ಭಾನುವಾರ, ನವೆಂಬರ್ 24, 2013

ಮೌನ ಯೋಧ

ಮಲೆನಾಡ ತಪ್ಪಲಿನ ಆ ಊರಿಗೆ ಒಬ್ಬ ಅಪರಿಚಿತ ವೃದ್ದ ಮನುಷ್ಯನ ಆಗಮನವಾಯಿತು. ಆ ಊರಿಗೆ ಯಾವರೀತಿಯಲ್ಲೂ  ಸಂಬಂಧಪಡದ ಆತ ಯಾರೆಂಬುದು ಊರಿನ ಯಾರಿಗೂ ಗೊತ್ತಿಲ್ಲ .ಇದ್ದಕ್ಕಿದ್ದ ಹಾಗೇ ಪ್ರತ್ಯಕ್ಷವಾದ ಈ ಮನುಷ್ಯ ಆ ಊರನ್ನ ಬಿಟ್ಟು ಬೇರೆಲ್ಲೋ ವಾಸವಾಗಿದ್ದವನ ಅಳಿದುಳಿದ ಹಾಳು ಬಿದ್ದ ಅಡಿಕೆ ತೋಟವನ್ನ ಖರೀದಿಸಿ ಅಲ್ಲಿಗೆ ಬಂದಿದ್ದನೆಂಬುದು ಹೇಗೋ ಊರಿನವರಿಗೆ ಗೊತ್ತಾಯಿತು.  ಅದನ್ನ ಬಿಟ್ಟರೆ ಬೇರೇನೂ ಆ ವೃದ್ಧ ಅಪರಿಚಿತನ ಬಗ್ಗೆ ಊರವರಿಗೆ ಗೊತ್ತಿಲ್ಲ . ವಿಚಿತ್ರವೆಂದರೆ ಆತನು ಯಾರೊಂದಿಗೂ ಮಾತನಾಡಿದ್ದನ್ನು ಯಾರೂ ಇದುವರೆಗೆ ನೋಡಿಲ್ಲ. ಅಲ್ಲದೇ ಊರಿನ ಯಾರೊಂದಿಗೂ ಆತ ವ್ಯವಹರಿಸಿದ್ದೂ ಸಹ ಇಲ್ಲ. ಈ ವಿಚಿತ್ರ ಮನುಷ್ಯನು ಯಾರೆಂಬುದನ್ನು ತಿಳಿಯಬೇಕೆಂಬ ತಮ್ಮ ತುಮುಲವನ್ನು ತಡೆಹಿಡಿಯಲಾರದ ಕೆಲವರು, ಊರಿನ ಹೊರಗೆ ಅವನಿದ್ದ ಆ ಹಾಳು ತೋಟದ ಕಡೆಗೆ ಏನೋ ಕೆಲಸವಿದೆ ಎನ್ನುತ್ತ ನಟಿಸುತ್ತ ಅವನನ್ನು ಸಂಧಿಸಿದರೂ ಅವರಿಗೆ ಸಿಕ್ಕಿದ್ದು  ಆ ವೃದ್ಧನ ಮೌನ ಮತ್ತು ಮುಗುಳ್ನಗು ಮಾತ್ರ. ಅವರು ಎಷ್ಟು ಮಾತನಾಡಿಸಲು ಪ್ರಯತ್ನಿಸಿದರೂ ಆತನ ಮೌನವೇ ಅವರಿಗೆ ಉತ್ತರವಾಗಿ ಸಿಗುತ್ತಿತ್ತು. ಕೆಲವೊಮ್ಮೆ “ನನಗೆ ನಿಮ್ಮ ಜೊತೆ ಮಾತನಾಡಲು ಇಷ್ಟವಿಲ್ಲ” ಎನ್ನುವ ಭಾವದ ಮುಗುಳ್ನಗೆ ಅವರಿಗೆ ಎದುರಾಗುತ್ತಿತ್ತು. ಹೀಗೆ ಆ ವೃದ್ಧ ಮೌನಿಯ ಬಗ್ಗೆ ಏನು ಎತ್ತ ಎಂದು ತಿಳಿಯಲು ಪ್ರಯತ್ನಿಸಿದಷ್ಟು ಮತ್ತಷ್ಟು ವಿಚಿತ್ರಗಳು ಅವರನ್ನು ಎದುರಾಗುತ್ತಿತ್ತು. ಆತನ ಈ ವಿಚಿತ್ರ ನಡೆಯನ್ನು ನೋಡಿ “ಸಾಕಪ್ಪ ಈ ಹುಚ್ಚನ ಸಹವಾಸ” ಎನ್ನುತ್ತ ಆತನನ್ನು ನಿರ್ಲಕ್ಷಿಸ ತೊಡಗಿದರು. ಅಲ್ಲದೇ ಊರಿನ ಕೆಲವರು ಈಗಾಗಲೇ ಆ ಹಾಳು ತೋಟವನ್ನು ಹೇಗಾದರೂ ಕಬಳಿಸಬೇಕೆನ್ನುವ ಹುನ್ನಾರ ನಡೆಸುತ್ತಿದ್ದವರಿಗೂ ಹೊಸದಾಗಿ ಈತ ಬಂದು ಸೇರಿದ್ದರಿಂದ ತಲೆಕೆಡಿಸಿಕೊಂಡು ಆತನನ್ನು ಅಲ್ಲಿಂದ ಹೇಗಾದರೂ ಹೆದರಿಸಿ ಓಡಿಸಲು ತಂತ್ರ ರೂಪಿಸಬೇಕೆಂದು ಯೋಚಿಸತೊಡಗಿದರು.
ಆತ ಹುಚ್ಚನೆಂದು ತಿಳಿದಿದ್ದ ಊರವರಿಗೆ ಆದ ಆಶ್ಚರ್ಯವೆಂದರೆ ಆತ ಬಂದ ಕೆಲವೇ ತಿಂಗಳುಗಳಲ್ಲಿ ಹಾಳು ಬಿದ್ದ ಆ ಅಡಿಕೆ ತೋಟ ಊಹಿಸಲು ಆಗದ ರೀತಿಯಲ್ಲಿ ಸುಧಾರಿಸಿತ್ತು. ಅರೆಜೀವವಾಗಿದ್ದ ಮರಗಳಲ್ಲಿ ಹೊಸ ಕಳೆ ಬಂದಿತ್ತು. ಅದ್ಯಾವುದೋ ಜಾತಿಯ ಹೊಸ ಬಗೆಯ ಸಸ್ಯಗಳೆಲ್ಲ ಆ ತೋಟದಲ್ಲಿ ಪ್ರತ್ಯಕ್ಷವಾಗಿತ್ತು. ಆ ಮುದುಕನ ಕೈಲಿ ಈ ರೀತಿ ಕೆಲಸ ಮಾಡಿ ತೋಟವನ್ನು ಸುಧಾರಿಸಲು ಹೇಗೆ ಸಾಧ್ಯ ಎಂದೆಲ್ಲಾ ಊರವರು ತಲೆ ಕೆಡಿಸಿಕೊಂಡು ಸುಮ್ಮನೆ ಕೂರಲಾಗದೆ ಎಲ್ಲಿಂದ ಕೆಲಸಗಾರರು ಬರುತ್ತಾರೆ ಹೇಗೆ ಅವನು ಕೆಲಸ ಮಾಡಿಸುತ್ತಾನೆ ಅಂದೆಲ್ಲ ತಿಳಿಯಲು ಪ್ರಯತ್ನಿಸತೊಡಗಿದರು. “ನಮ್ಮೂರಿನ ಕೆಲವರು ಅಲ್ಲಿಗೆ ಕೆಲಸಕ್ಕೆ ಹೋಗಿದ್ದರೆಂದೂ, ಆತನು ಏನೇನೋ ಮೆಷಿನು, ಗಿಡ, ಔಷಧಿ ತರಿಸಿದ್ದಾನೆಂದೂ, ದಿನ ಪೂರ್ತಿ ತೋಟದಲ್ಲೇ ಏನೇನೋ ಮಾಡುತ್ತಿರುತ್ತಾನೆ” ಅಂತ ತಿಳಿದುಕೊಂಡರು. ಆದರೆ ಆತ ಯಾರೊಂದಿಗೂ ಜಾಸ್ತಿ ಮಾತನಡುವುದಿಲ್ಲವೆಂದೂ , ಆಗೊಮ್ಮೆ ಈಗೊಮ್ಮೆ ಏನೇನು ಕೆಲಸ ಮಾಡಬೇಕೆಂದು ಹೇಳಿ ತನ್ನದೇ ಆದ ಮುಳುಗಿರುತ್ತಾನೆ” ಅಂತೆಲ್ಲ ಆತನ ಬಗ್ಗೆ ಸಂಶೋಧಿಸಿ ಇಡೀ ಊರಿಗೆ ಸುದ್ದಿಯನ್ನ ಬಿತ್ತರಿಸ ತೊಡಗಿದರು.
      ಅದೇ ಊರಿನ ಬೀರ ಆ ವಿಚಿತ್ರ ಮನುಷ್ಯನ ತೋಟದಲ್ಲಿ ಹಾಗೂ ಮನೆಗೆಲಸಕ್ಕೆ ಖಾಯಂ ಕೆಲಸಗಾರನಾಗಿದ್ದ . ಈ ವಿಚಿತ್ರ ವೃದ್ಧ ಮೌನಿಯ ದೆಸೆಯಲ್ಲಿ ಆತ ಇಡೀ ಊರಿಗೆ ಬೇಕಾದವನಾಗಿದ್ದ . ಎಲ್ಲರಿಗೂ ಆ ವೃಧ್ಧ ಮೌನಿ ಏನೇನು ಮಾಡುತ್ತಾನೆ ಎಂಬುದನ್ನ ಬೀರನಿಂದ ತಿಳಿಯಬೇಕೆನ್ನುವ ಮನುಷ್ಯ ಸಹಜ  ಕುತೂಹಲ. “ನಂಗೂ ಏನು ಜಾಸ್ತಿ ಅರ್ಥ ಆಗುದಿಲ್ಲ. ಅವಾಗ ಇವಾಗ ಏನಾದ್ರೂ ಹೇಳುವುದಿದ್ರೆ ಮಾತಾಡಿದ್ರು ಇಲ್ಲ ಅಂದ್ರೆ ಅವರಷ್ಟಕ್ಕೆ ಎಂತದೋ ಮಾಡ್ತಾ ಇರುತ್ತಾರೆ. ಯಾವ್ಯಾವುದೋ ಪುಸ್ತಕ ಎಲ್ಲಾ ಓದುತ್ತ ಇರುತ್ತ್ರು. ಕೆಲವೊಮ್ಮೆ ತಪಸ್ಸಿಗೆ ಅಂತೆಲ್ಲ ಕುಳ್ತ್ಕೊಳುದು ಉಂಟು” ಅಂತೆಲ್ಲ ತನಗೆ ತಿಳಿದಷ್ಟು ಊರವರಿಗೆ ಹೇಳುತ್ತಿದ್ದ. ಬೀರನಿಗೂ ಇದೆಲ್ಲಾ ನೋಡಿ ಆ ಮುದುಕ ಎಂಥದೋ ಭಯಂಕರ ವಿಚಿತ್ರ ಜೀವಿ ಎಂಬ ಭಾವನೆ ಹುಟ್ಟಿ ಆತನಲ್ಲಿ ಭಯ ಭಕ್ತಿ  ನೆಲೆಗೊಂಡಿತ್ತು.  ಹೀಗೆ ದಿನಕಳೆದಂತೆ ಈ ಮುದುಕನ ಬಗ್ಗೆ ಬಗೆ ಬಗೆಯ ಸುದ್ದಿಗಳು ಹರಡತೊಡಗಿತ್ತು. ಆ ವೃದ್ಧ ಮೌನಿಯ ತೋಟದ ಕೆಲಸಕ್ಕೊ ಅಥವಾ ಇನ್ಯಾವುದೋ ಉದ್ದೇಶವಿದ್ದಂತೆ ಹೋದವರು ಅಲ್ಲಿ ನೋಡಿದ್ದನ್ನು ಬಗೆ ಬಗೆಯಾಗಿ ಚಿತ್ರಿಸುತ್ತಿದ್ದರು. ಹೀಗೆ ಆ ವೃದ್ಧ ಮೌನಿ ಮೌನವಾದಷ್ಟೂ ಜನರಲ್ಲಿ ಆತನ ಬಗ್ಗೆ ಕುತೂಹಲ ಇಮ್ಮಡಿಸಿದವು.
ಹೀಗಿರುವಾಗ ಆ ವಿಚಿತ್ರ ಮನುಷ್ಯ ಅದೇನೋ ಔಷಧಿ ತಯಾರಿಸಿದ್ದಾನೆಂದೂ ಅದನ್ನ ತೋಟಕ್ಕೆ ಹಾಕಿದರೆ ಅಡಿಕೆಗೆ ಕೊಳೆ ರೋಗ ಬರುವುದಿಲ್ಲವೆಂದೂ ಬೀರ ಊರಿನಲ್ಲಿ ಸುದ್ದಿ ಹಬ್ಬಿಸಿದ. ಅದೇ ಪ್ರಕಾರ ಆ ವೃದ್ಧ ಮೌನಿಯ ತೋಟದಲ್ಲಿ  ವರ್ಷದ ಭಾರೀ ಮಳೆಗೆ ಕೊಳೆ ರೋಗ ಅಂಟಿರಲಿಲ್ಲ. ಆದರೆ ಊರಿನ ಬಹುತೇಕ ತೋಟಕ್ಕೆ ರೋಗವು ತಗುಲಿ ಅಡಿಕೆಯೆಲ್ಲ ನಾಶವಾಗಿತ್ತು. ಇವೆಲ್ಲಾ ನೋಡಿ ಊರಿನವರಿಗೆ ಬೀರನ ಮಾತು ನಿಜವೆನಿಸಿ ಆ ಮೌನಿಯ ಹತ್ತಿರ ಹೇಗಾದರೂ ಆ ಔಷಧಿಯನ್ನು ಹೇಗಾದರೂ ಪಡೆಯಬೇಕೆಂದು ಯೋಚಿಸಿದರು. ಅಲ್ಲದೇ ಬೀರನು ಆ ವೃಧ್ಧ ಮೌನಿ ಮತ್ತೂ ಏನೇನೋ ಕಂಡು  ಹಿಡಿದಿದ್ದಾನೆಂದೂ , ಆ ತೋಟದಲ್ಲಿ ಈಗ ಒಂದಕ್ಕೆ ಎರಡರಷ್ಟು ಬೆಳೆ ಬರುತ್ತದೆ ಎಂದೂ, ನೀರು ಬರುವುದಿಲ್ಲ ಎಂದು ಹಾಗೇ ಬಿಟ್ಟಿದ್ದ ಜಾಗದಲ್ಲೆಲ್ಲೋ ಅವರು ತೋರಿಸಿದಲ್ಲೇ ಬಾವಿ ತೋಡಿದಾಗ ಅಲ್ಲಿ ಭಾರೀ ನೀರು ಬಂತೆಂದೂ, ಅವರ ಹತ್ತಿರ ಭಾರೀ ರಹಸ್ಯದ ಪುಸ್ತಕಗಳೆಲ್ಲ ಇದೆಯೆಂದೂ, ಆತ ಮಹಾಜ್ಞಾನಿ,  ತಪಸ್ವಿ , ದೇವೆರನ್ನು ಒಲಿಸಿಕೊಂಡವರು  ಎಂದೆಲ್ಲಾ ಬಣ್ಣಿಸಿ ಊರಿನಲ್ಲೆಲ್ಲ ಸುದ್ಧಿ ಹಬ್ಬಿಸಿದ.
