ಭಾನುವಾರ, ಜನವರಿ 20, 2013

ಬದಲಾದ ಕಾಲ !!


    ರಾಮಭಟ್ಟರದು ಹಳೆ ಕಾಲದ ಮಣ್ಣಿನ ಗೋಡೆಯ, ಹೆಂಚು ಹೊಡೆಸಿದ, ಮಾಳಿಗೆಯ ಮನೆಯಾದರೂ ತಕ್ಕಮಟ್ಟಿಗೆ ಗಟ್ಟಿಯಾಗಿಯೇ ಇತ್ತು. ಮನೆಯ ಪ್ರಾಂಗಣದಿಂದ ಶುರುವಾಗಿ ಮಧ್ಯದಲ್ಲಿ ದೇವರ ಮನೆ, ಪಕ್ಕದಲ್ಲಿ ಜಗುಲಿ, ಅತ್ತ ಹಿತ್ತಲಕೋಣೆಯಿಂದ ಅಡುಗೆಮನೆಯವರೆಗೂ ಹರಡಿರುವ ನುಣುಪಾದ, ಹೊಳೆಯುವ ತಣ್ಣನೆಯ ಕೆಂಪು ನೆಲ. ಮನೆಯ ಮುಂಭಾಗಕ್ಕೆ ಹಾಕಿದ ನೀಲಿ ಬಣ್ಣದ ಕಟಾಂಜನ.  ಬೀಟೆ ಸಾಗವಾನಿ ಮರದಲ್ಲಿ ಕುಸುರಿ ಕೆತ್ತನೆಯ ವಾಸ್ತು ಬಾಗಿಲು. ಅದಕ್ಕೆ ಅನುರೂಪವೋ ಎಂಬಂತೆ ಬಾಗಿಲಿನ ಸುತ್ತಲೂ ಗೋಡೆಗೆ ಬಿಡಿಸಿದ ಕೆಂಪು ಬಿಳುಪು ಹಸಿರು ಬಣ್ಣದ ಹೂವು ಬಳ್ಳಿಗಳ ಚಿತ್ರಗಳು ಕೆಲವರ್ಷದ ಹಿಂದಷ್ಟೇ ಹಿರಿಮಗನ ಮದುವೆಗೆ ಗೋಡೆಗೆ ಬಳಿದು ಮಸುಕಾದ ತಿಳಿ ನೀಲಿ ಬಣ್ಣದ ಮೇಲೆ ಎದ್ದು ಕಾಣುತ್ತಿದ್ದವು. ಮನೆಯ ಎದುರಿನ ಅಂಗಳದಲ್ಲಿ ಆರು ಗಟ್ಟಿ ಮುಟ್ಟಾದ ಹಳೆ ಸಾಗವಾನಿ ಮರದ ಕಂಬಕ್ಕೆ ಮಳೆಗಾಲದ ಗಾಳಿ ಮಳೆಗೆ ಮುರಿದು ಬಿದ್ದ ಅಡಿಕೆ ಮರದ ಬುಡದ ಭಾಗ ಕತ್ತರಿಸಿ ಅಡ್ಡಡ್ಡ ಹಾಕಿ, ಅದರ ಮೇಲೆ ಇನ್ನುಳಿದ ಅಡಿಕೆ ಮರದಿಂದ ಮಾಡಿದ ದಬ್ಬೆಯನ್ನು ಹೊದೆಸಿ, ಕತ್ತದ ಬಳ್ಳಿಯಿಂದ ಅದನ್ನು ಒಂದಕ್ಕೊಂದು ಬಿಗಿಯಾಗಿ ಕಟ್ಟಿ, ಗಟ್ಟಿ ಮಾಡಿದ ಅಡಿಕೆ ಅಟ್ಟ. ಈ ವರ್ಷ ಅಡಿಕೆ ಕೊಯ್ಲು ಸ್ವಲ್ಪ ಜಾಸ್ತಿ ಬಂದದ್ದರಿಂದ ಅಡಿಕೆ ಅಟ್ಟವೆಲ್ಲ ಕೊನೆಯಿಂದ ತುಂಬಿ, ಮನೆಯ ಮುಂಭಾಗದ ಹೆಂಚಿನ ಮಾಡಿನ ಮೇಲೂ ಒಂದಿಷ್ಟು ಕೊನೆಯನ್ನು ಹೇರಿ ಬಿಸಿಲು ತಾಗಿ ಒಣಗುವಂತೆ ಮಾಡಿದ್ದರು. ಹೀಗೆ ಒತ್ತಾಗಿ ಅಡಿಕೆ ಕೊನೆಯನ್ನು ಹೇರಿದ್ದರೂ, ಅಲ್ಲಲ್ಲಿ ಅಡಿಕೆ ಕೊನೆ, ದಬ್ಬೆಗಳ ಮಧ್ಯದಿಂದ ಸೂರ್ಯನ ಬೆಳಕು ನುಸುಳಿಬಂದು, ಮನೆಯ ಸಗಣಿಯಿಂದ ಸಾರಿಸಿದ ಅಂಗಳದಲ್ಲಿ ಬಗೆ ಬಗೆಯ ಬೆಳಕಿನ ಚಮತ್ಕಾರಿಕ ಚಿತ್ರಗಳನ್ನು ಯಾವ ದೊಡ್ಡ ಕಲಾವಿದನೂ ಊಹಿಸದ ರೀತಿಯಲ್ಲಿ ಸೃಷ್ಟಿ ಮಾಡುತ್ತಿತ್ತು. ಮನೆಯ ಅಕ್ಕ ಪಕ್ಕ ದಲ್ಲಿ ಅಡಿಕೆ ತೋಟವಿದ್ದುದರಿಂದಲೋ  ಅಥವಾ ಮನೆಯ ಹಿಂದಿನ ಗುಡ್ಡದ ಮೇಲಿನ ಬೃಹದಾಕಾರದ ಮಾವಿನ ಮರದಿಂದಲೋ ಏನೋ ಮಧ್ಯಾಹ್ನದ ಹೊತ್ತು ಮಾತ್ರ ಮನೆಯ ಮೇಲೆ ತಕ್ಕ ಮಟ್ಟಿನ ಬಿಸಿಲು ಬೀಳುತ್ತಿತ್ತು. ಹೀಗಾಗಿ ಮಳೆಗಾಲದಲ್ಲಿ ಕೆಲವೊಮ್ಮೆ ನಡುಮನೆಯ ದೇವರ ಕೋಣೆ ಕತ್ತಲ ಕೋಣೆಯಾದದ್ದೂ ಉಂಟು !

