ಶನಿವಾರ, ಜುಲೈ 21, 2012

ಮೆಟ್ಟಿಲು,ನಮ್ಮೂರ ಮಣ್ಣು ಮತ್ತು ಮನಸ್ಸು !!


                                            ಮೆಟ್ಟಿಲು

 ಸೋಲೇ ಗೆಲುವಿನ ಮೆಟ್ಟಿಲು ನಿಜ  

ಆದರೆ ಮೆಟ್ಟಿಲುಗಳೇ ಸೋಲಾದರೆ ? 

ಗೆಲ್ಲಬೇಕೆಂದು ಸೋತರೆ ಗೆಲುವಿಗಿನ್ನೊಂದು ಮೆಟ್ಟಿಲು 

ಸೋತರೇ ಗೆಲ್ಲುತ್ತೇವೆಂದರೆ ಸೋಲಿಗಿನ್ನೊಂದು ಮೆಟ್ಟಿಲು !

        

           

                   ನಮ್ಮೂರ ಮಣ್ಣು

 ಮಣ್ಣಿನಿಂದಲೇ ಮತ್ತೆ ಎದ್ದು ಬಂದಿದ್ದೇನೆಂದರು ಚುನಾವಣೇಲಿ ಗೆದ್ದವರು

ಮಣ್ಣಿನಿಂದಲೇ ಮೆತ್ತೆದ್ದು ಬರ್ತೀನೆಂದರು ಚುನಾವಣೇಲಿ ಸೋತವರು 

ಮಣ್ಣಿನಿಂದಲೇ ಎದ್ದು ಬರಲಿರುವವನೆಂದರು ಚುನಾವಣೇಲಿ ನಿಲ್ಲುವವರು

ಅದಕ್ಕಾಗೇ ನೋಡಿ, ನಮ್ಮೂರ ಮಣ್ಣಿಗೆ ಹಾಕಿಸಿಲ್ಲ ಟಾರು !!

 
   

ಮನಸ್ಸು                        

ನಿಲುಕದ ಕನಸುಗಳಿಗೆ ಜೋತು ಬೀಳುವ ಬಾವಲಿ 

ಎಲ್ಲವೂ ತಂದೆನ್ನುವ ಧಗ ಧಗಿಸುವ ಕಾವಲಿ 

ಕ್ಷಣ ಕ್ಷಣವೂ ಹೊಸ ಹೊಸ ಆಸೆಗಳಲಿ 

ಸದಾ ಹಸಿದಿರುವ ಮನಸ್ಸೆಂಬ ಕೋಮಲಿ

ಭಾನುವಾರ, ಜುಲೈ 1, 2012

ಮಳೆಯ ಹನಿಯ ಕಥೆ ..


