿ ಕೆಲಸಗಾರ ಇರುವೆ ತನ್ನ ವಿಚಾರವನ್ನ ಸಭೆಯ ಮುಂದೆ ಇಡಲು ಸಿದ್ದವಾಯಿತು.  “ ನೋಡಿ ನಾನು ಸಾಮಾನ್ಯ ಕೆಲಸಗಾರ ಇರುವೆ, ನಿತ್ಯ ಆಹಾರ ಹೊತ್ತೊಯ್ದು ಗೂಡಿನಲ್ಲಿ ಸಂಗ್ರಹ ಮಾಡುವುದಷ್ಟೇ ನನ್ನ ಕೆಲಸ ಆದರೂ ಹೊರ ಜಗತ್ತಿನಲ್ಲಿ ನನಗೆ ತೋಚಿದ ಕೆಲವೊಂದು ವಿಚಾರಗಳನ್ನು ತಮ್ಮ ಮುಂದೆ ಇಡಬೇಕೆಂದು ಇಲ್ಲಿ ಬಂದಿದ್ದೇನೆ. ನಾವು ಇಡೀ ವರ್ಷ ಬರೀ ಕೆಲಸವನ್ನು ಬಿಟ್ಟು ನಾವೇನೂ ಮಾಡುವುದೇ ಇಲ್ಲ. ಅಲ್ಲಿ ಇಲ್ಲಿ ಆಹಾರ ಹುಡುಕುವದು, ಅದನ್ನ ಗೂಡಿಗೆ ಹೊತ್ತೊಯ್ಯುವುದು , ಅದೇ ಆಹಾರವನ್ನ ಸ್ವಲ್ಪ ತಿಂದು ಮಲಗಿ ಮರುದಿನ ಮತ್ತೆ ಪುನಃ ಅದೇ ಕೆಲಸ. ಇದನ್ನ ಬಿಟ್ಟು ನಾವು ಬೇರೇನೂ ಯೋಚಿಸುದುದೇ ಇಲ್ಲ. ಈ ನಿತ್ಯದ ದಿನಚರಿಯಲ್ಲಿ ಸ್ವಲ್ಪವಾದರೂ ಬದಲಾವಣೆ ಬೇಡವೇ?” ಎನ್ನುತ್ತಿದ್ದಂತೆ ಅಲ್ಲಿಯೇ ಪಕ್ಕದಲ್ಲಿದ್ದ ಹಿರಿಯ ಇರುವೆಯೊಂದು “ ಅದೆಲ್ಲಾ ಸರಿ ನಿನ್ನ ಪ್ರಕಾರ ಅದನ್ನಲ್ಲದೆ ನಾವೆಲ್ಲ ಏನು ಮಾಡುಬೇಕು ?” ಎಂದಿತು.  “ ನೋಡಿ ನಾನು ಆಹಾರ ಹುಡುಕಲು ಹೋಗುವಲ್ಲೆಲ್ಲ   ನೀವೂ ನೋಡಿರುವ ಹಾಗೆ ಅಲ್ಲಿರುವ ಬೃಹದಾಕಾರದ ಎರಡು ಕಾಲಿನ ಜೀವಿಗಳನ್ನು ನೀವೆಲ್ಲರೂ ನೋಡಿದ್ದೀರಿ ಅಂದು ಕೊಂಡಿದ್ದೀನಿ. ನನ್ನ ಪ್ರಕಾರ ಅವರ ಜೀವನ ಶೈಲಿಯೂ ನಮ್ಮಂತೆ ಇದೆ. ಅವರೂ ನಮ್ಮ ಹಾಗೆ ವ್ಯವಸ್ಥಿತವಾಗಿ ಮನೆಗಳನ್ನ ಕಟ್ಟುತ್ತಾರೆ. ನಮ್ಮ ಹಾಗೇ ಒಟ್ಟಾಗಿ ಕೆಲಸಗಳನ್ನ ಮಾಡುತ್ತಾರೆ.  