    ಮನೆಯ ಪ್ರಾಂಗಣದಲ್ಲಿ ಬೆಳಿಗ್ಗಿನ ತಿಂಡಿ ಮುಗಿಸಿ, ಎಲೆ ಅಡಿಕೆ ಜಗಿಯುತ್ತ ಆರಾಮ ಖುರ್ಚಿಯಲ್ಲಿ ಕುಳಿತ ರಾಮಭಟ್ಟರಿಗೆ ಅಡಿಕೆ ಅಟ್ಟದ ಮೇಲೆ ಹಾಕಿದ ಕೊನೆಗಳನ್ನ ಕುಳಿತಲ್ಲೇ ಮುಭಾಗದ ಹೆಂಚಿನ ಮಾಡು ಹಾಗೂ ಅಡಿಕೆ ಅಟ್ಟದ ನಡುವಿನ ಸಂದಿನಿಂದ ನೋಡುವುದೇ ಏನೋ ಒಂದು ಬಗೆಯ ಹಿಗ್ಗು. ಈ ಸಾರ್ತಿ ಮಳೆಗಾಲದಲ್ಲಿ ಮೊದಲೇ ಯೋಚನೆ ಮಾಡಿ ಎರಡೆರಡು ಸಾರ್ತಿ ಮದ್ದನ್ನು ಅಡಿಕೆ ಕೊನೆಗೆ ಹೊಡೆಸಿದ್ದು ಒಳ್ಳೆದೇ ಆಯ್ತು. ಆ ಕೆಟ್ಟ ಕೊಳೆರೋಗದಿಂದ ತಪ್ಪಿಸಿಕೊಂಡು ಬೆಳೆ ಸುಮಾರಾದ ಮಟ್ಟಿಗೆ ಬಂದಿದೆ. ನನ್ನ ಮಾತು ಕೇಳದೇ ಒಂದೇ ಸಾರ್ತಿ ಮದ್ದು ಹೊಡೆಸಿದ ಎದುರು ಮನೆಯ ಶಿವರಾಮ ಭಟ್ಟನ ಬೆಳೆ ನೋಡು ಅರ್ಧಕ್ಕರ್ಧ ಕೊಳೆ ರೋಗಕ್ಕೆ ಬಿದ್ದು ಹೋಯ್ತು. ಎನ್ನುತ್ತ ತನ್ನನ್ನು ಮೆಚ್ಚಿಕೊಳ್ಳುತ್ತಿರುವಾಗಲೇ ಅಡುಗೆ ಮನೆಯಿಂದ ಭಟ್ಟರ ಹೆಂಡತಿಯ  “ಆ ಮನೆ ಹಿಂದುಬದಿ ಮಾವಿನ ಮರದ ಹೆಣೆನ ಹೊಡೆಸುತ್ತಿರ ಇಲ್ವಾ ?” ಎಲ್ ನೋಡುದ್ರೂ ಮನೇಲಿ ಕತ್ಲೆ ಕತ್ಲೆ, ಒಳ್ಳೆ ಗುಹೇಲಿ ಹೊಕ್ಕೊಂಡ ಇದ್ದ ಹಾಗೇ ಆಗ್ತು “ ಎನ್ನುವ ಧ್ವನಿ ಪ್ರತಿದ್ವನಿಸಿದರೂ, ಅದನ್ನು ಕೇಳಿಯೂ ಕೇಳಿಸದಂತೆ ಇದ್ದರೂ, ಭಟ್ಟರ ಮನಸ್ಸು ಮಾತ್ರ ಮಾವಿನ ಮರವನ್ನೇ ಯೋಚಿಸಿತು. ಆ ಹಾಳಾದ ಬಲಿಯ ಎಲ್ಲಿ ಹೋದನೋ ಏನೋ, ಮೊನ್ನೆನೇ ಬರುತ್ತೇನೆ ಅಂತ ಹೇಳಿ ಹೋದವ ಇನ್ನೂ ಪತ್ತೇನೇ ಇಲ್ಲ. ಈಗೆಲ್ಲ ಕೆಲಸಗಾರರು ಹಾಳಾಗಿ ಹೋಗಿದ್ದಾರೆ. ಯಾರನ್ನೂ ನಂಬಲಿಕ್ಕೆ ಸಾಧ್ಯವಿಲ್ಲ ಈ ಕಾಲದಲ್ಲಿ. ನನ್ನ ಕೈಯಲ್ಲಿ ಆಗಿದ್ರೆ ಯಾವಾಗ್ಲೋ ಅದನ್ನ ಕಡಿದು ಬಿಸಾಕುತ್ತಿದ್ದೆ. ಎಂದು ಮನಸ್ಸಿನಲ್ಲಿ ಅಂದು ಕೊಳ್ಳುತ್ತಿರುವಾಗಲೇ ತನ್ನ ಪ್ರಾಯದ ದಿನಗಳಲ್ಲಿ ಮಳೆಗಾಲದ ಹಲಸಿನ ಹಣ್ಣು ಕೊಯ್ಯಲು ಮರ ಹತ್ತಿ ಜಾರಿ ಬಿದ್ದ ನೋವು ಇನ್ನೂ ಹೊಗಿಲ್ಲ ಅಂದುಕೊಳ್ಳುತ್ತ ತನ್ನ ಕಾಲನ್ನು ಒಮ್ಮೆ ಹಾಗೇ ನೀಡಿಸಿದರು. ಹಾಳಾದ ನೋವು ಸಾಯೋವರೆಗೂ ಸತಾಯಿಸುತ್ತದೆ ಎನ್ನುತ್ತ ಅದನ್ನೂ ಜೊತೆಗೂಡಿಸಿ ಶಪಿಸಿದರು. 