ಅದೆಷ್ಟೋ ದಿನಗಳ ಪ್ರಯಾಸಕರ ಪ್ರಯಾಣವನ್ನ ಅರಬ್ಬೀ ಸಮುದ್ರದ ಮೇಲೆ ಮುಗಿಸಿ, ‘ಇನ್ನೂ ಮುಂದೆ ಹೋಗಲು ನಮ್ಮಿಂದ ಸಾಧ್ಯವಿಲ್ಲ, ನಮ್ಮ ಜೀವನವೇ ಇಷ್ಟು, ಕೆಲವೊಮ್ಮೆ  ಜೋರಾಗಿ ಬೀಸುವ ಗಾಳಿ ಇದ್ದಷ್ಟು ಹೊತ್ತು ಮಾತ್ರ ಸ್ವಲ್ಪ ನೆಮ್ಮದಿ, ಇಲ್ಲದಿದ್ದರೆ ಆ ನಡು ಸಮುದ್ರದ ಮಧ್ಯದಲ್ಲಿ, ಆ ಸೂರ್ಯನ ಕಡು ಬಿಸಿಲಿನಲ್ಲಿ, ನಿಧಾನವಾಗಿ ಬೀಸುವ ಆ ಬಿಸಿ ಗಾಳಿಯಲ್ಲಿ, ತೆವಳುತ್ತಾ ಸಾಗುವ ಹಿಂಸೆ ಯಾರಿಗೂ ಬರಬಾರದಪ್ಪ’ ಎಂದು ಕಡು ಬೇಸಿಗೆಯನ್ನ ಶಪಿಸುತ್ತ,  ಸಮುದ್ರವನ್ನೇನೋ ಹಾಗೋ ಹೀಗೋ ದಾಟಿದೆವು, ಆದರೆ ನಮ್ಮ ಜೊತೆ ಸಮುದ್ರದ ದಾರಿಯುದ್ದಕ್ಕೂ ಸಂಗ್ರಹಿಸಿ ತಂದಿರುವ ಈ ಸರಕನ್ನು ಇಲ್ಲಿಂದ ಇನ್ನೂ ಮುಂದೆ ಕೊಂಡೊಯ್ದು ಈ ಭೂ ಪ್ರದೇಶದ ದಾರಿಯುದ್ದಕ್ಕೂ ಹಂಚುತ್ತಾ ಎಷ್ಟು ದೂರ ಸಾಧ್ಯವೋ ಅಷ್ಟು ದೂರ ಕ್ರಮಿಸಬೇಕೆನ್ನುವ ಕರ್ತವ್ಯದ ನೆನಪಾಗಿ, ಹತ್ತಿರವೇ ಇದ್ದ ಬೆಟ್ಟಗಳಲ್ಲಿ ಸ್ವಲ್ಪ  ದಿನ ವಿಶ್ರಾಂತಿ ಪಡೆದು  ಪ್ರಯಾಣ ಮುಂದುವರಿಸಲು ನಿರ್ಧರಿಸಿದವು.
          “ಇನ್ನೂ ಮಲಗಿಕೊಂಡೇ ಇದ್ದಿರಲ್ರಿ, ಎದ್ದೇಳ್ರಿ” ಎಂದು ಸೋಮನ ಹೆಂಡತಿ ಕಿರುಚಿಕೊಂಡಾಗಲೇ ಅವನಿಗೆ ಎಚ್ಚರವಾದದ್ದು. “ಇನ್ನೂ ಸರಿಯಾಗಿ ಬೆಳಕೇ ಹರಿದಿಲ್ವಲ್ಲೇ, ಎಷ್ಟು ಬೇಗ ಎದ್ದು ಎನ್ಮಾಡಲೇ? “ ಎಂದು ಸೋಮ ಮರು ಪ್ರಶ್ನಿಸುತ್ತಿದ್ದಂತೆಯೇ  “ಎದ್ದು ಒಮ್ಮೆ ಗಡಿಯಾರ ನೋಡ್ಕೊಳ್ಳಿ, ಆಗಲೇ ಎಂಟು ಗಂಟೆ ಆಯ್ತು” ಎನ್ನುವ ಉತ್ತರ ಪ್ರತಿಧ್ವನಿಸಿತು. ಸೋಮ ಹಾಗೋ ಹೀಗೋ ಇದ್ದು ನೋಡುತ್ತಾನೆ ಆಗಲೇ ಎಂಟು ಗಂಟೆ. ನಿನ್ನೆಯ ವರೆಗೂ ಇಷ್ಟೊತ್ತಿಗಾಗಲೇ ಬೆಳಕು ಹರಿದು, ಬೇಸಿಗೆಯ ತಾಪ ಪ್ರಾರಂಭವಾಗುತ್ತಿತ್ತು. ಆದರೆ ಇವತ್ತು, ಅನಿರೀಕ್ಷಿತವಾಗಿ ಎಲ್ಲೆಲ್ಲೋ ಸುತ್ತುವರಿದ ಕರಿಯ ಮಳೆಯ ಮೋಡಗಳು. “ಅರೇ ಮಳೆ ಬರೋ ಹಾಗಿದ್ಯೇ, ಬೇಗ ತಿಂಡಿ ಕೊಡೆ, ಗದ್ದೆ ತೋಟದ ಕಡೆಗೆ ಹೋಗಿ ಒಂದ್ಸಲ ನೋಡ್ಕೊಂಡು ಬರಬೇಕು” ಎನ್ನುತ್ತ ಸೋಮ ಹಲ್ಲುಜ್ಜಿ, ಮುಖ ತೊಳೆದು ಅಣಿಯಾಗಲು ಹೊರಟ.
          ಆಗಲೇ ವಿಶ್ರಾಂತಿಗೆಂದು ಇಲ್ಲಿ ನೆಲೆನಿಂತು ಒಂದು ದಿನವಾಗುತ್ತ ಬಂತಲ್ಲವೇ. ಇಲ್ಲಿನ ಹಿತವಾದ  ಗಾಳಿಗೆ  ಮಯ್ಯೋಡ್ಡಿ  ನಿಂತರೆ ಕಾಲ ಹೋದದ್ದೇ ತಿಳಿಯುವುದಿಲ್ಲ, ಆದರೆ ಎಷ್ಟು ದಿನ ಅಂತ ಇಲ್ಲಿಯೇ ನೆಲೆ ನಿಲ್ಲಲಿಕ್ಕಾಗುತ್ತದೆ? ಅದಲ್ಲದೆ ಈ ಭಾರೀ ಸರಕನ್ನು ಹೊತ್ತು ಈ ಬೆಟ್ಟ ಗುಡ್ಡಗಳನ್ನು ದಾಟುವುದು ತುಂಬಾ ಕಷ್ಟಕರವೇ. ಹಾಗಾಗಿ ಪ್ರತಿ ಸಲದ ಪ್ರಯಾಣದಲ್ಲಿ ಮಾಡುವಂತೆ ಈ ಬೆಟ್ಟ ಗುಡ್ಡಗಳನ್ನು ದಾಟಲು ಎಷ್ಟು ಸಾಧ್ಯವೋ ಅಷ್ಟು ಸರಕನ್ನು ಇಲ್ಲಿಯೇ ಹಂಚಿ, ಮುಂದೆ ಹೋಗುವುದೇ ಸೂಕ್ತ ಎಂದು ಕಪ್ತಾನನು ನಿರ್ಧರಿಸಿ, ತಮ್ಮ ಸಿಬ್ಬಂದಿಯನ್ನು ಕರೆದು “ಸರಿಯಾದ ಸಮಯ ನೋಡಿ, ನಮ್ಮಲ್ಲಿರುವ ಸರಕನ್ನು ಇಲ್ಲಿಯೇ ಒಂದಿಷ್ಟು ಹಂಚಿ, ನಮ್ಮ ಸರಕಿನ  ಭಾರವನ್ನ ಮುಂದಿನ ಪ್ರಯಾಣಕ್ಕೆ ಅನುಕೂಲವಾಗುವಂತೆ ಕಡಿಮೆ ಮಾಡಿ ” ಎಂದು ಆದೇಶಿಸಿದನು.
          ಆಗ ತಾನೇ ತಂಗಾಳಿಯು ಎಲ್ಲೆಲ್ಲೂ ಆವರಿಸತೊಡಗಿತ್ತು. “ಅಬ್ಬಾ ಕೊನೆಗೂ ಬಂದೆಯಲ್ಲ” ಅನ್ನುತ್ತ ಬೆಟ್ಟದ ಮರಗಿಡಗಳು ಮೆಲ್ಲನೆ ತಮ್ಮ ರೆಂಬೆ ಕೊಂಬೆಯನ್ನ ಬೀಸಿ ಅದನ್ನು ಸ್ವಾಗತಿಸಿದವು. ದೂರದಿಂದಲೇ ತಂಗಾಳಿಯ ಆಗಮನವನ್ನು ಗ್ರಹಿಸಿದ ಸಿಬ್ಬಂದಿ, ಕಪ್ತಾನನ ಆದೇಶದಂತೆ ಇದೇ ಸರಿಯಾದ ಸಮಯ ಎಂದು ನಿರ್ಧರಿಸಿ, ತಮ್ಮಲ್ಲಿರುವ ಸರಕನ್ನು ತಂಗಾಳಿಯಲ್ಲಿ ತೇಲಿಬಿಡಲು ನಿರ್ಧರಿಸಿದವು.
          ಹಲವಾರು ತಿಂಗಳುಗಳಿಂದ ಒಂದಕ್ಕೊಂದು ಅಂಟಿಕೊಂಡು, ಬೇಸಿಗೆಯ ಧಗೆಯಲ್ಲಿ ಬೆಂದು, ನಿತ್ರಾಣವಾಗಿ ಕಪ್ಪು ಮೋಡಗಳಲ್ಲಿ ಬಂಧಿತವಾಗಿದ್ದ ಮಳೆಯ ಹನಿಗಳಿಗೆ, ಬಂಧನದ ಬಾಗಿಲುಗಳನ್ನು ತೆರೆಯುತ್ತಿದ್ದಂತೆಯೇ,  ನಿಧಾನಕ್ಕೆ ನುಗ್ಗಿಬಂದ ತಂಗಾಳಿಯು ಸೋಕಿದೊಡನೆಯೇ ಒಮ್ಮೆಲೇ ಎಲ್ಲಿಲ್ಲದ ಉತ್ಸಾಹದಿಂದ ಅವು ನಲಿದಾಡಿದವು, ಹೋದ ಜೀವ ಮತ್ತೆ ಬಂದಂಥ ಅನುಭವ ಅವಕ್ಕಾಗಿತ್ತು. ಈ ಮಧ್ಯೆ ಬಾಗಿಲ ಹತ್ತಿರವೇ ಇದ್ದ ಮಳೆಯ ಹನಿಯೊಂದು ತಂಗಾಳಿ ಒಳನುಗ್ಗುತ್ತಿದ್ದಂತೆಯೇ, ಒಮ್ಮೆಲೇ ಉತ್ಸಾಹದಿಂದ ಎಲ್ಲರಿಗಿಂತ ಮೊದಲೇ ಆಗಸದಲ್ಲಿ ಆಗಲೇ ಜಿಗಿದಾಗಿತ್ತು.
 "ಆಹಾ ಅದೆಂಥ ಅನುಭವ, ಎಲ್ಲೆಲ್ಲೂ ಆವರಿಸಿದ ತಂಗಾಳಿ, ಅಲ್ಲಲ್ಲಿ ಕಪ್ಪು ಮೋಡಗಳ ಮಧ್ಯದಲ್ಲಿ ಒಳ ನುಸುಳುವ ಸೂರ್ಯನ ಕಿರಣಗಳು. ಎಷ್ಟು ನೋಡಿದರೂ ಮುಗಿಯದ ಅನಂತ ಆಕಾಶ. ಅಷ್ಟೊಂದು  ದಿನ ಬಂಧಿಯಾಗಿ ನಿರ್ಜೀವವಾಗಿ ಅನುಭವಿಸಿದ ಹಿಂಸೆಯೆಲ್ಲ ಒಂದೇ ಕ್ಷಣದಲ್ಲಿ ಮರೆತು ಹೋಗುವ ಅನುಭವ. ಈ ತಂಗಾಳಿಯಲ್ಲಿ ಇನ್ನು ಎಷ್ಟು ಸಾಧ್ಯವೋ ಅಷ್ಟು ತೇಲಾಡಬೇಕು, ಇಡೀ ಅನಂತ ಆಕಾಶವೇ ಇನ್ನು ನಮಗೆ ಸೇರಿದ್ದು. ನಮ್ಮಿಚ್ಚೆಯಂತೆ ಇಲ್ಲಿ ಸ್ವತಂತ್ರವಾಗಿ ಇರಬಹುದು. ತನ್ನ ಸ್ನೇಹಿತರ ಜೊತೆ ಸೇರಿ ಈ ತಂಗಾಳಿಯಲ್ಲಿ ಹಾರಾಡಿ ಸಂತೋಷಪಡಬೇಕು. ಇನ್ನು ಮುಂದೆ ನಮ್ಮನ್ನು ತಡೆಯಲು ಇಲ್ಲಿ ಯಾರೂ ಇಲ್ಲ" ಎಂದು ಕೊಳ್ಳುತ್ತಾ ಆ ಮಳೆಯ ಹನಿ ಆ ಆಕಾಶದಲ್ಲಿ ತೇಲಿ, ಹಾರಾಡಿ ಸಂತೋಷಪಡಲು ಸಿದ್ದವಾಯಿತು.