ಅಲ್ಲದೇ ಇನ್ನೂ ಹಲವಾರು ವಿಷಯಗಳಲ್ಲಿ ನಮಗೂ ಅವರಿಗೂ ಸಾಮ್ಯತೆ ಇದೆ ಎನ್ನುವುದು ನನ್ನ ಅನಿಸಿಕೆ. ನಾವು ಹೇಗಾದರೂ ಮಾಡಿ ಅವರ ಹೇಗೆ ಜೀವಿಸುತ್ತಾರೆ ಎನ್ನುವುದನ್ನು ಸ್ವಲ್ಪ ಅಧ್ಯಯನ ಮಾಡಿದರೆ ನಾವು ಅವರಿಂದ ಹೊಸತನ್ನು ಏನಾದರೂ ಕಲಿಯ ಬಹುದಲ್ಲವೇ?” ಎಂದು ಆ ಕೆಲಸಗಾರ ಇರುವೆಯು ಹೇಳುತಿದ್ದಂತೆಯೇ ಕೆಲವರು ಆಶ್ಚರ್ಯದಿಂದ “ಅರೇ ಇದೆಲ್ಲಾ ನಿಜವ, ನಾವು ಅಲ್ಲೇ ಆಹಾರ ತರಲು ಹೋದರೂ ಇದನ್ನೆಲ್ಲಾ ನೋಡಿಯೇ ಇಲ್ಲವಲ್ಲ. ಈ ಇರುವೆ ಸುಳ್ಳು ಹೇಳುತ್ತಿರಬೇಕು” ಅಂದರೆ ಇನ್ನು ಕೆಲವರು “ಹೀಗೂ ಉಂಟೆ ?” ಎನ್ನುತ್ತ  ಆ ಇರುವೆಯ ಬುದ್ದಿವಂತಿಕೆಯನ್ನು ಹೊಗಳಿದರು.  ಅಷ್ಟರಲ್ಲೇ ಗೊಂದಲದಲ್ಲಿ ಮುಳುಗಿದ್ದ ಸಭೆಯನ್ನು ಉದ್ದೇಶಿಸಿ ಅಲ್ಲಿರುವ ಹಿರಿಯ ಇರುವೆಗಳು ಏನನ್ನೋ ನಿರ್ಧರಿಸಿದವರಂತೆ “ನಾವು ಹಿರಿಯರು ಸೇರಿ ಒಂದು ನಿರ್ಧಾರಕ್ಕೆ ಬಂದಿದ್ದೇವೆ. ಈ ಇರುವೆಯ ಬುದ್ಧಿಶಕ್ತಿ ಮೆಚ್ಚುವಂತದ್ದೆ. ಇದನ್ನೆಲ್ಲಾ ನಾವು ಇಲ್ಲಿಯವರೆಗೆ ಯೋಚಿಸಿಯೇ ಇರಲಿಲ್ಲ. ಈ ಇರುವೆಯ ಜೊತೆ ಇದರಲ್ಲಿ ಆಸಕ್ತಿಯುಳ್ಳ ಒಂದಿಷ್ಟು ಇರುವೆಗಳು  ಜೊತೆಗೂಡಿ ಇದರ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಬೇಕೆಂದು ನಿರ್ಧರಿಸಲಾಗಿದೆ” ಎನ್ನುತ್ತಿದ್ದಂತೆ ಆ ಕೆಲಸಗಾರ ಇರುವೆಯ ಸಂತೋಷಕ್ಕೆ ಪಾರವೇ ಇರಲಿಲ್ಲ.