    ಹೀಗೇ ಭಟ್ಟರು ಯೋಚನಾ ಲಹರಿಯಲ್ಲಿದ್ದಾಗಲೇ  “ನಮಸ್ಕಾರ ಒಡೆಯ” ಎನ್ನುತ್ತ ಬಲಿಯ ಭಟ್ಟರ ಎದುರಿಗೆ ನೆಲದ ಮೇಲೆ ತನ್ನ ಕಂಬಳಿ ಹಾಸಿ ಕೂತ.  

“ಎಲ್ಲಿಂದ ಪ್ರತ್ಯಕ್ಷ ಆದೆ ಮಾರಾಯ ? ನೀನು ಹೇಳಿದ ಮೇಲೆ ಬಂದೇ ಬರ್ತೆ ಅಂತ  ಬರ ಕಾಯ್ತಾ ಇದ್ದೆ. ನೀನು ನೋಡಿದ್ರೆ ನಾಪತ್ತೆ “

“ನಾನೂ ಬರುವ ಅಂತ್ಲೇ ಇದ್ದೆ, ಏನು ಮಾಡುದು ಮನೆ ಬದಿ ತಾಪತ್ರಯ. ಗದ್ದೆ ಕೊಯ್ಲು ಅದು ಇದು ಹೇಳಿ ಬರ್ಲಿಕ್ಕೆ ಆಗ್ಲಿಲ್ಲ”
“ಗದ್ದೆ ಕೊಯ್ಲು ಆ ದಿನನೇ ಆಯ್ತು ಅಂದ್ಯಲ್ಲ ಮತ್ತೆ”

“ಆಗಿತ್ರ ಒಂದು ಸಣ್ಣ ಚೂರು ಉಳ್ಕೊಂಡಿತ್ತು. ಅದಕ್ಕೆಯ ಬರ್ಲಿಕ್ಕೆ ಆಗ್ಲಿಲ್ಲ”

“ನಿನ್ನ ಮಗನ್ದಿರೆಲ್ಲ ಇದ್ರಲ್ಲ, ಅವ್ರು ಮಾಡ್ತಿರ್ಲಿಲ್ವ ?”

“ಮಗನ್ದಿರೆಲ್ಲ ಎಲ್ರ ಮನೆ ಬದಿ ಕೆಲಸ ಮಾದುದೇ ಬಿಟ್ ಬಿಟ್ಟರೆ. ಈಗ ಏನಿದ್ರೂ ಕಲ್ ಫ್ಯಾಕ್ಟರಿ, ಪೇಟೆ ಬದಿ ಕೆಲಸ ಇಂತದೆಯ. ದುಡ್ಡು ಅಷ್ಟೇಯ, ಎರಡು ಪಟ್ಟು ಕೊಡುತ್ರು. ಈ ಗದ್ದೆ ಕೆಲಸ ಎಲ್ಲಾ ಮಾಡ್ತಿದ್ರೆ ನಮಗೇ ಲುಕ್ಸಾನ ಹೇಳಿ ಗದ್ದೆಗೆಲ್ಲ ಬರುದೇ ಇಲ್ಲ . ನಾನು ಇತ್ಲಾಗೆ ಮಾಡುಕೆ ಆಗ್ದೆ ಅತ್ತಲಾಗೆ ಬಿಡುಕು ಆಗ್ದೆ ಒದ್ದಾಡ್ತಾ ಅವ್ನೆ ನೋಡಿ”

“ಹಾನ್ ನಾನು ಕೇಳಿದ್ದೆ ಎರಡು ಮೂರು ಪಟ್ಟು ಜಾಸ್ತಿ ಸಂಬಳ ಅಂತೆ ಅದ್ಕೆ ಈಗ ಅಡಿಕೆ ತೋಟ ಬಿಡು, ಊರಲ್ಲೇ ಎಲ್ಲೂ ಕೆಲಸಕ್ಕೆ ಬರುದಿಲ್ಲ ಅಂತ್ರು. ಇಲ್ಲಿ ಆರಾಮ ಕೆಲಸ ಬಿಟ್ಟಿ ದುಡ್ಡು ಸಿಗ್ತದೆ ಹೇಳಿ ಎಲ್ಲಿಗಾದ್ರೂ ಹೋಗುದ ?”

“ಈಗೆಲ್ಲ ಕಾಲ ಬದಲಾಗದೆ ಭಟ್ರೇ ಮೊದಲು ಬೇರೆ ಗತಿ ಇರ್ಲಿಲ್ಲ ಅದ್ಕೆ  ನೀವು ಕೊಟ್ಟಷ್ಟು ತಗೊಂಡು ಕೆಲಸಕ್ಕೆ ಬತ್ತಿದ್ರು. ಈಗೆಲ್ಲ ಹಂಗಿಲ್ಲ ನೋಡಿ. ನೀವೂ ಅಷ್ಟೇಯ ರೊಕ್ಕ ಕೊಟ್ರೆ ಇಲ್ಲೇ ಊರಲ್ಲೇ ಹತ್ತಿರ ಹೇಳಿ ಬರ ಬಹುದೇನ ನೋಡಿ. ಈಗ ನಿಮ್ಮ ಹಿರಿಯ ಮಗನೂ ಬೆಂಗಳೂರು ಅಂತ ಇಷ್ಟ್ ಚಲೋ ತೋಟ ಬಿಟ್ಟಿ ಹೋಗಲಿಲ್ವಾ ಹಾಗೆಯ ಇದುವ ”