image source: internet

          “ಅಯ್ಯೋ ಯಾರದು, ನನ್ನನ್ನು ಕೆಳಗೆ ನೂಕುತ್ತಿರುವುದು? ನನ್ನನ್ನ ಬಿಟ್ಟುಬಿಡಿ, ನಾನು ಇಲ್ಲೇ ಇರುತ್ತೇನೆ” ಎಂದು ಆ ಮಳೆಯ ಹನಿ ಕೂಗಾಡತೊಡಗಿತು. ಆಗಲೇ ಆ ಮಳೆಯ ಹನಿ ತನ್ನನ್ನು  ಬಂಧಿಸಿದ್ದ ಕಪ್ಪು ಮೋಡಗಳಿಂದ ಸಾಕಷ್ಟು ವೇಗವಾಗಿ ಕೆಳಗೆ ಬೀಳತೊಡಗಿತ್ತು. “ನಾನು ಇಲ್ಲೆಲ್ಲಾ ಹಾರಾಡಬೇಕು. ನನ್ನನ್ನು ಕೆಳಗೆ ನೂಕಬೇಡಿ” ಎನ್ನುತ್ತ ಮಳೆಯ ಹನಿ ಆ ಅದೃಶ್ಯ  ಶಕ್ತಿಯನ್ನ ಎಷ್ಟು ಬೇಡಿಕೊಂಡರೂ ಏನೂ ಪ್ರಯೋಜನವಾಗಲಿಲ್ಲ. ಮಳೆಯ ಹನಿ ವೇಗವಾಗಿ ಕೆಳಗಡೆ ನೂಕಲ್ಪಡುತ್ತಲೇ ಇತ್ತು. ಆ ಮಳೆಯ ಹನಿ ಒಮ್ಮೆ ಹಿಂತಿರುಗಿ ನೋಡಿದರೆ, ಆಗಲೇ ಅದರ ಜೊತೆಗಾರಲ್ಲಿ ಹಲವರು ತಂಗಾಳಿಯಲ್ಲಿ ಜಿಗಿದಾಗಿತ್ತು. “ ಎಲ್ಲಾ ಕೇಳಿ, ಯಾರೂ ಹೊರಗಡೆ ಜಿಗಿಯಬೇಡಿ, ಇಲ್ಲಿ ಯಾರೋ ನಮ್ಮನ್ನೆಲ್ಲ ಕೆಳಗಡೆ ತಳ್ಳುತ್ತಿದ್ದಾರೆ”  ಆ ಮಳೆಯ ಹನಿ ಎಷ್ಟು ಕೂಗಿದರೂ ಬಂಧನದ ಬಿಡುಗಡೆಯಿಂದ ಒಮ್ಮೆಲೇ ತಂಗಾಳಿಗೆ ಜಿಗಿದ ಸಂತೋಷದಲ್ಲಿದ್ದ ಅವುಗಳಿಗೆ ಅದು ಕೇಳಿಸಲೇ ಇಲ್ಲ.
          ಸೋಮ ಆಗ ತಾನೇ ತನ್ನ ಸೈಕಲ್ಲನ್ನೇರಿ ತನ್ನ ಗದ್ದೆಯ ಕಡೆ ಹೊರಟಾಗಿತ್ತು. ಹಲವಾರು ತಿಂಗಳುಗಳಿಂದ ಬೇಸಿಗೆಯ ಬಿಸಿಲಿನಲ್ಲಿ ಒಣಗಿ ಬೆಂಡಾಗಿದ್ದ ಆ ಗದ್ದೆಯ ಒಣಗಿದ ಮಣ್ಣಿನ ಮೇಲೆ ಮೊದಲ ಹನಿ ಬಿದ್ದು, ಆ ಮಣ್ಣಿನ ವಾಸನೆ ಸವಿಯುವುದು ಸೋಮನಿಗೆ ಚಿಕ್ಕಂದಿನಿಂದಲೂ ಬಹಳ ಇಷ್ಟವಾದದ್ದು. ಮೊದಲ ಮಳೆಯ ಹನಿಯ ಆ ಸಂತೋಷವನ್ನ ಅನುಭವಿಸಿ ಬಿತ್ತನೆಗೆ ಮುಂದಿನ ತಯಾರಿ ನಡೆಸಬೇಕೆಂಬುದೇ ಸೋಮ ಹೊರಟ ಉದ್ದೇಶ.
                ಆಗಲೇ ಸಾಕಷ್ಟು ಕೆಳಗಡೆ ಬಂದಿದ್ದ ಆ ಮೊದಲ ಮಳೆಯ ಹನಿಗೆ  ತನ್ನ ಕೆಳಗೆ ಹಲವಾರು ಕೆಂಪು ಮುಖದ ವಿಚಿತ್ರ ಸಣ್ಣ ಸಣ್ಣ ಜೀವಿಗಳು ಒಬ್ಬರನ್ನೊಬ್ಬರು ಗಟ್ಟಿಯಾಗಿ ಹಿಡಿದುಕೊಂಡು, ತಮ್ಮ ಬಾಯನ್ನು ತೆರೆದು ನಿಂತಿದ್ದಂತೆ ತೋರಿತು. ಅವರನ್ನು ನೋಡಿದರೆ ಯಾವುದೇ ಕ್ಷಣದಲ್ಲಿ ಬಾಯಾರಿಕೆಯಿಂದ ಸಾಯುವಂತೆ ಆ ಮಳೆಯ ಹನಿಗೆ ಅನಿಸುತ್ತಿತ್ತು. ಅವು ಎಷ್ಟೊಂದು ಕೃಷವಾಗಿದ್ದವೆಂದರೆ ಕೆಲವೊಮ್ಮೆ  ಸ್ವಲ್ಪವೇ ಜೋರಾಗಿ ಬೀಸುವ ಗಾಳಿಯೂ ಸಹ ಆ ಜೀವಿಗಳನ್ನು ಅತ್ತಿಂದಿತ್ತ ತಳ್ಳಿ, ಓಡಾಡಿಸಿ ಚೇಷ್ಟೆ ಮಾಡುತ್ತಿತ್ತು. ಅವರಲ್ಲಿ ಕೆಲವರು ಮಾತ್ರ ಎಲ್ಲೋ ಅವಿತುಕೊಂಡು ಹೇಗೋ ಗಾಳಿಯ ಚೇಷ್ಟೆಯಿಂದ ಪಾರಾಗುತ್ತಿದ್ದರು. ಅದನ್ನೆಲ್ಲಾ ನೋಡಿ ಆ ಮಳೆಯ ಹನಿ ತನ್ನ ಕಥೆ ಇಲ್ಲಿಗೇ ಮುಗಿಯಿತು, ಆ ಕೆಂಪು ಜೀವಿಗಳು ನನ್ನನ್ನು ಹೀರಿಬಿಡುತ್ತವೆ ಎನ್ನುತ್ತ ತನ್ನ ಅದೃಷ್ಟವನ್ನ ಶಪಿಸತೊಡಗಿತು.
          ಆ ಮಳೆಯ ಹನಿ ಹತ್ತಿರವೇ ಇದ್ದ ಒಂದು ಮರದ ರೆಂಬೆಗೆ ಹೇಗೋ ಅಂಟಿಕೊಂಡು ತನ್ನನ್ನು ಆ ಕೆಂಪು ಮುಖದ ಜೀವಿಗಳಿಂದ ರಕ್ಷಿಸಿಕೊಳ್ಳಲು ಪ್ರಯತ್ನಿಸಿದರೂ ಸ್ವಲ್ಪವೇ ಹೊತ್ತಿನಲ್ಲಿ ಜೋರಾಗಿ ಬೀಸಿದ ಗಾಳಿಯು ಯಾವುದೋ ಜನ್ಮದ ವೈರತ್ವವೆಂಬಂತೆ  ಇಡೀ ಮರವನ್ನ ಅಲುಗಾಡಿಸಿ ಬಿಟ್ಟಿತು, ಆ ಮರದ ರೆಂಬೆಗಳ ಅಲುಗಾಟಕ್ಕೆ ಆಯ ತಪ್ಪಿ ಮತ್ತೆ ಮಳೆಯ ಹನಿ ಕೆಳಗಡೆ ಬೀಳತೊಡಗಿತು.  ಮರದ ಕೆಳಗೆ ಆ ಕೆಂಪು ಮುಖದ ಜೀವಿಗಳು ತಮ್ಮ ಬಾಯನ್ನು ತೆರೆದು, ಜೋರಾಗಿ ಬೀಸುವ ಗಾಳಿಗೆ ಹಾರಿಹೋಗದಂತೆ ಒಬ್ಬರನ್ನೊಬ್ಬರು ಗಟ್ಟಿಯಾಗಿ ತಬ್ಬಿಕೊಂಡು ನಿಂತಿದ್ದವು. “ದಯವಿಟ್ಟು ನನ್ನನ್ನು ಬಿಟ್ಟುಬಿಡಿ, ನಾನು ನಿಮಗೇನೂ ಮಾಡಿಲ್ಲ” ಎಂದು ಆ ಮಳೆಯ ಹನಿ ಎಷ್ಟು ಬೇಡಿಕೊಂಡರೂ ಅಲ್ಲಿ ಯಾರೂ ಅದರ ಆಕೃಂದನವನ್ನ ಕೇಳುವವರಿರಲಿಲ್ಲ. ಕೆಲವೇ ಕ್ಷಣದಲ್ಲಿ  ಆ ಪ್ರದೇಶವೆಲ್ಲ ಕೂಗಾಡುವ, ಸಹಾಯಕ್ಕಾಗಿ ಬೇಡುವ ಚೀರಾಟದಿಂದ ತುಂಬಿ ಹೋಯಿತು.  ಆದರೆ ಅವುಗಳ ಆಕೃಂದನಕ್ಕೆ ಅಲ್ಲಿರುವ ಯಾರೂ ತೆಲೆಕೆಡಿಸಿಕೊಳ್ಳಲಿಲ್ಲ. ನಿಜವಾಗಿ ಅಲ್ಲಿರುವವರಿಗೆ ಇದು ಸಂತೋಷದ ಆಕೃಂದನವಾಗಿತ್ತು. ಅದು ಬಹಳ ದಿನದಿಂದ ಕೇಳಲು ಹಾತೊರೆಯುತ್ತಿದ್ದ  ನಿನಾದವಾಗಿತ್ತು !
 “ ಆಹಾ !  ಮೊದಲ ಮಳೆಯ ಮಣ್ಣಿನ ಸುವಾಸನೆಯೇ ಅಂಥದ್ದು, ಈ ಮಳೆಯ ಸಪ್ಪಳವನ್ನ ಕೇಳಿ ಎಷ್ಟು ದಿನಗಳಾಗಿ  ಹೋಗಿತ್ತು ” ಅನ್ನುತ್ತ ಅದೇ ಮರದ ಕೆಳಗಡೆ ನಿಂತಿದ್ದ ಸೋಮ, ಮೊದಲ ಮಳೆಯ ಬರುವಿಕೆಯನ್ನು ಸಂತೋಷದಿಂದ ಸ್ವಾಗತಿಸುತ್ತ ಅದಕ್ಕೆ ತನ್ನ ಮಯ್ಯೋಡ್ಡಿ ನಿಂತ.
         