ಹೀಗೆ ದಿನ ಕಳೆದಂತೆ ಆ ಮೌನಿಯ ಯಶೋಗಾಥೆ ಆ ಊರಿನಲ್ಲಲ್ಲದೇ ಅಕ್ಕ ಪಕ್ಕದ ಊರುಗಳಲ್ಲೂ ಹಬ್ಬ ತೊಡಗಿತ್ತು. ಆತ ಊರಿಗೆ ಬಂದು ಆಗಲೇ ಒಂದು ವರ್ಷ ಕಳೆದಿದ್ದರೂ, ಅಲ್ಲಿಗೆ ಕೆಲಸಕ್ಕೆಂದು ಹೋಗುವ ಬೀರ ಮತ್ತಿತರನ್ನು ಬಿಟ್ಟರೆ ಆ ವೃದ್ಧ ಮೌನಿಯನ್ನು ಭೇಟಿ ಮಾಡಿದವರೇ ಇರಲಿಲ್ಲ. ಹೀಗೆ ಬೀರ ಹೇಳುತ್ತಿದ್ದ ಯಶೋಗಾಥೆಗಳಿಂದಲೇ ಆ ಮೌನಿಯ ಬಗ್ಗೆ ಇರುವ ಕುತೂಹಲದ ಜೊತೆಗೆ ಆತ ದೈವ ಸ್ವರೂಪಿಯೆಂದೂ ಹಾಗಾಗಿ ಸಾಮಾನ್ಯ ಮನುಷ್ಯರ ಜೊತೆ ಬೆರೆಯಲು ಆತ ಇಚ್ಚಿಸುವುದಿಲ್ಲ ಅಂತೆಲ್ಲ ಊರಿನಲ್ಲಿ ಜನ ಜನಿತವಾಗತೊಡಗಿತು. ಹಾಗಾಗಿ ದಿನ ಕಳೆದಂತೆ ಆ ಮೌನಿಯ ವಾಸಸ್ಥಾನ ಈಗ ಯಾವುದೋ ದೇವಮಾನವನ ಆವಾಸವೆಂಬಂತೆ ಜನ ಭಯ ಭಕ್ತಿಯಿಂದ ನಡೆದುಕೊಳ್ಳತೊಡಗಿದ್ದರು . ಆತನನ್ನು ಓಡಿಸಬೇಕೆಂದುಕೊಂಡಿದ್ದ ಊರಿನ ಕೆಲವು ವಿರೋಧಿಗಳೂ ಸಹ  ಬೀರ ಊರವರಿಗೆಲ್ಲ ಹೇಳುತ್ತಿದ್ದ ಆ ವೃದ್ಧ ಮೌನಿಯ ದೈವತಾ ಗುಣಗಳಿಂದಲೂ ಹಾಗೂ ಆತನ ಯಾರೂ ನೋಡಿರದ ರಹಸ್ಯವಾದ ನಡೆಗಳಿಂದಲೂ  ಗೊಂದಲಕ್ಕೊಳಗಾಗಿ  ತಾವು ಆಗಲೇ ರೂಪಿಸಿದ್ದ ಕೆಲವು ಷಡ್ಯಂತ್ರಗಳಿಂದ ಹಿಂದೆ ಸರಿಯತೊಡಗಿದರು.
     ಹೀಗೆ ಕೆಲವು ವರ್ಷಗಳಲ್ಲಿ  ಆ ಮೌನಿಯ ಎಲ್ಲಾ ವ್ಯವಹಾರ , ತೋಟದ ಹಾಗೂ ಮನೆಯ ಕೆಲಸ ಎಲ್ಲಾ ನೋಡಿಕೊಳ್ಳುತ್ತಿದ್ದ ಬೀರನ ದೆಸೆಯಿಂದಲೋ ಏನೋ ಆ ಮೌನಿ ಇದುವರೆಗೆ ಒಂದೇ ಒಂದು