“ಊಟ, ಆಸ್ರಿ, ಚಾ ಅದರ ಮೇಲೆ ಮಧ್ಯಾಹ್ನ ಸ್ವಲ್ಪ ನಿದ್ರೆ ಅದರ ಮೇಲೆ ಸಂಬಳ ಈ ಎಲ್ಲಾ ಸವಲತ್ತು ಆ ಕೆಲ್ಸದಲ್ಲಿ ಇದ್ಯ  ಕೇಳು” ಎನ್ನುತ್ತ ಭಟ್ಟರು ಸ್ವಲ್ಪ ಉದ್ವಿಗ್ನರಾದರೂ ಬಲಿಯ ಮಾತ್ರ “ಈಗೆಲ್ಲ ಕಾಲ ಬದಲಾಗದೆರ”  ಅಂತ ಮಾತ್ರ ಉತ್ತರಿಸಿದ. 

“ನಾನೇನು ದುಡ್ಡು ಕೊಡ್ತ್ರು ಹೇಳಿ, ಅಲ್ಲಿಗೆಲ್ಲ  ಹೊಗುವವನಲ್ಲ. ನಾನೂ ನಿಮ್ ಕಾಲದವ್ನೆಯ. ಅವ್ರು ಕೆಲಸಕ್ಕೆ ಹೋದ್ರೆ, ಜಾಸ್ತಿ ಸಂಬಳ ತಂದರೆ ನಂಗೂ ಖುಶಿನೆಯ. ಆದ್ರೂ ನಮ್ಮ ಗದ್ದೆ ಎಲ್ಲಾ ಅಲಕ್ಷ ಮಾಡ್ತ್ರು ಹೇಳಿ ತಲೆಬಿಸಿ”
“ಈಗ ಮಾವಿನ ಮರ ಎಂಥದು ಮಾಡುದು ?”

“ಇವತ್ತು ಆಗುದಿಲ್ಲ. ಇನ್ನೊಂದು ದಿನ ಬರ್ತೆ. ಇಲ್ಲೇ ಅಂಗಡಿ ಬದಿಗೆ ಬಂದಿದ್ದೆ ಹಾಗೇ ಹೇಳಿ ಹೋಗ್ವ ಅಂತ ಬಂದೆ. ಈಗ ಒಂದೆರಡು ಅಡಕೆ, ಎಲೆ ಕೊಡಿ ಹೊರಡ್ತೆ” ಎನ್ನುತ್ತ ಬಲಿಯ ಅಲ್ಲಿಂದ ಹೊರಡಲು ಸಿದ್ದನಾದ.