         
           

ಭಾನುವಾರ, ಮೇ 20, 2012

ಒಂದು 'ಇರುವೆ'ಯ ಕಥೆ !!


ಮಳೆಗಾಲ  ಆಗ ತಾನೇ  ಪ್ರಾರಂಭವಾಗಿತ್ತು. ಊರಿನ ದೇವಸ್ಥಾನದ ಗರ್ಭಗುಡಿಯ ಹೊರ ಗೋಡೆಯ ಸಂದಿಯಲ್ಲಿ ಹಲವಾರು ವರ್ಷಗಳಿಂದ ಗೂಡು ಕಟ್ಟಿ ಆಶ್ರಯ ಪಡೆದಿದ್ದ ಇರುವೆಗಳಿಗೆ ಮಳೆಗಾಲಕ್ಕೆ ಬೇಕಾದ ಆಹಾರ ಸಂಗ್ರಹಣೆ ಆಗಲೇ ಆಗಿದ್ದರಿಂದ ಇನ್ನು ಮುಂದೆ ಅವುಗಳಿಗೆ ಸ್ವಲ್ಪ ವಿಶ್ರಾಂತಿಯ ಕಾಲವಾಗಿತ್ತು.  ಹಲವಾರು ತಲೆಮಾರುಗಳಿಂದ ಅಲ್ಲಿಯೇ ವಾಸವಾಗಿದ್ದರಿಂದ ಇರುವೆಗಳು ತಮ್ಮ ಗೂಡನ್ನು ತುಂಬಾ ವ್ಯವಸ್ಥಿತವಾಗಿಯೇ ನಿರ್ಮಿಸಿಕೊಂಡಿದ್ದವು.  ದಿನವೆಲ್ಲ ದುಡಿದು ಬರುವ ಕೆಲಸಗಾರ ಇರುವೆಗಳಿಗೆ ವಿಶ್ರಾಂತಿ ಕೋಣೆ . ರಾಣಿ ಇರುವೆಗೆ ವಿಶೇಷವಾಗಿ ನಿರ್ಮಿಸಿದ ಅರಮನೆ. ಇರುವೆಗಳಿಗೆ ಹೊಸ ಹೊಸ ಕೆಲಸಗಳಲ್ಲಿ ಪರಿಣಿತಿ ಪಡೆಯಲು ನಿರ್ಮಿಸಿದ ತರಬೇತಿ ಕೋಣೆಗಳು, ಮಳೆ ಗಾಳಿ  ಶತ್ರುಗಳಿಂದ ರಕ್ಷಿಸಿಕೊಳ್ಳಲು ವ್ಯವಸ್ಥಿತವಾದ  ರಕ್ಷಣಾ ವ್ಯವಸ್ಥೆ, ಆಹಾರ ಸಂಗ್ರಹಣೆಗಾಗಿ ವಿಶೇಷವಾದ  ಉಗ್ರಾಣ ಕೋಣೆಗಳು ಹೀಗೆ ಇರುವೆಗಳ ಸಾಮ್ರಾಜ್ಯ ಸುಸಜ್ಜಿತವಾಗಿತ್ತು. ದೇವಸ್ಥಾನದ ಪಕ್ಕದಲ್ಲಿಯೇ ಇರುವೆಗಳು ವಾಸವಾಗಿದ್ದರಿಂದ ಆಹಾರ ಸಂಗ್ರಹಣೆ ಅಷ್ಟೊಂದು ಕಷ್ಟಕರವಾಗಿರದಿದ್ದರೂ ಮಳೆಗಾಲದಂಥಹ ಸಂದರ್ಭಕ್ಕೆ ಆಹಾರ ಸಂಗ್ರಹಣೆ ಇರುವೆಗಳಿಗೆ ಅನಿವಾರ್ಯ ವಾಗುತ್ತಿತ್ತು. ಹಾಗಾಗಿ ಬೇಸಿಗೆ ಕಾಲವೆಲ್ಲ ಇರುವೆಗಳಿಗೆ ಆಹಾರ ಸಂಗ್ರಹಣೆಯದ್ದೇ ಕೆಲಸ. ಸತತವಾಗಿ ಬೇಸಿಗೆಯಲ್ಲಿ ದುಡಿದ ಇರುವೆಗಳಿಗೆ ಈಗ ಮಳೆಗಾಲದಲ್ಲಿ ಸ್ವಲ್ಪ ಬಿಡುವು ಸಿಕ್ಕಿತ್ತು.
ಈ ಮಧ್ಯೆ ಇರುವೆಗಳ ವಾರ್ಷಿಕ ಸಭೆ ಆಗ ತಾನೇ ಆರಂಭವಾಗಿತ್ತು. ವರ್ಷದಲ್ಲಿ ಒಂದೋ ಎರಡೋ ಇಂಥಹ ಬಿಡುವಿನ ಸಂದರ್ಭಗಳು ಒದಗುತ್ತಿದ್ದುದರಿಂದ ಇರುವೆಗಳಿಗೆ ಇದು ಭಾರೀ ಸಂತೋಷದ ಸಂದರ್ಭವಾಗಿತ್ತು. ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುವ ಸಾಮಾನ್ಯ ಇರುವೆಗಳಿಂದ ಹಿಡಿದು ದೊಡ್ಡ ಹಿರಿಯ ಅಧಿಕಾರಿ ಇರುವಗಳವರೆಗೆ  ಎಲ್ಲಾ ಒಟ್ಟಾಗಿ ಸೇರುವ ಸಂದರ್ಭ ಇದಾಗಿತ್ತು.  ಈ ಸಮಯದಲ್ಲಿ ಎಲ್ಲಾ ವಿಭಾಗದ ಇರುವೆಗಳಿಗೂ ಇಡೀ ವರ್ಷದ ತಮ್ಮ ತಮ್ಮ ಅನುಭವ ಹಂಚಿಕೊಳ್ಳಲು ಸಿದ್ದವಾಗುತ್ತಿದ್ದವು.  ಒಂದೆಡೆ ಸೈನ್ಯದಲ್ಲಿ  ಕೆಲಸ ಮಾಡುವ ಇರುವೆಗಳು ತಮ್ಮ ಸಾಹಸಗಳನ್ನು ಬಣ್ಣಿಸಲು ತಯಾರಿ ನಡೆಸಿದರೆ, ಮತ್ತೊಂದೆಡೆ ಆಹಾರ ಹುಡುಕುವ ಸಂಗ್ರಹಿಸುವ ಹೊಣೆ ಹೊತ್ತ ಇರುವೆಗಳ ತಂಡ ಎಷ್ಟೆಷ್ಟು ಎಲ್ಲೆಲ್ಲಿ ಆಹಾರ ಸಂಗ್ರಹವಾಯಿತು ಯಾವ ಯಾವ ಹೊಸ ಆಹಾರ ಸಿಗುವ ಸ್ಥಳದ ಪತ್ತೆಯಾಯಿತು ಎಂಬುದರ ಬಗ್ಗೆ ಸವಿವರವಾದ ವರದಿ ನೀಡಲು ಅಂಕಿ ಅಂಶಗಳ ಜೊತೆ  ತಮ್ಮ  ಸರದಿಗಾಗಿ ಎದುರು ನೋಡುತ್ತಿತ್ತು, ಇವರ ಜೊತೆ ಇರುವೆಗಳ ಗೂಡನ್ನು ಕಟ್ಟುವ, ರಿಪೇರಿ ಮಾಡುವ ಇರುವೆಗಳ ತಂಡ, ರಾಣಿಯ ಸೇವೆ ಹಾಗೂ ಇತರ ಮೇಲ್ವಿಚಾರಣೆ ಮಾಡುವ ಇರುವೆಗಳ ತಂಡ ಹೀಗೆ ಎಲ್ಲರೂ ತಮ್ಮ ತಮ್ಮ ಸಾಧನೆ ಹಾಗೂ ಹೊಸ ವಿಚಾರಗಳನ್ನು ಹಂಚಿ ಕೊಳ್ಳಲು ತುದಿಗಾಲಲ್ಲಿ ನಿಂತಿದ್ದರು.  