ಆ ಕೆಲಸಗಾರ ಇರುವೆಯ ನೇತೃತ್ವದಲ್ಲಿ ಸಣ್ಣ ಸಣ್ಣ ತಂಡಗಳಾಗಿ ವಿಭಾಗ ಮಾಡಿಕೊಂಡು ಇರುವೆಗಳ ಗುಂಪು ದೇವಸ್ಥಾನದ ಸುತ್ತೆಲ್ಲ ಬೀಡು ಬಿಟ್ಟವು. ಇಷ್ಟು ದಿನ ಅಲ್ಲಿ ಬರಿ ಆಹಾರ ಹೊತ್ತೊಯ್ಯುವುದನ್ನ ಬಿಟ್ಟರೆ ಬೇರೇನೂ ಮಾಡಿರದ ಆ ಇರುವೆಗಳಿಗೆ ಅಲ್ಲಿ ಇಷ್ಟೊಂದು ವೈಚಿತ್ರ್ಯಗಳಿದೆಯ ಎಂದು ಆಶ್ಚರ್ಯವಾಯಿತು. ಜೊತೆಗೆ ಬರೀ ಕೆಲಸ ಕೆಲಸ ಎಂದು ಬೇಸತ್ತಿದ್ದ ಅವಕ್ಕೆ ಹೊಸದನ್ನ ನೋಡಿ ತಿಳಿಯಲು ವಿಶೇಷವಾದ ಆಸಕ್ತಿಯೂ ಬೆಳೆದಿತ್ತು.  ಬಹಳ ದಿನಗಳವರೆಗೆ  ಅಲ್ಲಿನ ವೈಚಿತ್ರ್ಯಗಳನ್ನು ಅಧ್ಯಯನ  ಮಾಡುವ ಉದ್ದೇಶ ಹೊಂದಿದ್ದರೂ ಮಳೆಗಾಲ ಜೋರಾಗಿ ಪ್ರಾರಂಭವಾದ್ದರಿಂದ ಇರುವೆಗಳಿಗೆ ಅಲ್ಲಿ ಹೆಚ್ಚಿನ ದಿನ ಇರಲಾಗದೆ ತಮ್ಮ ಗೂಡಿಗೆ ಮರಳ ಬೇಕಾಯಿತು.  ಹೀಗಿದ್ದರೂ ಈಗಾಗಲೇ ಸಂಗ್ರಹಿಸಿರುವ ಮಾಹಿತಿಗಳು ಆ ಬುದ್ದಿವಂತ ಕೆಲಸಗಾರ ಇರುವೆಗೆ ತನ್ನ ವಿಚಾರಗಳನ್ನು ಸಮರ್ಥಿಸಿಕೊಳ್ಳಲು ಮತ್ತಷ್ಟು ಇಂಬು ನೀಡಿತ್ತು. ತಾನು ಅಅಧ್ಯಯನ ಮಾಡಿದ ಮಾಡಿದ ಹೊಸ ಮಾಹಿತಿಗಳೊಂದಿಗೆ ಈ ವಿಷಯದ ಕುರಿತು ಚರ್ಚಿಸಲು ವಿಶೇಷವಾಗಿ ಕರೆದಿದ್ದ ಸಭೆಗೆ ತನ್ನ ತಂಡದೊಂದಿಗೆ  ತೆರಳಿತು.  ಎಲ್ಲಾ ಹಿರಿಯ ಇರುವೆಗಳ ಜೊತೆ ರಾಣಿ ಇರುವೆಯೂ ಇದರಲ್ಲಿ ವಿಶೇಷ ಆಸಕ್ತಿ ತೋರಿಸಿದ್ದರಿಂದ ಸಭೆಗೆ ಮತ್ತಷ್ಟು ಮೆರಗು ಬಂದಿತ್ತು. ಸಭೆಗೆ ಎಲ್ಲರೂ ಆಗಮಿಸುತ್ತಿದ್ದಂತೆಯೇ ಆ ಕೆಲಸಗಾರ ಇರುವೆ ತನ್ನ ಅಧ್ಯಯನದ ವರದಿಯನ್ನು ಒಪ್ಪಿಸಲು ಸಿದ್ದವಾಯಿತು. “ ನಾವು ನಮಗೆ ಸಿಕ್ಕ ಸ್ವಲ್ಪ ಸಮಯದಲ್ಲಿ ಅಲ್ಲಿ ಕಂಡದ್ದೆನೆಂದರೆ ಅಲ್ಲಿರುವ ಆ ಜೀವಿಗಳಿಗೂ ನಮಗೂ ತುಂಬಾ ಸಾಮ್ಯತೆ ಇದೆ. ಅವರು ವಾಸಿಸುವ ಸ್ಥಳವು ನಾವು ನಮ್ಮ ಗೂಡನ್ನು ನಿರ್ಮಿಸಿದಂತೆಯೇ ತೋರುತ್ತದೆ. ಅವರ ಆಕಾರಕ್ಕೆ ತಕ್ಕಂತೆ ಅವು ಬೃಹದಾಕಾರವಾಗಿ ನಿರ್ಮಿಸಲಾಗಿದೆ. ನಾವು ಒಂದೊಂದು ಕೋಣೆಯನ್ನು ಸುತ್ತಿ ಪರೀಕ್ಷಿಸಲು  ದಿನಗಳೇ ಹಿಡಿದವು. ಇನ್ನು ಅವರು ನಮ್ಮಂತೆಯೇ ಒಟ್ಟಾಗಿ ಕೆಲಸಗಳನ್ನ  ಮಾಡುತ್ತಾರೆ.ಎಲ್ಲರೂ ಒಟ್ಟಾಗಿಯೇ ನಮ್ಮ ಹಾಗೇ ಇರುತ್ತಾರೆ. ಅಲ್ಲದೇ ಅವರೂ ನಮ್ಮ ಹಾಗೆಯೇ ಬೇರೆ ಬೇರೆ ವಿಭಾಗಗಳನ್ನು ಮಾಡಿ ಕೆಲಸಗಳನ್ನು ನಮ್ಮ ಹಾಗೆ ಹಂಚಿಕೊಳ್ಳುತ್ತಾರೆ ಅಂತ ಮೇಲ್ನೋಟ ದಿಂದ ಅನಿಸುತ್ತದೆ.” “ಅವರೂ ನಮ್ಮ ಹಾಗೇ ಜೀವಿಸುತ್ತಾರೆ ಅಂದ ಹಾಗಾಯಿತು. ಹಾಗಿದ್ದರೆ ನಮಗೂ ಅವರಿಗೂ ಏನಾದರೂ ಪೂರ್ವ ಜನ್ಮದ ಸಂಬಂಧ ಇದೆಯಾ ?” ಎಂದು ಒಂದು ಹಿರಿಯ ಇರುವೆಯು ನಡುವೆಯೇ ಬಾಯಿ ಹಾಕಿ ಹೇಳಿತು. “ಇವು ಬರಿ ಸಾಮ್ಯತೆಗಳಷ್ಟೇ ನಮ್ಮಲ್ಲೂ ಅವರಲ್ಲೂ ತುಂಬಾ ವ್ಯತ್ಯಾಸವಿದೆ. ಅವರು ನಮಗಿಂತ ತುಂಬ ಮುಂದುವರಿದಿರುವಂತೆ ತೋರುತ್ತದೆ. ಅವರು ಏನೇನೋ ಇನ್ನೂ ನೋಡಿರದ ವಸ್ತುಗಳನ್ನ ಕೆಲಸ ಮಾಡಲಿಕ್ಕೆ ಉಪಯೋಗಿಸುತ್ತಾರೆ. ಅವರು ಯಾವಾಗಲೂ ಬಿಡುವಿನಿಂದ ಹಾಯಾಗಿರುವಂತೆ ತೋರುತ್ತದೆ. ಆಗೊಮ್ಮೆ ಈಗೊಮ್ಮೆ ಮಾತ್ರ ನಮ್ಮ ಹಾಗೆ ಕೆಲಸ ಮಾಡುವುದನ್ನ ನೋಡಿದ್ದೇನೆ ಅದನ್ನ ಬಿಟ್ಟರೆ ಉಳಿದೆಲ್ಲ ಸಮಯ ಅವರು ಮೋಜು ಮಸ್ತಿಯಲ್ಲೇ ಕಾಲ ಕಳೆಯುವಂತೆ ತೋರುತ್ತದೆ. ಇದನ್ನೆಲ್ಲಾ ಸಾಧಿಸಲು ಅವರಲ್ಲಿ ವಿಶೇಷವಾದ ಶಕ್ತಿ ಇರುವಂತೆ ತೋರುತ್ತದೆ. ಇನ್ನೊಂದು ಪ್ರಮುಖವಾಗಿ ತೋಚಿದ್ದೆಂದರೆ ನಾವು ಆಹಾರಕ್ಕಾಗಿ ಹೋಗುವ ಪ್ರದೇಶವು ವಿಶೇಷವಾದ ಸ್ಥಳವೆಂದು ತೋರುತ್ತದೆ. ಅಲ್ಲಿಗೆ ಬರುವವರೆಲ್ಲರೂ ಅಲ್ಲಿರುವ ಕೋಣೆಯಲ್ಲಿನ ವಿಶೇಷ ಆಕಾರದ ಕಲ್ಲಿನ ಮೂರ್ತಿಯಂತದ್ದಕ್ಕೆ ತಮ್ಮ ಪ್ರಾರ್ಥನೆ ಸಲ್ಲಿಸುತ್ತಾರೆ. ಇದರ ಹಿಂದಿನ ಉದ್ದೇಶ ಸ್ಪಷ್ಟವಾಗಿ ತೋಚದಿದ್ದರೂ ಆ ಕಲ್ಲಿನ ಮೂರ್ತಿಗೆ ಏನೋ ವಿಶೇಷವಾದ ಶಕ್ತಿ ಇರುವಂತೆ ತೋರುತ್ತದೆ. ಬಹುಷಃ ಆ ವಿಶೇಷ ಮೂರ್ತಿಯೇ ಅವರಿಗೆ ವಿಶಿಷ್ಟವಾದ ಶಕ್ತಿಯನ್ನ ದಯಪಾಲಿಸಿದೆ ಅಂತ ಮೇಲ್ನೋಟಕ್ಕೆ ಕಾಣಿಸುತ್ತದೆ. ಇನ್ನುಳಿದಂತೆ ಅವರು ಎಲ್ಲದರಲ್ಲೂ ಸಂತುಷ್ಟವಾಗಿ ಇರುವಂತೆ ತೋರುತ್ತದೆ. ಅವರು ತಮ್ಮ ಕೆಲಸದಲ್ಲಿ ಏನೇನು ಹೊಸ ಹೊಸ ವಿಧಾನವನ್ನ ಅಳವಡಿಸಿಕೊಂಡಿದ್ದಾರೆ ಹೇಗೆ ಅವರು ಅಷ್ಟೊಂದು ಬಿಡುವಿನ ಸಮಯವನ್ನ, ಸಂತೋಷವನ್ನ ಯಾವಾಗಲೂ ಹೊಂದಿರುತ್ತಾರೆ ಹೀಗೆ ಇವನ್ನೆಲ್ಲ  ಮತ್ತಷ್ಟು ಅಧ್ಯಯನ ಮಾಡಿದರೆ ನಾವು ಇನ್ನಷ್ಟು ಹೊಸತನ್ನ ಕಲಿಯಬಹುದು ನಾವು ನಮ್ಮ ಅವಿರತ ದುಡಿಮೆಗೆಯ ಬದುಕಿಗೆ ಸ್ವಲ್ಪ ಬದಲಾವಣೆ ತರಬಹುದು ಎನ್ನುವುದು ನಮ್ಮ ಇಷ್ಟು ದಿನಗಳ ಅಧ್ಯಯನದಿಂದ ಅನಿಸುತ್ತದೆ”. ಇಷ್ಟು ಹೇಳಿ ಆ ಕೆಲಸಗಾರ ಇರುವೆಯು ತನ್ನ ಜಾಗದಲ್ಲಿ ಕುಳಿತುಕೊಳ್ಳುತ್ತಿದ್ದಂತೆಯೇ  ಸಭೆಯಲ್ಲಿ ಗೊಂದಲಗಳು ಕಾಣಿಸಿಕೊಂಡಿತು. ಸ್ವಲ್ಪ ಸಮಯದ ನಂತರ ಒಬ್ಬ ಹಿರಿಯ ಇರುವೆಯು ಎದ್ದು ನಿಂತು “ ತಮ್ಮ ಬುದ್ದಿಶಕ್ತಿ ಹಾಗೂ ಸಾಹಸಗಳಿಗೆ ನಾವು ಬಹಳ ಮೆಚ್ಚಿದ್ದೇವೆ. ಆದರೆ ಸಭೆಯಲ್ಲಿ ಈ ಗಾಢವಾದ ವಿಷಯದ ಬಗ್ಗೆ ಸ್ವಲ್ಪ ಗೊಂದಲ ಇರುವುದರಿಂದ ತಮ್ಮ ಈ ವರದಿಯನ್ನ ಅಧ್ಯಯನ ಮಾಡಿ ಸಾಧಕ ಬಾಧಕಗಳನ್ನು ಚರ್ಚಿಸಿ ಮುಂದಿನ ನಿರ್ಧಾರ ಮಾಡಲು ನಿರ್ಧರಿಸಿದ್ದೇವೆ” ಎನ್ನುತ್ತಿದ್ದಂತೆ ಅಲ್ಲಿದ್ದ ಉಳಿದ ಇರುವೆಗಳೂ ಅದು ಸರಿ ಎನ್ನುತ್ತ ತಲೆ ಆಡಿಸಿದವು. 
image source: internet

ಒಂದು ವಾರದ ಗಹನವಾದ ಚರ್ಚೆಯ ನಂತರ ಹಿರಿಯ ಇರುವೆಗಳ ಗುಂಪು ತಮ್ಮ ನಿರ್ಧಾರ ಪ್ರಕಟಿಸಲು ಮತ್ತೊಮ್ಮೆ ಸಭೆಯನ್ನು ಕರೆಯಲಾಯಿತು. ಒಂದು ಹಿರಿಯ ಇರುವೆ ಎದ್ದು ನಿಂತು “ ಬಹಳ ಅಧ್ಯಯನ, ಚರ್ಚೆಯ ನಂತರ ನಾವು ಈ ವರದಿಯ ಕೆಲವು ಮುಖ್ಯ ಅಂಶಗಳನ್ನು ಕಾರ್ಯರೂಪಕ್ಕೆ ತರಲು ನಿರ್ಧರಿಸಿದ್ದೇವೆ. ಇನ್ನು ಈ ವರದಿಯಲ್ಲಿ ಹೇಳಿದಂತೆ ನಮ್ಮ ಬಿಡುವಿಲ್ಲದ ಕೆಲಸವನ್ನ ಕಡಿಮೆ ಮಾಡಿ ಬಿಡುವಿನ ಸಮಯ ಹೆಚ್ಚುಮಾಡಲು ಏನಾದರೂ ಮಾಡಬೇಕು, ಅದಕ್ಕಾಗಿ ವಿಶೇಷ ವಸ್ತುಗಳನ್ನು ಕೆಲಸಕ್ಕೆ ಸಹಕರಿಸಲು ಬಳಸಬೇಕು  ಎನ್ನುವ ವಿಚಾರ ನಮಗೆ ಸರಿ ಹೋಗುವಂತೆ ತೋರುತ್ತಿಲ್ಲ. ಅವು ನಮ್ಮಲ್ಲಿ ಆಲಸ್ಯವನ್ನು ಹೆಚ್ಚು ಮಾಡಿ ಇಡೀ ಜೀವನವನ್ನ ಮೋಜಿನಲ್ಲಿ ಕಳೆದು ನಮ್ಮ ಇರುವೆ ಕುಲಕ್ಕೆ ಅದು ಬಾಧಕ ವಾಗುವ ಸಾಧ್ಯತೆ ಇರುವುದರಿಂದ ಆ ವಿಚಾರವನ್ನ ಹಾಗೂ ಅದರ ಬಗ್ಗೆ ಹೆಚ್ಚಿನ ಅಧ್ಯನಯನ ಮಾಡುವುಡು ಬೇಡ ಎನ್ನುವುದು ನಮ್ಮೆಲ್ಲರ ಸರ್ವಾನುಮತದ ಅಭಿಪ್ರಾಯ. ಇನ್ನು ಮುಖ್ಯವಾದ ಅಂಶವೆಂದರೆ ಅಲ್ಲಿನ ಜೀವಿಗಳು ಪ್ರಾರ್ಥಿಸುವ ವಿಶೇಷ ಶಕ್ತಿಯ ಮೂರ್ತಿಗಳು. ಈ ವಿಚಾರ ನಮ್ಮಲ್ಲಿ ಬಹಳ ಚರ್ಚೆಗೆ ಒಳಪಟ್ಟಿತು. ನಾವು ಇಷ್ಟುದಿನ ಇದನ್ನ ಯೋಚಿಸಿಯೇ ಇರಲಿಲ್ಲ. ನಮಗೆಲ್ಲ ಜನ್ಮ ನೀಡಿ ವಿಶೇಷ ಶಕ್ತಿ ಹೊಂದಿರುವ ನಮ್ಮ ರಾಣಿ ಇರುವೆಯನ್ನ ಪೂಜಿಸಲು ವಿಶೇಷವಾದ ಸ್ಥಳದ ನಿರ್ಮಾಣ ಮಾಡಬೇಕು ಹಾಗೂ ರಾಣಿಯ ಮೂರ್ತಿಯನ್ನು ಅಲ್ಲಿ ನಿರ್ಮಿಸಿ ಅದನ್ನ ಅಲ್ಲಿ ನಿತ್ಯವೂ ಮತ್ತಷ್ಟು ಕೆಲಸ ಮಾಡಲು ಶಕ್ತಿ ಕೊಡುವಂತೆ ಎಲ್ಲರೂ ಪ್ರಾರ್ಥಿಸಬೇಕು. ಅಲ್ಲದೇ ಇಂತಹ ಅಪೂರ್ವ ಬುದ್ದಿವಂತಿಕೆ  ಪ್ರದರ್ಶಿಸಿದ ಈ ಕೆಲಸಗಾರ ಇರುವೆಗೆ ವಿಶೇಷ ಬಹುಮಾನದ ಜೊತೆಗೆ  ರಾಣಿಯನ್ನು  ಪೂಜಿಸಲು ನಿರ್ಮಾಣ ಈ ಮಾಡುವ ವಿಶೇಷ ಸ್ಥಳದ ಉಸ್ತುವಾರಿಯ ಭಾಗ್ಯವನ್ನೂ ವಹಿಸಿಕೊಳ್ಳಬೇಕು ಎನ್ನುವುದು ನಮ್ಮ ನಿರ್ಧಾರ” ಎಂದು ಹೇಳುತ್ತಿದ್ದಂತೆಯೇ ಸಭೆಯಲ್ಲಿ ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿ ಆ ಕೆಲಸಗಾರ ಇರುವೆಯ ಬುದ್ಧಿವಂತಿಕೆಯನ್ನ ಹಾಗೂ ಹಿರಿಯ ಇರುವೆಗಳ ಅನುಭವದ ನಿರ್ಧಾರವನ್ನ ಮೆಚ್ಚಿದರು. ಇದರ ಜೊತೆಗೆ ರಾಣಿಯ ಪೂಜಾ ಸ್ಥಳ ಕಟ್ಟಲು ನೂರಾರು ಇರುವೆಗಳು ತಾ ಮುಂದು ತಾ ಮುಂದು ಎಂದು ನನ್ನನ್ನೂ ಈ ಕೆಲಸಕ್ಕೆ ಸೇರಿಸಿಕೋ ಎನ್ನುತ್ತ ಆ ಬುದ್ಧಿವಂತ ಕೆಲಸಗಾರ ಇರುವೆಯನ್ನ ಓಲೈಸಲು ಸಾಲಾಗಿ ನಿಂತವು.