ಮಾತನ್ನು ಊರಿನಲ್ಲಿ ಆಡದಿದ್ದರೂ, ಆತನ ಜನಪ್ರಿಯತೆ ಸಾಕಷ್ಟು ಹರಡಿತ್ತು. ಬೀರನೂ ಆ ವೃದ್ಧ ಮೌನಿಯು ದೈವ ಸ್ವರೂಪಿಯೆಂದೆ ತಿಳಿದು ಭಯ ಭಕ್ತಿ ನಿಷ್ಟೆಯಿಂದ ನಡೆದು ಕೊಳ್ಳುತ್ತಿದ್ದ. ಇಂತವರಿಗೆ ಮೋಸ ಮಾಡಿದರೆ ಆ ದೇವೆರು ಸುಮ್ಮನೆ ಬಿಡುವುದಿಲ್ಲವೆಂಬ ಭಯವೂ ಆತನಲ್ಲಿ ನೆಲೆಸಿತ್ತು. ಹೀಗೆ ಆ ಮೌನಿಯ ಮೌನ ಆಚರಣೆ ಮುಂದುವರಿದಂತೆಲ್ಲ ಆತನ ಕೀರ್ತಿಯೂ ಹೆಚ್ಚುತ್ತಾ ಆತ ಒಬ್ಬ ದೇವಾಂಶ ಸಂಭೂತನಾಗುತ್ತ ಹೋದ. ಎಲ್ಲರಲ್ಲೂ  ಆತ ದಿನವಿಡೀ ಏನು ಮಾಡುತ್ತಾನೆ,  ಅವನಿಗೆ ಯಾವ  ರಹಸ್ಯವಿದ್ಯೆಗಳೆಲ್ಲ ತಿಳಿದಿದೆ ಎನ್ನುವ ಕುತೂಹಲ. ಒಮ್ಮೆ ಅವನನ್ನು ದೂರದಿಂದಾರೂ ನೋಡಿ ಹೇಗಾದರೂ ಮಾಡಿ ಆತನ ಸ್ನೇಹ ಸಂಪಾದಿಸಬೇಕೆನ್ನುವ ತವಕ. ಆತನ ಕಾಲಿಗೆರಗಿ ಒಮ್ಮೆ ನಮಸ್ಕರಿಸಿ ಆತನ ಆಶೀರ್ವಾದ ಪಡೆಯ ಬೇಕೆನ್ನುವ ಅಭಿಲಾಷೆ.  ಆದರೆ ಆ ಮೌನಿಯನ್ನು ಊರವರು ಸಂಧಿಸಲು ಯತ್ನಿಸಿದಷ್ಟು ಆತ ಅವರಿಂದ ದೂರ ಸರಿಯುತ್ತಿದ್ದ. ಊರವರೂ ಸಹ ಆತ ಏನಾದರೂ ಸಿಟ್ಟಿನಲ್ಲಿ ತಮಗೆ ತನ್ನ ರಹಸ್ಯ ವಿದ್ಯೆಗಳಿಂದ  ಹೆಚ್ಚು ಕಡಿಮೆ ಮಾಡಿದರೆ ಎಂದು ಹೆದರಿ ಆತನನ್ನು ದೂರದಿಂದಲೇ ನೋಡಿ ವಾಪಸ್ಸಾಗುತ್ತಿದ್ದರು. ಅಲ್ಲದೇ ಊರಲ್ಲಿ ಆಗೊಮ್ಮೆ ಈಗೊಮ್ಮೆ ಆ ವೃದ್ಧ ಮೌನಿಯ ಮಹಿಮೆಯ ಬಗ್ಗೆ ಹಬ್ಬುತ್ತಿದ್ದ ಸುದ್ದಿಗಳನ್ನು ಕೇಳಿ ಕೃತಾರ್ಥರಾಗುತ್ತಿದ್ದರು.