ಹೀಗಿರುವಾಗ ಅಲ್ಲಿದ್ದ ಒಂದು ಕೆಲಸಗಾರ ಇರುವೆಗೆ ಮಾತ್ರ ಇವೆಲ್ಲದರಲ್ಲಿ ಏನೂ ಉತ್ಸುಕತೆ ಇರಲಿಲ್ಲ. ಬಹಳ ದಿನದಿಂದ ತನ್ನಲ್ಲಿ ಯೋಚಿಸಿ ಸಿದ್ದಪಡಿಸಿರುವ ವಿಚಾರವನ್ನೂ ಎಲ್ಲರ ಮುಂದೆ ಇಡಬೇಕೆಂಬುದು ಆ ಇರುವೆಯ ಆಸೆ ಯಾಗಿತ್ತು. ಹಾಗೋ ಹೀಗೋ ಯಾವುದೋ ದೊಡ್ಡ ದೊಡ್ಡ ಅಧಿಕಾರಿ ಇರುವೆಗಳನ್ನು ಕಾಡಿ ಬೇಡಿ ಕೆಲವು ನಿಮಿಷಗಳ ಅವಕಾಶವನ್ನು ಗಳಿಸಿಕೊಂಡಿತ್ತು. ತನಗೆ ಸಿಕ್ಕ ಅಲ್ಪ ಸಮಯದಲ್ಲಿ ಕೆಲಸಗಾರ ಇರುವೆ ತನ್ನ ವಿಚಾರವನ್ನ ಸಭೆಯ ಮುಂದೆ ಇಡಲು ಸಿದ್ದವಾಯಿತು.  “ ನೋಡಿ ನಾನು ಸಾಮಾನ್ಯ ಕೆಲಸಗಾರ ಇರುವೆ, ನಿತ್ಯ ಆಹಾರ ಹೊತ್ತೊಯ್ದು ಗೂಡಿನಲ್ಲಿ ಸಂಗ್ರಹ ಮಾಡುವುದಷ್ಟೇ ನನ್ನ ಕೆಲಸ ಆದರೂ ಹೊರ ಜಗತ್ತಿನಲ್ಲಿ ನನಗೆ ತೋಚಿದ ಕೆಲವೊಂದು ವಿಚಾರಗಳನ್ನು ತಮ್ಮ ಮುಂದೆ ಇಡಬೇಕೆಂದು ಇಲ್ಲಿ ಬಂದಿದ್ದೇನೆ. ನಾವು ಇಡೀ ವರ್ಷ ಬರೀ ಕೆಲಸವನ್ನು ಬಿಟ್ಟು ನಾವೇನೂ ಮಾಡುವುದೇ ಇಲ್ಲ. ಅಲ್ಲಿ ಇಲ್ಲಿ ಆಹಾರ ಹುಡುಕುವದು, ಅದನ್ನ ಗೂಡಿಗೆ ಹೊತ್ತೊಯ್ಯುವುದು , ಅದೇ ಆಹಾರವನ್ನ ಸ್ವಲ್ಪ ತಿಂದು ಮಲಗಿ ಮರುದಿನ ಮತ್ತೆ ಪುನಃ ಅದೇ ಕೆಲಸ. ಇದನ್ನ ಬಿಟ್ಟು ನಾವು ಬೇರೇನೂ ಯೋಚಿಸುದುದೇ ಇಲ್ಲ. ಈ ನಿತ್ಯದ ದಿನಚರಿಯಲ್ಲಿ ಸ್ವಲ್ಪವಾದರೂ ಬದಲಾವಣೆ ಬೇಡವೇ?” ಎನ್ನುತ್ತಿದ್ದಂತೆ ಅಲ್ಲಿಯೇ ಪಕ್ಕದಲ್ಲಿದ್ದ ಹಿರಿಯ ಇರುವೆಯೊಂದು “ ಅದೆಲ್ಲಾ ಸರಿ ನಿನ್ನ ಪ್ರಕಾರ ಅದನ್ನಲ್ಲದೆ ನಾವೆಲ್ಲ ಏನು ಮಾಡುಬೇಕು ?” ಎಂದಿತು.  “ ನೋಡಿ ನಾನು ಆಹಾರ ಹುಡುಕಲು ಹೋಗುವಲ್ಲೆಲ್ಲ   ನೀವೂ ನೋಡಿರುವ ಹಾಗೆ ಅಲ್ಲಿರುವ ಬೃಹದಾಕಾರದ ಎರಡು ಕಾಲಿನ ಜೀವಿಗಳನ್ನು ನೀವೆಲ್ಲರೂ ನೋಡಿದ್ದೀರಿ ಅಂದು ಕೊಂಡಿದ್ದೀನಿ. ನನ್ನ ಪ್ರಕಾರ ಅವರ ಜೀವನ ಶೈಲಿಯೂ ನಮ್ಮಂತೆ ಇದೆ. ಅವರೂ ನಮ್ಮ ಹಾಗೆ ವ್ಯವಸ್ಥಿತವಾಗಿ ಮನೆಗಳನ್ನ ಕಟ್ಟುತ್ತಾರೆ. ನಮ್ಮ ಹಾಗೇ ಒಟ್ಟಾಗಿ ಕೆಲಸಗಳನ್ನ ಮಾಡುತ್ತಾರೆ.  ಅಲ್ಲದೇ ಇನ್ನೂ ಹಲವಾರು ವಿಷಯಗಳಲ್ಲಿ ನಮಗೂ ಅವರಿಗೂ ಸಾಮ್ಯತೆ ಇದೆ ಎನ್ನುವುದು ನನ್ನ ಅನಿಸಿಕೆ. ನಾವು ಹೇಗಾದರೂ ಮಾಡಿ ಅವರ ಹೇಗೆ ಜೀವಿಸುತ್ತಾರೆ ಎನ್ನುವುದನ್ನು ಸ್ವಲ್ಪ ಅಧ್ಯಯನ ಮಾಡಿದರೆ ನಾವು ಅವರಿಂದ ಹೊಸತನ್ನು ಏನಾದರೂ ಕಲಿಯ ಬಹುದಲ್ಲವೇ?” ಎಂದು ಆ ಕೆಲಸಗಾರ ಇರುವೆಯು ಹೇಳುತಿದ್ದಂತೆಯೇ ಕೆಲವರು ಆಶ್ಚರ್ಯದಿಂದ “ಅರೇ ಇದೆಲ್ಲಾ ನಿಜವ, ನಾವು ಅಲ್ಲೇ ಆಹಾರ ತರಲು ಹೋದರೂ ಇದನ್ನೆಲ್ಲಾ ನೋಡಿಯೇ ಇಲ್ಲವಲ್ಲ. ಈ ಇರುವೆ ಸುಳ್ಳು ಹೇಳುತ್ತಿರಬೇಕು” ಅಂದರೆ ಇನ್ನು ಕೆಲವರು “ಹೀಗೂ ಉಂಟೆ ?” ಎನ್ನುತ್ತ  ಆ ಇರುವೆಯ ಬುದ್ದಿವಂತಿಕೆಯನ್ನು ಹೊಗಳಿದರು.  