    ಬಲಿಯ ಹೊರಟ ಮೇಲೆ ರಾಮಭಟ್ಟರು ಕತ್ತಿ  ಹಿಡಿದು ತೋಟದ ಕಡೆ ಹೊರಡ ಬೇಕೆನ್ನುವಾಗಲೇ ಅವರ ಎರಡನೆಯ ಮಗ ಶಂಕರ ಆಗ ತಾನೇ ಸ್ನಾನ ಮಾಡಿ , ಪೇಂಟು ಶರ್ಟನ್ನೇರಿಸಿ ಪೇಟೆಯ ತನ್ನ ಅಂಗಡಿಗೆ ಹೊರಡಲು ತಯಾರಾಗುತ್ತಿದ್ದ.
“ದೇವರ ಪೂಜೆನಾದ್ರೂ ಮಾಡಿದ್ಯ ಹೇಗೆ ?” ಎನ್ನುವ ಭಟ್ಟರ ಪ್ರಶ್ನೆಗೆ “ಎಲ್ಲಾ ಗೊತ್ತಿದ್ಕೊಂಡೂ ಕೆಳ್ತ್ಯಲ್ಲ. ನಿನ್ ಹೆಂಗಿದ್ರೂ ಮನೇಲೆ ಇರ್ತೆ ಹೇಳಿ ಮಾಡಿನಿಲ್ಲೆ. ಈಗ ನಂಗೆ ಹೊತ್ತಾತು. ಅರ್ಜಂಟ್  ಕೆಲಸ ಇದ್ದು ಹೊರಡ್ತೆ” ಎನುತ್ತ ಶಂಕರ ಮನೆಯ ಅಂಗಳದಲ್ಲಿದ್ದ ತನ್ನ ಮೋಟಾರು ಸೈಕಲ್ಲನ್ನು ಒಂದಿಷ್ಟು ಒದ್ದು ಶುರುಮಾಡಲು ತೊಡಗಿದ. ಮೂರ್ನಾಲ್ಕು ಒದೆತಕ್ಕೆ ಚೀರುತ್ತಾ ಅದು ಶುರುವಾಗಿದ್ದೆ ತಡ, ರುಯ್ಯನೆ ಮನೆಯ ಮುಂದಿನ ಸಪೂರ ದಾರಿಯಲ್ಲೂ ಹೆದ್ದಾರಿಯ ವೇಗದಲ್ಲಿ ಮುನ್ನುಗ್ಗಿತು. ಇತ್ತ ಭಟ್ಟರಿಗೆ ಏನೂ ಉತ್ತರಿಸಲೂ ಆಸ್ಪದ ಸಿಗದೇ ಸ್ವಲ್ಪ ಸಿಟ್ಟಿನಲ್ಲೇ ತೋಟದತ್ತ ಮುಖ ಮಾಡಿದರು. ತೋಟಕ್ಕೆ ಹೋದದ್ದೇ ತಡ, ಅಲ್ಲಿನ ತಂಪಿನ ಪ್ರಭಾವವೋ ಅಥವಾ ಪ್ರಶಾಂತತೆಯೋ ಏನೋ ರಾಮಭಟ್ಟರ ತಲೆಯ ಯಾವುದೋ ಮೂಲೆಯಲ್ಲಿ ಹುದುಗಿಕೊಂಡಿದ್ದ ಚಿಂತೆಗಳು ಒಂದೊಂದಾಗಿ ಮೆಲಕ್ಕೆಬರಲು ಆರಂಭವಾದವು.

    ಹಿರಿಯ ಮಗ ಅಂತೂ ಕೆಲ್ಸ ಅಂತ ಹೇಳಿ ಯಾವುದೋ ಕಂಪನಿಯಲ್ಲಿ ಬೆಂಗಳೂರಿನಲ್ಲೇ ಇರುವುದು. ಅವನ ಸಂಬಳ ಅವನ ಸಂಸಾರ ಸಾಗಿಸಲಿಕ್ಕಷ್ಟೆ ಸಾಕು ಅಂತ ಹೇಳಿದ್ದು ಕೇಳಿದ್ದು . ಇತ್ತೀಚಿಗಂತೂ ಅವನು ಮನೆಕಡೆಗೆ ಬರುದೇ ಕಡಿಮೆ ಆಗಿದೆ. ಯಾವಾಗ್ಲೋ ಆರು ತಿಂಗಳಿಗೋ ಹಬ್ಬಕ್ಕೊ ಹೆಂಡತಿ ಜೊತೆ ಬರುವುದು ಅಷ್ಟೆ. ಅವನು ಹೋದರೆ ಹೋಗ್ಲಿ, ಎರಡನೇ ಮಗನಾದರೂ ನೆಟ್ಟಗೆ ಜವಾಬ್ದಾರಿ ತಗೊಂಡು ತೋಟ ಮನೆ ಎಲ್ಲಾ ಸರಿಯಾಗಿ ನೋಡ್ಕೊಳ್ಳಿ ಅಂದ್ರೆ ಅವನೂ ಪೇಟೇಲಿ ಎಂಥದೋ ಅಂಗಡಿ ಹಾಕ್ಕೊಂಡು ಕೂತಿದ್ದಾನೆ. ಎಷ್ಟು ವ್ಯಾಪಾರ  ಮಾಡಿದ್ದಾನೋ ದೇವರಿಗೆ ಗೊತ್ತು. ಎಲ್ಲಾ ಮನೆಯ ದುಡ್ಡಲ್ಲೇ ಅಂಗಡಿ ನಡೆಸ್ತ ಇದ್ದಾನೆ. ಕೇಳಿದ್ರೆ ನಿನಗೆಲ್ಲ ಅದು ಅರ್ಥ ಆಗಲ್ಲ ಅಂತಾನೆ. ಅದಕ್ಕೆ ಬೇಕಾಗುವ ಅನುಭವ, ಚಾಣಕ್ಷತನ ನಿನಗೆ ಇಲ್ಲ ಅಂದ್ರೂ ಕೇಳುವದಿಲ್ಲ. ಇಲ್ಲೇ ಊರಲ್ಲೇ ಏನಾದರೂ ವ್ಯಾಪಾರ ಮಾಡಿ ತೋಟನೂ ನೋಡ್ಕ ಅಂದ್ರೆ, ಈ ಊರಲ್ಲಿ ಎಂಥ ವ್ಯಾಪಾರ ಮಾಡುದು ? ಅದಕ್ಕೆಲ್ಲ ಪೇಟೆನೇ ಆಗಬೇಕು ಅಂತ ವಾದಿಸ್ತಾನೆ. ಈ ತೋಟ ಎಲ್ಲಾ ನಿಂಗೆ ಕಡಿಮೆ ಎನಿಸಿದರೆ ಹಿಂದುಬದಿ ಖಾಲಿ ಜಾಗಕ್ಕೆ ಮತ್ತಷ್ಟು ಸಸಿ ಹಾಕಿ ತೋಟ ಬೆಳೆಸು ಅಂದ್ರೆ , ಅಲ್ಲೆಲ್ಲ ಗಿಡ ನೆಟ್ಟು ವರ್ಷಗಟ್ಟಲೆ ಕಾಯುತ್ತ  ಯಾರು ಕುಳಿತುಕೊಳ್ಳುತ್ತಾರೆ ಅನ್ನುವ ಮಾತನಾಡುತ್ತಾನೆ. ಅಲ್ಲದೇ ಡಿಗ್ರೀ ಎಲ್ಲಾ ಓದಿ ತೋಟದ ಕೆಲ್ಸ ಮಾಡುದ ಅಂತಲೂ ಕೇಳುತ್ತಾನೆ. ಎಲ್ಲರಿಗೂ ಪೇಟೆಯ ಹುಚ್ಚು. ಅಲ್ಲಿ ನೋಡಿದರೆ ಬಲಿಯನ ಮಕ್ಕಳೂ ಅಂತೆಲ್ಲ ಎಲ್ಲರೂ ಪೇಟೆಯ ಕಡೆ ಮುಖ ಹಾಕಿದ್ದಾರೆ. ಇವನು ನೋಡಿದರೆ ಅದೇ ಕಥೆ. ಇಷ್ಟು ವರ್ಷ ಎಷ್ಟೋ ತಲೆಮಾರಿನ ಜನ ಸುಖವಾಗಿಯೇ ಇಲ್ಲೇ ಬಾಳಿಲ್ಲವೇ ? ಅಲ್ಲಿ ಸಾಧಿಸಿದ್ದನ್ನು ಇಲ್ಲಿ ಸಾಧಿಸಲಿಕ್ಕೆ ಸಾಧ್ಯ ಇಲ್ಲವೇ ? ಇದೆಲ್ಲಾ ಹೇಳಿದ್ರೆ ಈಗೆಲ್ಲ ಕಾಲ ಬದಲಾಗಿದೆ ಅಂತ ಹೇಳಿ ಎಲ್ಲರೂ ಸೇರಿ ಬಾಯಿ ಮುಚ್ಚಿಸುತ್ತಾರೆ. ಈ ಪೇಟೆಯ ಹುಚ್ಚು ಇವರನ್ನ ಯಾವಾಗ ಬಿಡುತ್ತದೆಯೋ ಏನೋ. ಇವರಲ್ಲ ಹೀಗೆ ಮಾಡಿದ್ರೆ ಮುಂದೆ ನಾನು ಇಷ್ಟು ವರ್ಷ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡ ಈ ತೋಟದ ಗತಿಯೇನು? ಅತ್ತ ಕೆಲಸದವರೂ ಸಿಗದ, ಇತ್ತ ತನ್ನ ಕೈಯಲ್ಲೂ ಆಗದ ಪರಿಸ್ಥತಿ. ಮುಂದೆ ಎರಡನೇ ಮಗನೂ ಈ ರೀತಿ ಅಲಕ್ಷ್ಯ ಮಾಡಿದರೆ ತನ್ನ ನಂತರ ಈ ತೋಟ ಹಾಳು ಬಿದ್ದರೆ ಏನು ಮಾಡುವುದು. ಎಂಬೆಲ್ಲ ಚಿಂತೆಗಳು ಒಂದೊಂದಾಗಿ ಭಟ್ಟರ ತಲೆಯೊಳಗೆ ಆವರಿಸಿ ಕೊಳ್ಳುತ್ತಾ ಹೋಯಿತು.
image source: internet