    ಹೀಗೆ ಕಾಲ ಸರಿಯುತ್ತ ಒಂದೆರಡು ವರ್ಷಗಳ ನಂತರ ಬೀರ ಒಂದು ದಿನ ಇದ್ದಕ್ಕಿದ್ದ ಹಾಗೇ ಭಯಭೀತ ನಾಗಿ ಎದುರುಸಿರು ಬಿಡುತ್ತ ಊರಿಗೆ ಬಂದು ಜನರನ್ನೆಲ್ಲ ಸೇರಿಸಿ ಆ ವೃದ್ಧ ಮೌನಿಯ ಮನೆಗೆ ಕರೆದುಕೊಂಡು ಹೋಗಲು ಬಂದ. ಯಾತಕ್ಕೆ ಅವರನ್ನು ಅಲ್ಲಿಗೆ ಕರೆದುಕೊಂಡು ಹೋಗುತ್ತಿದ್ದನೆಂದು ಹೇಳಲೂ ಆಗದಷ್ಟು ಭಯ ಅವನನ್ನು ಆವರಿಸಿತ್ತು. ಊರವರು ಏನೋ ದೊಡ್ಡ ಅನಾಹುತ ನಡೆದಿದೆ ಎಂದು ಭಾವಿಸಿ ಹೇಗೋ ಧೈರ್ಯ ಮಾಡಿ ಆ ಮೌನಿ ಇರುವ ತೋಟದಲ್ಲಿನ ಮನೆಗೆ ಬಂದರು. ಅಲ್ಲಿ ನೋಡಿದರೆ ಆ ವೃದ್ಧ ಮೌನಿ, ಮನೆಯ ಮುಂದೆ ಖುರ್ಚಿಯಲ್ಲಿ ಅಲುಗಾಡದೆ ಕುಳಿತಿದ್ದ. ಅದೇನನ್ನೋ ಆಳವಾಗಿ ಯೋಚಿಸುತ್ತಿದ್ದ ಭಾವ ಅವನ ಮುಖದಲ್ಲಿ ನೆಲೆಗೊಂಡಿತ್ತು. “ನಿನ್ನೆ ಸಂಜೆಯಿಂದಲೇ ಹೀಗೆ ಕುಂತ್ಕಂಡಿದ್ದಾರೆ ಸಾಮಿ , ನಾನು ಬೆಳಿಗ್ಗೆ ಬಂದು ನೋಡಿದರು ಹಂಗೆ ಆವ್ರೇ, ಮುಟ್ಟಿ ಮಾತಾಡಿಸಿದ್ರೂ  ಅಲುಗಾದ್ಲೆ ಇಲ್ಲ , ಅದಕ್ಕೆ ಎಂತ ಆಯ್ತೇನ ಹೇಳಿ ಹೆದರಿಕೆ ಆಗಿ ಏನು ಮಾಡಬೇಕು ಗೊತ್ತಾಗದೆ ಊರಿಗೆ ಬಂದೆ ಸಾಮಿ” ಎನ್ನುತ್ತ ಬೀರ ಊರವರಲ್ಲಿ ಭಿನ್ನವಿಸಿದ.  ಊರವರಿಗೂ ಏನು ಮಾಡಬೇಕೆಂದು ತೋಚದೇ , ಕೊನೆಗೂ ಧೈರ್ಯ  ಮಾಡಿ ಪರೀಕ್ಷಿಸಿದಾಗ ಅವರಿಗೆ ಅರಿವಾದದ್ದು ಆ ವೃದ್ಧ ಮೌನಿಯ ಪ್ರಾಣ ಹೋಗಿ ಮೌನದಲ್ಲಿ ಸೇರಿದೆ ಎನ್ನುವುದು.
    ಸರಿ ಇನ್ನೇನು ಮಾಡುವುದು, ದಿಕ್ಕು ದೆಸೆಯಿಲ್ಲದ ಈ ಮುದುಕನ  ಅಂತ್ಯ ಸಂಸ್ಕಾರಕ್ಕೆ ಏನೇನು ಬೇಕೊ ಮಾಡುವುದು ಎಂದು ನಿರ್ಧರಿಸಿ ಅವನನ್ನು ಅಲ್ಲಿಂದ ಎತ್ತಲು ಪ್ರಯತ್ನಿಸಿದಾಗ ಆ ಮುದುಕ ಏನನ್ನೋ ಅರ್ಧಂಬರ್ಧ ಗೀಚಿದ ಹಾಳೆಯನ್ನು ಕೈಯಲ್ಲಿ ಹಿಡಿದು ಕೊಂಡಿದ್ದ.  ಊರವರು ಅಸ್ಪಷ್ಟವಾಗಿ ಗೀಚಿದ್ದ ಆ ಹಾಳೆಯನ್ನು ಓದಲು ಪ್ರಯತ್ನಿಸಿದರು. ಅಲ್ಲಿ ಅಸ್ಪಷ್ಟವಾಗಿ ಬರೆದಿದ್ದ ಕೆಲವು ಸಾಲುಗಳು ಕಂಡವು.