ಅಷ್ಟರಲ್ಲೇ ಗೊಂದಲದಲ್ಲಿ ಮುಳುಗಿದ್ದ ಸಭೆಯನ್ನು ಉದ್ದೇಶಿಸಿ ಅಲ್ಲಿರುವ ಹಿರಿಯ ಇರುವೆಗಳು ಏನನ್ನೋ ನಿರ್ಧರಿಸಿದವರಂತೆ “ನಾವು ಹಿರಿಯರು ಸೇರಿ ಒಂದು ನಿರ್ಧಾರಕ್ಕೆ ಬಂದಿದ್ದೇವೆ. ಈ ಇರುವೆಯ ಬುದ್ಧಿಶಕ್ತಿ ಮೆಚ್ಚುವಂತದ್ದೆ. ಇದನ್ನೆಲ್ಲಾ ನಾವು ಇಲ್ಲಿಯವರೆಗೆ ಯೋಚಿಸಿಯೇ ಇರಲಿಲ್ಲ. ಈ ಇರುವೆಯ ಜೊತೆ ಇದರಲ್ಲಿ ಆಸಕ್ತಿಯುಳ್ಳ ಒಂದಿಷ್ಟು ಇರುವೆಗಳು  ಜೊತೆಗೂಡಿ ಇದರ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಬೇಕೆಂದು ನಿರ್ಧರಿಸಲಾಗಿದೆ” ಎನ್ನುತ್ತಿದ್ದಂತೆ ಆ ಕೆಲಸಗಾರ ಇರುವೆಯ ಸಂತೋಷಕ್ಕೆ ಪಾರವೇ ಇರಲಿಲ್ಲ.
ಆ ಕೆಲಸಗಾರ ಇರುವೆಯ ನೇತೃತ್ವದಲ್ಲಿ ಸಣ್ಣ ಸಣ್ಣ ತಂಡಗಳಾಗಿ ವಿಭಾಗ ಮಾಡಿಕೊಂಡು ಇರುವೆಗಳ ಗುಂಪು ದೇವಸ್ಥಾನದ ಸುತ್ತೆಲ್ಲ ಬೀಡು ಬಿಟ್ಟವು. ಇಷ್ಟು ದಿನ ಅಲ್ಲಿ ಬರಿ ಆಹಾರ ಹೊತ್ತೊಯ್ಯುವುದನ್ನ ಬಿಟ್ಟರೆ ಬೇರೇನೂ ಮಾಡಿರದ ಆ ಇರುವೆಗಳಿಗೆ ಅಲ್ಲಿ ಇಷ್ಟೊಂದು ವೈಚಿತ್ರ್ಯಗಳಿದೆಯ ಎಂದು ಆಶ್ಚರ್ಯವಾಯಿತು. ಜೊತೆಗೆ ಬರೀ ಕೆಲಸ ಕೆಲಸ ಎಂದು ಬೇಸತ್ತಿದ್ದ ಅವಕ್ಕೆ ಹೊಸದನ್ನ ನೋಡಿ ತಿಳಿಯಲು ವಿಶೇಷವಾದ ಆಸಕ್ತಿಯೂ ಬೆಳೆದಿತ್ತು.  ಬಹಳ ದಿನಗಳವರೆಗೆ  ಅಲ್ಲಿನ ವೈಚಿತ್ರ್ಯಗಳನ್ನು ಅಧ್ಯಯನ  ಮಾಡುವ ಉದ್ದೇಶ ಹೊಂದಿದ್ದರೂ ಮಳೆಗಾಲ ಜೋರಾಗಿ ಪ್ರಾರಂಭವಾದ್ದರಿಂದ ಇರುವೆಗಳಿಗೆ ಅಲ್ಲಿ ಹೆಚ್ಚಿನ ದಿನ ಇರಲಾಗದೆ ತಮ್ಮ ಗೂಡಿಗೆ ಮರಳ ಬೇಕಾಯಿತು.  ಹೀಗಿದ್ದರೂ ಈಗಾಗಲೇ ಸಂಗ್ರಹಿಸಿರುವ ಮಾಹಿತಿಗಳು ಆ ಬುದ್ದಿವಂತ ಕೆಲಸಗಾರ ಇರುವೆಗೆ ತನ್ನ ವಿಚಾರಗಳನ್ನು ಸಮರ್ಥಿಸಿಕೊಳ್ಳಲು ಮತ್ತಷ್ಟು ಇಂಬು ನೀಡಿತ್ತು. ತಾನು ಅಅಧ್ಯಯನ ಮಾಡಿದ ಮಾಡಿದ ಹೊಸ ಮಾಹಿತಿಗಳೊಂದಿಗೆ ಈ ವಿಷಯದ ಕುರಿತು ಚರ್ಚಿಸಲು ವಿಶೇಷವಾಗಿ ಕರೆದಿದ್ದ ಸಭೆಗೆ ತನ್ನ ತಂಡದೊಂದಿಗೆ  ತೆರಳಿತು.  ಎಲ್ಲಾ ಹಿರಿಯ ಇರುವೆಗಳ ಜೊತೆ ರಾಣಿ ಇರುವೆಯೂ ಇದರಲ್ಲಿ ವಿಶೇಷ ಆಸಕ್ತಿ ತೋರಿಸಿದ್ದರಿಂದ ಸಭೆಗೆ ಮತ್ತಷ್ಟು ಮೆರಗು ಬಂದಿತ್ತು. ಸಭೆಗೆ ಎಲ್ಲರೂ ಆಗಮಿಸುತ್ತಿದ್ದಂತೆಯೇ ಆ ಕೆಲಸಗಾರ ಇರುವೆ ತನ್ನ ಅಧ್ಯಯನದ ವರದಿಯನ್ನು ಒಪ್ಪಿಸಲು ಸಿದ್ದವಾಯಿತು. “ ನಾವು ನಮಗೆ ಸಿಕ್ಕ ಸ್ವಲ್ಪ ಸಮಯದಲ್ಲಿ ಅಲ್ಲಿ ಕಂಡದ್ದೆನೆಂದರೆ ಅಲ್ಲಿರುವ ಆ ಜೀವಿಗಳಿಗೂ ನಮಗೂ ತುಂಬಾ ಸಾಮ್ಯತೆ ಇದೆ. ಅವರು ವಾಸಿಸುವ ಸ್ಥಳವು ನಾವು ನಮ್ಮ ಗೂಡನ್ನು ನಿರ್ಮಿಸಿದಂತೆಯೇ ತೋರುತ್ತದೆ. ಅವರ ಆಕಾರಕ್ಕೆ ತಕ್ಕಂತೆ ಅವು ಬೃಹದಾಕಾರವಾಗಿ ನಿರ್ಮಿಸಲಾಗಿದೆ. ನಾವು ಒಂದೊಂದು ಕೋಣೆಯನ್ನು ಸುತ್ತಿ ಪರೀಕ್ಷಿಸಲು  ದಿನಗಳೇ ಹಿಡಿದವು. ಇನ್ನು ಅವರು ನಮ್ಮಂತೆಯೇ ಒಟ್ಟಾಗಿ ಕೆಲಸಗಳನ್ನ  ಮಾಡುತ್ತಾರೆ.