    ಭಟ್ಟರು ಚಿಂತೆಯಲ್ಲಿ ಮುಳುಗಿರುವಾಗಲೇ, ಒಮ್ಮೆಲೇ ಯಾಕೋ ಸುತ್ತಲೂ ಧೃಢವಾಗಿ ನಿಂತಿದ್ದ ಅಡಿಕೆ ತೆಂಗಿನ ಮರಗಳು ಜೋರಾದ ಗಾಳಿಯಿಲ್ಲದಿದ್ದರೂ ಅವು ಅತ್ತಿತ್ತ ಭಯದಿಂದ ವಾಲತೊಡಗಿದವು. ನೋಡ ನೋಡುತ್ತಿದ್ದಂತೆಯೇ ಅವು ಕೃಷವಾಗಿ, ಬಲಹೀನವಾಗಿ ಅವುಗಳ ರೆಂಬೆಗಳೆಲ್ಲ ಬಾಡಿ ಹಳದಿ ಬಣ್ಣಕ್ಕೆ ತಿರುಗತೊಡಗಿತು. ಅವುಗಳ ಬೇರು, ನೀರು ಗೊಬ್ಬರವಿಲ್ಲದೆ ಗಟ್ಟಿಯಾದ ಬರಡು ಭೂಮಿಯಲ್ಲಿ ಒಣಗಿ ಹೋಗಿ ಸಡಿಲಾಗತೊಡಗಿತು. ಅವುಗಳೆಲ್ಲ ಅರೆಜೀವವಾಗಿ ತಮ್ಮ ದೇಹವನ್ನ ಬಾಗಿಸುತ್ತ, ಸುತ್ತಲೂ ದಯನೀಯವಾಗಿ ನಿಂತವು. ಅವೆಲ್ಲ  ಭಟ್ಟರತ್ತ ಮುಖಮಾಡಿ ಒಂದೇ ದನಿಯಲ್ಲಿ “ನಮಗ್ಯಾಕೆ ಈ ಗತಿ ತಂದೆ? ಇದೇನಾ ನಮಗೆ ಸಿಕ್ಕ ಪ್ರತಿಫಲ ?” ಎಂದು ನಿರ್ಜೀವ ದ್ವನಿಯಲ್ಲಿ ಪ್ರಶ್ನಿಸಿದವು.

 “ನಾನೇನು ಮಾಡಲಿ ಎಲ್ಲಾ ಕಾಲದ ಮಹಿಮೆ. ಕಾಲ ಬದಲಾಗಿದೆ. ನಾನು ನಿತ್ಸಹಾಯಕ” ಎಂದು ಭಟ್ಟರೂ ಕೂಗಿಕೊಂಡರು.

 “ಕಾಲವಲ್ಲ ಬದಲಾಗಿದ್ದು, ಬದಲಾಗಿದ್ದು ನೀವು ಮಾತ್ರ” ಎಂಬ ಪ್ರತ್ಯುತ್ತರ ಎಲ್ಲಿಂದಲೋ ಪ್ರತಿದ್ವನಿಸಿದಂತೆ ಆಯಿತು.

ಭಟ್ಟರು ಹುಚ್ಚನಂತಾಗಿ ಏನೂ ತೋಚದವರಂತೆ ಮನೆಯತ್ತ ಎದುರುಸಿರು ಬಿಡುತ್ತ ಓಡಿದರು.










1 ಕಾಮೆಂಟ್‌:

  1. ಚೆನ್ನಾಗಿದೆ. ಕಥೆ ನೀರಸವಾಗಿ ಮುಗಿತೇನೋ ಅನ್ನುವಷ್ಟರಲ್ಲಿ ಮತ್ತೆ ಹುರುಪು ಪಡೆದುಕೊಂಡಿತು. ಚೆನ್ನಾಗಿದೆ. ಬರೆಯುತ್ತಿರಿ:)

    ಪ್ರತ್ಯುತ್ತರಅಳಿಸಿ