“ಯಾವುದೇ ಯುದ್ದವನ್ನು ಮೌನದಿಂದ ಗೆಲ್ಲಲು ಸಾಧ್ಯವೇ ?”

“ಅಂತಹ ನಿಪುಣ ಮೌನ ಯೋಧ ನಿಜವಾಗಲೂ ಇರಲು ಸಾಧ್ಯವೇ ?”

“ಆ ಮೌನ ಯೋಧ ಯುಧ್ದದ  ಅವ್ಯಕ್ತ ಅರ್ಥ ತಿಳಿದಿರುವವ, ಮೌನ ಹಾಗೂ ಶಾಂತವಾಗಿರುವಂತೆ ತೋರುವ ಈತ  ಯುಧ್ಧ ಆರಂಭವಾಗುವ ಮೊದಲೇ ಅದನ್ನ ನಿರೀಕ್ಷಿಸಿ ಸಮಯ ಸಾಧಿಸಿ  ಎದುರಿಸುವವ.  ಆತ ಇಡಿ ಯುದ್ಧವನ್ನು ತನ್ನ ಮನಸ್ಸಿನ ಆಳದಲ್ಲೆಲ್ಲೋ ಒಬ್ಬಂಟಿಯಾಗಿ ಎದುರಿಸಿ ಗೆಲ್ಲುವವ. ಯಾರಿಗೂ ಆತ ಯುದ್ಧವನ್ನು ಗೆದ್ದಿದ್ದಾನೆಂಬುದರ ಅರಿವೇ ಇರುವುದಿಲ್ಲ ಯಾಕೆಂದರೆ ಅವರಿಗೆ ಅಂತಹ ಯುಧ್ದ ನಡೆದಿದ್ದುದು ಗೊತ್ತೇ ಇಲ್ಲ . ಈ ಮೌನ ಯೋಧನ ಯುದ್ಧಕ್ಕೆ ಯಾವುದೇ ದ್ವೇಷದ ಹಂಗಿಲ್ಲ . ಅವನು ಯಾವಾಗಲೂ ಆತನ ಯಶಸ್ಸಿನಿಂದಲೇ ಗುರುತಿಸಲ್ಪಡುವವ. ಈ ಮೌನ ಯೋಧ ಆತನ ಶತ್ರು ಗಳಿಂದಲೂ ಗೌರವಿಸಲ್ಪಡುವವ ಯಾಕೆಂದರೆ ಅವರಿಗೆ ತಮ್ಮ ವಿರುದ್ದವೇ ಆತ ಜಯಿಸಿದ್ದಾನೆಂಬ ಅರಿವೂ ಇರುವುದಿಲ್ಲ”.

“ನಿಜವಾಗಿಯೂ  ಮೌನಕ್ಕೆ ಅಂತಹ ಶಕ್ತಿ ಇದೆಯೇ ?”

“ಅಂತಹ ಮೌನ ಯೋಧ ನಮ್ಮೊಳಗಿರಲು ಸಾಧ್ಯವೇ ?”

“ಅಂತಹ ಮೌನ ಯೋಧನ ಕೌಶಲ್ಯ ಸಾಧಿಸಲು ಸಾಮಾನ್ಯ ಮನುಷ್ಯರಿಂದ ಸಾಧ್ಯವೇ ?”

ಮುಂದೆ ಅದೇನೋ ಬರೆಯಲು ಯತ್ನಿಸಿ ಅರ್ಧಕ್ಕೆ ನಿಲ್ಲಿಸಿದಂತೆ ಆ ಹಾಳೆಯಲ್ಲಿ  ಭಾಸವಾಗುತ್ತಿತ್ತು.
ಆ ಊರವರು ಈ ದೇವಮಾನವ ಅದೇನೋ  ತಮಗರ್ಥವಾಗದ ವಿಚಿತ್ರವಾದ ರಹಸ್ಯವನ್ನು ಬರೆದಿದ್ದಾನೆಂದು ನಿರ್ಧರಿಸಿ ಮುಂದಿನ ಕಾರ್ಯಕ್ಕೆ ಅಣಿಯಾದರು.