ಎಲ್ಲರೂ ಒಟ್ಟಾಗಿಯೇ ನಮ್ಮ ಹಾಗೇ ಇರುತ್ತಾರೆ. ಅಲ್ಲದೇ ಅವರೂ ನಮ್ಮ ಹಾಗೆಯೇ ಬೇರೆ ಬೇರೆ ವಿಭಾಗಗಳನ್ನು ಮಾಡಿ ಕೆಲಸಗಳನ್ನು ನಮ್ಮ ಹಾಗೆ ಹಂಚಿಕೊಳ್ಳುತ್ತಾರೆ ಅಂತ ಮೇಲ್ನೋಟ ದಿಂದ ಅನಿಸುತ್ತದೆ.” “ಅವರೂ ನಮ್ಮ ಹಾಗೇ ಜೀವಿಸುತ್ತಾರೆ ಅಂದ ಹಾಗಾಯಿತು. ಹಾಗಿದ್ದರೆ ನಮಗೂ ಅವರಿಗೂ ಏನಾದರೂ ಪೂರ್ವ ಜನ್ಮದ ಸಂಬಂಧ ಇದೆಯಾ ?” ಎಂದು ಒಂದು ಹಿರಿಯ ಇರುವೆಯು ನಡುವೆಯೇ ಬಾಯಿ ಹಾಕಿ ಹೇಳಿತು. “ಇವು ಬರಿ ಸಾಮ್ಯತೆಗಳಷ್ಟೇ ನಮ್ಮಲ್ಲೂ ಅವರಲ್ಲೂ ತುಂಬಾ ವ್ಯತ್ಯಾಸವಿದೆ. ಅವರು ನಮಗಿಂತ ತುಂಬ ಮುಂದುವರಿದಿರುವಂತೆ ತೋರುತ್ತದೆ. ಅವರು ಏನೇನೋ ಇನ್ನೂ ನೋಡಿರದ ವಸ್ತುಗಳನ್ನ ಕೆಲಸ ಮಾಡಲಿಕ್ಕೆ ಉಪಯೋಗಿಸುತ್ತಾರೆ. ಅವರು ಯಾವಾಗಲೂ ಬಿಡುವಿನಿಂದ ಹಾಯಾಗಿರುವಂತೆ ತೋರುತ್ತದೆ. ಆಗೊಮ್ಮೆ ಈಗೊಮ್ಮೆ ಮಾತ್ರ ನಮ್ಮ ಹಾಗೆ ಕೆಲಸ ಮಾಡುವುದನ್ನ ನೋಡಿದ್ದೇನೆ ಅದನ್ನ ಬಿಟ್ಟರೆ ಉಳಿದೆಲ್ಲ ಸಮಯ ಅವರು ಮೋಜು ಮಸ್ತಿಯಲ್ಲೇ ಕಾಲ ಕಳೆಯುವಂತೆ ತೋರುತ್ತದೆ. ಇದನ್ನೆಲ್ಲಾ ಸಾಧಿಸಲು ಅವರಲ್ಲಿ ವಿಶೇಷವಾದ ಶಕ್ತಿ ಇರುವಂತೆ ತೋರುತ್ತದೆ. ಇನ್ನೊಂದು ಪ್ರಮುಖವಾಗಿ ತೋಚಿದ್ದೆಂದರೆ ನಾವು ಆಹಾರಕ್ಕಾಗಿ ಹೋಗುವ ಪ್ರದೇಶವು ವಿಶೇಷವಾದ ಸ್ಥಳವೆಂದು ತೋರುತ್ತದೆ. ಅಲ್ಲಿಗೆ ಬರುವವರೆಲ್ಲರೂ ಅಲ್ಲಿರುವ ಕೋಣೆಯಲ್ಲಿನ ವಿಶೇಷ ಆಕಾರದ ಕಲ್ಲಿನ ಮೂರ್ತಿಯಂತದ್ದಕ್ಕೆ ತಮ್ಮ ಪ್ರಾರ್ಥನೆ ಸಲ್ಲಿಸುತ್ತಾರೆ. ಇದರ ಹಿಂದಿನ ಉದ್ದೇಶ ಸ್ಪಷ್ಟವಾಗಿ ತೋಚದಿದ್ದರೂ ಆ ಕಲ್ಲಿನ ಮೂರ್ತಿಗೆ ಏನೋ ವಿಶೇಷವಾದ ಶಕ್ತಿ ಇರುವಂತೆ ತೋರುತ್ತದೆ. ಬಹುಷಃ ಆ ವಿಶೇಷ ಮೂರ್ತಿಯೇ ಅವರಿಗೆ ವಿಶಿಷ್ಟವಾದ ಶಕ್ತಿಯನ್ನ ದಯಪಾಲಿಸಿದೆ ಅಂತ ಮೇಲ್ನೋಟಕ್ಕೆ ಕಾಣಿಸುತ್ತದೆ. ಇನ್ನುಳಿದಂತೆ ಅವರು ಎಲ್ಲದರಲ್ಲೂ ಸಂತುಷ್ಟವಾಗಿ ಇರುವಂತೆ ತೋರುತ್ತದೆ. ಅವರು ತಮ್ಮ ಕೆಲಸದಲ್ಲಿ ಏನೇನು ಹೊಸ ಹೊಸ ವಿಧಾನವನ್ನ ಅಳವಡಿಸಿಕೊಂಡಿದ್ದಾರೆ ಹೇಗೆ ಅವರು ಅಷ್ಟೊಂದು ಬಿಡುವಿನ ಸಮಯವನ್ನ, ಸಂತೋಷವನ್ನ ಯಾವಾಗಲೂ ಹೊಂದಿರುತ್ತಾರೆ ಹೀಗೆ ಇವನ್ನೆಲ್ಲ  ಮತ್ತಷ್ಟು ಅಧ್ಯಯನ ಮಾಡಿದರೆ ನಾವು ಇನ್ನಷ್ಟು ಹೊಸತನ್ನ ಕಲಿಯಬಹುದು ನಾವು ನಮ್ಮ ಅವಿರತ ದುಡಿಮೆಗೆಯ ಬದುಕಿಗೆ ಸ್ವಲ್ಪ ಬದಲಾವಣೆ ತರಬಹುದು ಎನ್ನುವುದು ನಮ್ಮ ಇಷ್ಟು ದಿನಗಳ ಅಧ್ಯಯನದಿಂದ ಅನಿಸುತ್ತದೆ”. ಇಷ್ಟು ಹೇಳಿ ಆ ಕೆಲಸಗಾರ ಇರುವೆಯು ತನ್ನ ಜಾಗದಲ್ಲಿ ಕುಳಿತುಕೊಳ್ಳುತ್ತಿದ್ದಂತೆಯೇ  ಸಭೆಯಲ್ಲಿ ಗೊಂದಲಗಳು ಕಾಣಿಸಿಕೊಂಡಿತು. ಸ್ವಲ್ಪ ಸಮಯದ ನಂತರ ಒಬ್ಬ ಹಿರಿಯ ಇರುವೆಯು ಎದ್ದು ನಿಂತು “ ತಮ್ಮ ಬುದ್ದಿಶಕ್ತಿ ಹಾಗೂ ಸಾಹಸಗಳಿಗೆ ನಾವು ಬಹಳ ಮೆಚ್ಚಿದ್ದೇವೆ. ಆದರೆ ಸಭೆಯಲ್ಲಿ ಈ ಗಾಢವಾದ ವಿಷಯದ ಬಗ್ಗೆ ಸ್ವಲ್ಪ ಗೊಂದಲ ಇರುವುದರಿಂದ ತಮ್ಮ ಈ ವರದಿಯನ್ನ ಅಧ್ಯಯನ ಮಾಡಿ ಸಾಧಕ ಬಾಧಕಗಳನ್ನು ಚರ್ಚಿಸಿ ಮುಂದಿನ ನಿರ್ಧಾರ ಮಾಡಲು ನಿರ್ಧರಿಸಿದ್ದೇವೆ” ಎನ್ನುತ್ತಿದ್ದಂತೆ ಅಲ್ಲಿದ್ದ ಉಳಿದ ಇರುವೆಗಳೂ ಅದು ಸರಿ ಎನ್ನುತ್ತ ತಲೆ ಆಡಿಸಿದವು. 
image source: internet

ಒಂದು ವಾರದ ಗಹನವಾದ ಚರ್ಚೆಯ ನಂತರ ಹಿರಿಯ ಇರುವೆಗಳ ಗುಂಪು ತಮ್ಮ ನಿರ್ಧಾರ ಪ್ರಕಟಿಸಲು ಮತ್ತೊಮ್ಮೆ ಸಭೆಯನ್ನು ಕರೆಯಲಾಯಿತು. ಒಂದು ಹಿರಿಯ ಇರುವೆ ಎದ್ದು ನಿಂತು “ ಬಹಳ ಅಧ್ಯಯನ, ಚರ್ಚೆಯ ನಂತರ ನಾವು ಈ ವರದಿಯ ಕೆಲವು ಮುಖ್ಯ ಅಂಶಗಳನ್ನು ಕಾರ್ಯರೂಪಕ್ಕೆ ತರಲು ನಿರ್ಧರಿಸಿದ್ದೇವೆ. ಇನ್ನು ಈ ವರದಿಯಲ್ಲಿ ಹೇಳಿದಂತೆ ನಮ್ಮ ಬಿಡುವಿಲ್ಲದ ಕೆಲಸವನ್ನ ಕಡಿಮೆ ಮಾಡಿ ಬಿಡುವಿನ ಸಮಯ ಹೆಚ್ಚುಮಾಡಲು ಏನಾದರೂ ಮಾಡಬೇಕು, ಅದಕ್ಕಾಗಿ ವಿಶೇಷ ವಸ್ತುಗಳನ್ನು ಕೆಲಸಕ್ಕೆ ಸಹಕರಿಸಲು ಬಳಸಬೇಕು  ಎನ್ನುವ ವಿಚಾರ ನಮಗೆ ಸರಿ ಹೋಗುವಂತೆ ತೋರುತ್ತಿಲ್ಲ. ಅವು ನಮ್ಮಲ್ಲಿ ಆಲಸ್ಯವನ್ನು ಹೆಚ್ಚು ಮಾಡಿ ಇಡೀ ಜೀವನವನ್ನ ಮೋಜಿನಲ್ಲಿ ಕಳೆದು ನಮ್ಮ ಇರುವೆ ಕುಲಕ್ಕೆ ಅದು ಬಾಧಕ ವಾಗುವ ಸಾಧ್ಯತೆ ಇರುವುದರಿಂದ ಆ ವಿಚಾರವನ್ನ ಹಾಗೂ ಅದರ ಬಗ್ಗೆ ಹೆಚ್ಚಿನ ಅಧ್ಯನಯನ ಮಾಡುವುಡು ಬೇಡ ಎನ್ನುವುದು ನಮ್ಮೆಲ್ಲರ ಸರ್ವಾನುಮತದ ಅಭಿಪ್ರಾಯ. ಇನ್ನು ಮುಖ್ಯವಾದ ಅಂಶವೆಂದರೆ ಅಲ್ಲಿನ ಜೀವಿಗಳು ಪ್ರಾರ್ಥಿಸುವ ವಿಶೇಷ ಶಕ್ತಿಯ ಮೂರ್ತಿಗಳು. ಈ ವಿಚಾರ ನಮ್ಮಲ್ಲಿ ಬಹಳ ಚರ್ಚೆಗೆ ಒಳಪಟ್ಟಿತು. ನಾವು ಇಷ್ಟುದಿನ ಇದನ್ನ ಯೋಚಿಸಿಯೇ ಇರಲಿಲ್ಲ. ನಮಗೆಲ್ಲ ಜನ್ಮ ನೀಡಿ ವಿಶೇಷ ಶಕ್ತಿ ಹೊಂದಿರುವ ನಮ್ಮ ರಾಣಿ ಇರುವೆಯನ್ನ ಪೂಜಿಸಲು ವಿಶೇಷವಾದ ಸ್ಥಳದ ನಿರ್ಮಾಣ ಮಾಡಬೇಕು ಹಾಗೂ ರಾಣಿಯ ಮೂರ್ತಿಯನ್ನು ಅಲ್ಲಿ ನಿರ್ಮಿಸಿ ಅದನ್ನ ಅಲ್ಲಿ ನಿತ್ಯವೂ ಮತ್ತಷ್ಟು ಕೆಲಸ ಮಾಡಲು ಶಕ್ತಿ ಕೊಡುವಂತೆ ಎಲ್ಲರೂ ಪ್ರಾರ್ಥಿಸಬೇಕು. ಅಲ್ಲದೇ ಇಂತಹ ಅಪೂರ್ವ ಬುದ್ದಿವಂತಿಕೆ  ಪ್ರದರ್ಶಿಸಿದ ಈ ಕೆಲಸಗಾರ ಇರುವೆಗೆ ವಿಶೇಷ ಬಹುಮಾನದ ಜೊತೆಗೆ  ರಾಣಿಯನ್ನು  ಪೂಜಿಸಲು ನಿರ್ಮಾಣ ಈ ಮಾಡುವ ವಿಶೇಷ ಸ್ಥಳದ ಉಸ್ತುವಾರಿಯ ಭಾಗ್ಯವನ್ನೂ ವಹಿಸಿಕೊಳ್ಳಬೇಕು ಎನ್ನುವುದು ನಮ್ಮ ನಿರ್ಧಾರ” ಎಂದು ಹೇಳುತ್ತಿದ್ದಂತೆಯೇ ಸಭೆಯಲ್ಲಿ ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿ ಆ ಕೆಲಸಗಾರ ಇರುವೆಯ ಬುದ್ಧಿವಂತಿಕೆಯನ್ನ ಹಾಗೂ ಹಿರಿಯ ಇರುವೆಗಳ ಅನುಭವದ ನಿರ್ಧಾರವನ್ನ ಮೆಚ್ಚಿದರು. ಇದರ ಜೊತೆಗೆ ರಾಣಿಯ ಪೂಜಾ ಸ್ಥಳ ಕಟ್ಟಲು ನೂರಾರು ಇರುವೆಗಳು ತಾ ಮುಂದು ತಾ ಮುಂದು ಎಂದು ನನ್ನನ್ನೂ ಈ ಕೆಲಸಕ್ಕೆ ಸೇರಿಸಿಕೋ ಎನ್ನುತ್ತ ಆ ಬುದ್ಧಿವಂತ ಕೆಲಸಗಾರ ಇರುವೆಯನ್ನ ಓಲೈಸಲು ಸಾಲಾಗಿ ನಿಂತವು.